ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದೆತ ಇ.ಡಿ ಜಾರಿಗೊಳಿಸಿದ್ದ ಸಮನ್ಸ್ ಪ್ರಶ್ನಿಸಿ ಸಿಎಂ ಪತ್ನಿ ಹಾಗೂ ಬೈರತಿ ಸುರೇಶ್ ಸಲ್ಲಿಸಿದ್ದ ಎರಡು ಪ್ರತ್ಯೇಕ ಅರ್ಜಿಗಳನ್ನು ವಿಚಾರಣೆ ನಡೆಸಿದ ಹೈಕೋರ್ಟ್, ಇಡಿ ತನಿಖೆಗೆ ಅವಕಾಶ ನೀಡುವುದು ಹೇಗೆ? ಈಗಲೇ ತನಿಖೆ ನಡೆಸಬೇಕಾದ ತುರ್ತು ಅಗತ್ಯವೇನಿದೆ? ಎಂದು ಪ್ರಶ್ನಿಸಿದೆ.
ಜತೆಗೆ, ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಮತ್ತು ಸಚಿವ ಬೈರತಿ ಸುರೇಶ್‌ಗೆ ಜಾರಿ ನಿರ್ದೇಶನಾಲಯ (ಇ.ಡಿ) ನೀಡಿದ್ದ ನೋಟಿಸ್‌ಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಇದರಿಂದಾಗಿ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ಮುಖ್ಯಮಂತ್ರಿ ಪತ್ನಿ ಹಾಗೂ ಸಚಿವ ಬೈರತಿ ಸುರೇಶ್ ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.
ಜಾರಿ ನಿರ್ದೇಶನಾಲಯ ಜಾರಿ ಮಾಡಿದ್ದ ಸಮನ್ಸ್ ಪ್ರಶ್ನಿಸಿ ಸಿಎಂ ಪತ್ನಿ ಹಾಗೂ ಬೈರತಿ ಸುರೇಶ್ ಸಲ್ಲಿಸಿದ್ದ ಎರಡು ಪ್ರತ್ಯೇಕ ಅರ್ಜಿಗಳನ್ನು ಧಾರವಾಡ ಪೀಠದಲ್ಲಿ ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ನೋಟಿಸ್ ಗೆ ಮಧ್ಯಂತರ ತಡೆ ಆದೇಶ ನೀಡಿ ವಿಚಾರಣೆಯನ್ನು ಫೆಬ್ರವರಿ 10ಕ್ಕೆ ಮುಂದೂಡಿತು.
ಇದಕ್ಕೂ ಮುನ್ನ ಭೈರತಿ ಸುರೇಶ್ ಪರ ವಾದಿಸಿದ ಹಿರಿಯ ವಕೀಲ ಸಿ.ವಿ.ನಾಗೇಶ್ ಅವರು, ಇದೇ ಮಾದರಿಯ ಮತ್ತೊಂದು ಕೇಸ್ ನಲ್ಲಿ ಡಾ.ನಟೇಶ್ ಗೆ ಇ.ಡಿ ನೀಡಿದ್ದ ಸಮನ್ಸ್ ಅನ್ನು ಹೈಕೋರ್ಟ್ ರದ್ದುಪಡಿಸಿದೆ. ಅದನ್ನೇ ಅನ್ವಯಿಸಿ ಈ ಪ್ರಕರಣದಲ್ಲೂ ತಡೆಯಾಜ್ಞೆ ನೀಡಬೇಕು ಎಂದು ಮನವಿ ಮಾಡಿದರು. ಇ.ಡಿ ಪರ ವಾದಿಸಿದ ಎ.ಎಸ್.ಜಿ ಅರವಿಂದ್ ಕಾಮತ್ ಅವರು ಸುರೇಶ್ ಪರ ವಕೀಲರ ಮನವಿಗೆ ಆಕ್ಷೇಪಿಸಿದರು. ಸಿಎಂ ಪತ್ನಿ ಪಾರ್ವತಿ ಪರ ವಾದಿಸಿದ ಹಿರಿಯ ವಕೀಲ ಸಂದೇಶ್ ಚೌಟ ಅವರು, 14 ಸೈಟ್ ಅಕ್ರಮವಾಗಿ ಹಂಚಿಕೆ ಮಾಡಿದ ಆರೋಪವಿದೆ. ಅಪರಾಧದಿಂದ ಗಳಿಸಿದ ಹಣವಿಲ್ಲದಿದ್ದರೂ ತನಿಖೆ ನಡೆಸಲಾಗುತ್ತಿದೆ. ಹಾಗಾಗಿ, ತನಿಖೆಗೆ ತಡೆ ನೀಡಬೇಕು ಎಂದು ಕೋರಿದರು.
