ಬೆಂಗಳೂರು: ಸಿಲಿಕಾನ್ ಸಿಟಿಯ ಸೌಂದರ್ಯವನ್ನು ಸ್ವತಃ ಸಚಿವರು ಹಾಗೂ ಬಿಡಿಎ ಅಧ್ಯಕ್ಷರ ಬೆಂಬಲಿಗರೇ ಹಾಳು ಮಾಡುತ್ತಿದ್ದು, ನ್ಯಾಯಾಲಯ ಆದೇಶ ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ದೂರು ಸಲ್ಲಿಸಲಾಗಿದೆ.
ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಜನತಾ ಪಕ್ಷದ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಎನ್.ನಾಗೇಶ್ ದೂರು ಸಲ್ಲಿಕೆ ಮಾಡಿದ್ದು, ಹೈಕೋರ್ಟ್ ಆದೇಶ ಇದ್ದರೂ, ಸ್ವತಃ ಸಚಿವರು,ಬಿಡಿಎ ಅಧ್ಯಕ್ಷರ ಬೆಂಬಲಿಗರು ಬೆಂಗಳೂರು ಸೌಂದರ್ಯ ಹಾಳು ಮಾಡುತ್ತಿದ್ದು, ಈ ಬಗ್ಗೆ ಕ್ರಮ ಜರುಗಿಸುವಂತೆ ಮನವಿ ಮಾಡಿದರು.
ಬೆಂಗಳೂರು ನಗರದಲ್ಲಿ ಖಾಸಗಿ ಜಾಹೀರಾತು ಏಜೆನ್ಸಿಗಳು ರಾಜಕಾರಣಿಗಳ, ಸಿನೆಮಾ ಸೆಲೆಬ್ರಿಟಿಗಳ, ಹುಟ್ಟು ಹಬ್ಬ, ಹೊಸವರ್ಷದ ಆಚರಣೆ, ಪ್ರತಿಭಟನೆ ಮುಂತಾದ ಸಂದರ್ಭಗಳ ನೆಪದಲ್ಲಿ ಬೇಕಾಬಿಟ್ಟಿ ಜಾಹಿರಾಹಿತುಸಹಿತ ಫ್ಲೆಕ್ಸ್, ಕಟೌಟ್, ಬ್ಯಾನರ್‌ಗಳನ್ನು ಅಳವಡಿಸಲಾರಂಭಿಸಿವೆ. ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ಬಂದರೂ ಸಹ, ಶಾಸಕರು, ಸಚಿವರು, ಹಾಗೂ ಪಾಲಿಕೆಯ ಮಾಜಿ ಸದಸ್ಯರುಗಳು ಮತ್ತು ಇತರೆ ರಾಜಕಾರಣಿಗಳು ಇದನ್ನು ಬೆಂಬಲಿಸಿ, ಕಂಡೂ ಕಾಣದಂತೆ ಕುಳಿತಿದ್ದಾರೆ. ವಾರ್ಡ್ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ಈ ಕುರಿತು ಪಾಲಿಕೆಯ ಮುಖ್ಯ ಆಯುಕ್ತರು ಎಫ್‌ಐಆರ್ ದಾಖಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು, ಮಾಧ್ಯಮಗಳಲ್ಲಿ ಪ್ರಚಾರಕ್ಕಾಗಿ ಸೀಮಿತವಾಗಿದೆ. 8 ವಲಯಕ್ಕೆ ಸಂಬಂಧಿತ ಅಧಿಕಾರಿಗಳು ಸ್ಥಳೀಯ ರಾಜಕಾರಣಿಗಳಿಗೆ ಬೆಂಬಲವಾಗಿದ್ದು, ಆಡಳಿತಾರೂಢ ಸರ್ಕಾರವೇ ಅತ್ಯಂತ ಹೆಚ್ಚಾಗಿ ಬ್ಯಾನರ್‌ಗಳನ್ನು ಅಳವಡಿಸುತ್ತಿದ್ದಾರೆ ಎಂದು ಹೇಳಿದರು.
ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಬೆಂಬಲಿಗರು, ಶಾಂತಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಬಿಡಿಎ ಅಧ್ಯಕ್ಷ ಹ್ಯಾರಿಸ್ ಸೇರಿದಂತೆ ಹಲವರು ಹೊಸವರ್ಷದ ಆಚರಣೆಯಲ್ಲಿ ಬ್ಯಾನರ್ ಗಳನ್ನು ರಾಜಾರೋಷವಾಗಿ ನಗರದಾದ್ಯಂತ ರಾರಾಜಿಸುವಂತೆ ಮಾಡಿದ್ದಾರೆ ಎಂದರು.
ಈ ಹಿಂದೆ 2018ರ ಆಗಸ್ಟ್ ತಿಂಗಳಿನಲ್ಲಿ ನಗರದ ಸೌಂದರ್ಯಕ್ಕೆ ಮಾರಕವಾಗಿರುವ ನಗರದ ಎಲ್ಲಾ ಅನಧಿಕೃತ ಜಾಹೀರಾತುಗಳನ್ನು ತೆರವುಗೊಳಿಸಲು ಹೈಕೋರ್ಟ್ ಆದೇಶ ಹೊರಡಿಸಿತ್ತು. ಅದೇ ಸಮಯದಲ್ಲಿ ಒಂದು ವರ್ಷದ ಅವಧಿಗೆ ಹೊರಾಂಗಣ ಜಾಹೀರಾತು ನಿಷೇಧಿಸಿ ಪಾಲಿಕೆ ಕೌನ್ಸಿಲ್ ನಿರ್ಣಯಿಸಿತ್ತು. ಆದರೂ ಬಿಬಿಎಂಪಿ ಅಧಿಕಾರಿಗಳು ಯಾವುದೇ ರೀತಿ ಕ್ರಮ ಕೈಗೊಳ್ಳದ ಕಾರಣ, ಜಾಹಿರಾತು ಏಜೆನ್ಸಿಗಳು, ಅಭಿಮಾನಿ ಸಂಘಟನೆಗಳು ಮಾನ್ಯ ನ್ಯಾಯಾಲಯದ ಆದೇಶಕ್ಕೆ ಕಿಂಚಿತ್ತೂ ಗೌರವ ಕೊಡದೆ ಅವ್ಯಾಹತವಾಗಿ ಫ್ಲೆಕ್ಸ್, ಕಟೌಟ್, ಬ್ಯಾನರ್‌ಗಳನ್ನು ಅಳವಡಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇದರಿಂದಾಗಿ ಸಂಚಾರ ದಟ್ಟಣೆಯಾಗುವುದು, ಸಿಗ್ನಲ್‌ಗಳ ದೀಪಗಳು ಕಾಣದಂತೆ ಮರೆಮಾಚುವುದು, ಪಾದಚಾರಿಗಳಿಗೆ ವಯೋವೃದ್ಧರಿಗೆ ನಡೆದಾಡಲು ಅನಾನುಕೂಲವಾಗುತ್ತಿದೆ. ಅಪಘಾತಗಳೂ ಹೆಚ್ಚಾಗಿದೆ. ಅಲ್ಲದೆ ಮುಖ್ಯವಾಗಿ ಪಾಲಿಕೆಗೆ ಆದಾಯ ಕುಂಠಿತವಾಗಿದೆ ಎಂದು ಹೇಳಿದರು.