ಈ ವೇಳೆ ನ್ಯಾಯಪೀಠ, ಸಿಎಂ ಪ್ರಕರಣದ ವಿಚಾರಣೆ ಇತ್ತ ಹೈಕೋರ್ಟ್ ನಲ್ಲಿ ನಡೆಯುವಾಗ ಇದರಲ್ಲೇಕೆ ಮುಂದುವರಿಯುತ್ತೀರಾ? ಎಂದು ಇ.ಡಿ ಪರ ವಕೀಲರನ್ನು ಪ್ರಶ್ನೆ ಮಾಡಿತು. ಅದಕ್ಕೆ ಉತ್ತರಿಸಿದ ಎಎಸ್‌ಜಿ, ‘ಮುಡಾ ಪ್ರಕರಣದಲ್ಲಿ ಸಿಎಂ ಪತ್ನಿ ಪಾರ್ವತಿ 2ನೇ ಆರೋಪಿ. ಅವರ ವಿರುದ್ಧ ಅಕ್ರಮವಾಗಿ ಸೈಟ್‌ಗಳನ್ನು ಪಡೆದ ಆರೋಪವಿದೆ. ಪಿಎಂಎಲ್‌ಎ ಕಾಯ್ದೆ ಅಡಿ ಅನುಸೂಚಿತ ಕೇಸ್ ಇದೆ, ಎಂದರು.
ಅದಕ್ಕೆ ನ್ಯಾಯಮೂರ್ತಿಗಳು, ಅಪರಾಧದಿಂದ ಗಳಿಸಿದ ಸಂಪತ್ತು ಈಗಿಲ್ಲವಲ್ಲ. ಇ.ಡಿ ತನಿಖೆಯಿಂದ ಹೈಕೋರ್ಟ್ ಕಾಯ್ದಿರಿಸಿರುವ ಕೇಸ್ ಗೆ ಹಾನಿಯಾಗಬಾರದು. ಲೋಕಾಯುಕ್ತ ಪೊಲೀಸರು ಅಂತಿಮ ವರದಿ ಸಲ್ಲಿಸುವಂತಿಲ್ಲವೆಂದು ನಾನೇ ಆದೇಶ ನೀಡಿದ್ದೇನೆ. ಈಗ ಇಡಿ ತನಿಖೆಗೆ ಅವಕಾಶ ನೀಡುವುದು ಹೇಗೆ? ಈಗಲೇ ತನಿಖೆ ನಡೆಸಬೇಕಾದ ತುರ್ತು ಅಗತ್ಯವೇನಿದೆ” ಎಂದು ಪ್ರಶ್ನಿಸಿದರು. ಎಎಸ್‌ಜಿ ಉತ್ತರಿಸಿ, ವಿಚಾರಣೆಗೆ ಹಾಜರಾಗಿ ದಾಖಲೆಗಳನ್ನು ಹಾಜರುಪಡಿಸಿ ಎಂದಷ್ಟೇ ಹೇಳಿದ್ದೇವೆ. ಇದರಿಂದ ಹೈಕೋರ್ಟ್ ಮುಂದಿರುವ ಕೇಸ್‌ಗೆ ಅಡ್ಡಿಯಾಗುವುದಿಲ್ಲ ಎಂದರು. ಈ ವೇಳೆ ನ್ಯಾಯಪೀಠ ಅವರು ಹಾಜರಾಗದಿದ್ದರೆ ನೀವು ನಾಳೆ ಅವರನ್ನು ಬಂಧಿಸಬಹುದು. ಹಾಗಾಗಿ, ಈ ಬಗ್ಗೆ ಸೂಕ್ತ ಆದೇಶ ಹೊರಡಿಸಬೇಕಿದೆ ಎಂದಿತು.
ಸುದೀರ್ಘ ವಾದ ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಲಯ, ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವ ಬಗ್ಗೆ ಹೈಕೋರ್ಟ್ ಆದೇಶ ಕಾಯ್ದಿರಿಸಿದೆ. ಲೋಕಾಯುಕ್ತ ಪೊಲೀಸರ ತನಿಖೆಯ ವರದಿ ಸಲ್ಲಿಕೆ ಮುಂದೂಡಿದ್ದೇವೆ. ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ಗೆ ಅಂತಿಮ ವರದಿ ಸಲ್ಲಿಕೆ ಮುಂದೂಡಿದ್ದೇವೆ. ಹಾಗಾಗಿ, ಈ ನೋಟಿಸ್‌ಗಳಿಗೆ ತಡೆ ನೀಡಲಾಗುತ್ತಿದೆ ಎಂದು ಆದೇಶಿಸಿತು.
ಎರಡನೇ ನೋಟಿಸ್: ಇ.ಡಿ. ಅಧಿಕಾರಿಗಳು ಜ.3ರಂದು ಬಿ.ಎಂ.ಪಾರ್ವತಿ ಅವರಿಗೆ ಮೊದಲ ಬಾರಿಗೆ ಸಮನ್ಸ್ ಜಾರಿ ಮಾಡಿ ಜ.9ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಈ ಸಮನ್ಸ್‌ಗೆ ಉತ್ತರಿಸಿದ್ದ ಪಾರ್ವತಿ ದಾಖಲೆಗಳನ್ನು ಸಂಗ್ರಹಿಸಲು ಎರಡು ವಾರ ಕಾಲಾವಕಾಶ ಕೋರಿದ್ದರು. ಅಲ್ಲದೆ, ತಮಗೆ ವಯಸ್ಸಾಗಿರುವುದರಿಂದ ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡುವಂತೆ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ಪಾರ್ವತಿ ಅವರಿಗೆ ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿ (ಪಿಎಂಎಲ್‌ಎ) ಜ.24ರಂದು ಎರಡನೇ ಬಾರಿಗೆ ಸಮನ್ಸ್ ಜಾರಿ ಮಾಡಿದ್ದ ಇ.ಡಿ.ಅಧಿಕಾರಿಗಳು ಜನವರಿ 28 ರಂದು ಬೆಳಗ್ಗೆ 11ಕ್ಕೆ ಶಾಂತಿನಗರದ ಇ.ಡಿ ಕಚೇರಿಯಲ್ಲಿ ಖುದ್ದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಅಲ್ಲದೆ, ಪ್ರಕರಣಕ್ಕೆ ಸಂಬಂಧಪಟ್ಟ ಸಾಕ್ಷಿಗಳು ಮತ್ತು ದಾಖಲೆಗಳನ್ನು ಸಲ್ಲಿಸುವಂತೆ ಸಮನ್ಸ್‌ನಲ್ಲಿ ಸೂಚಿಸಿದ್ದರು. ಅದೇ ರೀತಿ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರಿಗೂ ಇ.ಡಿ ಅಧಿಕಾರಿಗಳು ಸಮನ್ಸ್ ಜಾರಿ ಮಾಡಿ ಜನವರಿ 27 ರಂದು ಬೆಳಗ್ಗೆ 11.30ಕ್ಕೆ ಖುದ್ದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು.
ಸಿಬಿಐಗೆ ಮುಡಾ ಕೇಸ್: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಪತ್ನಿ ಪಾರ್ವತಿ ಆರೋಪಿಗಳಾಗಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಕ್ರಮ ನಿವೇಶನ ಹಂಚಿಕೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ. ಅಲ್ಲದೆ, ಹಾಲಿ ಪ್ರಕರಣದ ತನಿಖೆ ನಡೆಸುತ್ತಿರುವ ಲೋಕಾಯುಕ್ತ ಪೊಲೀಸರು ವಿಚಾರಣಾ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸುವುದಕ್ಕೆ ವಿಧಿಸಿದ್ದ ಗಡುವನ್ನು ತೀರ್ಪು ನೀಡುವವರೆಗೆ ವಿಸ್ತರಣೆ ಮಾಡಿದೆ. ಮೂಲ ದೂರುದಾರ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿಯ ಕುರಿತು ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಪೀಠ ಸೋಮವಾರ ಧಾರವಾಡ ಪೀಠದಿಂದ ವಿಚಾರಣೆ ನಡೆಸಿತು.