ದೆಹಲಿ: ತ್ರಿವಳಿ ತಲಾಖ್ ಘೋಷಣೆಯ ಮೂಲಕ ವಿಚ್ಛೇದನ ನೀಡಿರುವ ವ್ಯಕ್ತಿಗಳ ವಿರುದ್ಧ ಈವರೆಗೆ ದಾಖಲಿಸಿರುವ ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಲಭ್ಯವಿರುವ ಅಂಕಿ ಅಂಶಗಳನ್ನು ಸಲ್ಲಿಸಿ ಎಂದು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ತ್ರಿವಳಿ ತಲಾಖ್ ಕ್ರಮವನ್ನು ಅಪರಾಧೀಕರಿಸುವ “ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ರಕ್ಷಣೆ) ಕಾಯ್ದೆ-2019″ರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಸಿಜೆಐ ಸಂಜೀವ್ ಖನ್ನಾ ಮತ್ತು ನ್ಯಾ. ಪಿ.ವಿ ಸಂಜಯ್ ಕುಮಾರ್ ಅವರಿದ್ದ ಪೀಠ ಈ ಮಾಹಿತಿ ಕೇಳಿದೆ.
ಇದೇ ವೇಳೆ ನ್ಯಾಯಪೀಠ, ತ್ರಿವಳಿ ತಲಾಖ್ ಆಚರಣೆ ಸರಿ ಎಂದು ಯಾರೊಬ್ಬರೂ ಹೇಳುತ್ತಿಲ್ಲ. ಆದರೆ ಅರ್ಜಿದಾರರು ತ್ರಿವಳಿ ತಲಾಖ್ ಆಚರಣೆಯ ಅಪರಾಧೀಕರಣವನ್ನು ಮಾತ್ರ ಪ್ರಶ್ನಿಸುತ್ತಿದ್ದಾರೆ. ಹೀಗಾಗಿ ಉಭಯ ಕಕ್ಷೀದಾರರು ತಮ್ಮ ಲಿಖಿತ ಹೇಳಿಕೆಗಳನ್ನು ಸಲ್ಲಿಸಲಿ, ದಾಖಲಾಗಿರುವ ಎಫ್‌ಐಆರ್‌ಗಳ ಡೇಟಾವನ್ನು ನಮಗೆ ನೀಡಲಿ. ಅವುಗಳನ್ನು ಪರಿಶೀಲಿಸಿ, ಸಂಕ್ಷಿಪ್ತ ಪ್ರಾಥಮಿಕ ವಿಚಾರಣೆ ನಡೆಸಿದ ನಂತರ ನ್ಯಾಯಾಲಯವು ಸೂಕ್ತ ಆದೇಶ ಹೊರಡಿಸಲಿದೆ ಎಂದು ಹೇಳಿದೆ.
ಪ್ರಕರಣದ ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ನ್ಯಾಯಪೀಠಕ್ಕೆ ಮಾಹಿತಿ ನೀಡಿ, “ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ರಕ್ಷಣೆ) ಕಾಯ್ದೆ-2019″ರ ಅಡಿ ತ್ರಿವಳಿ ತಲಾಖ್ ಗೆ 3 ವರ್ಷಗಳಿಗಿಂತ ಹೆಚ್ಚು ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ಆದರೆ, ಮಹಿಳೆಯರು ತ್ರಿವಳಿ ತಲಾಖ್ ಆಚರಣೆಯನ್ನು ಪ್ರಶ್ನಿಸಲು ಮುಂದೆ ಬರುತ್ತಿದ್ದಾರೆಯೇ ಎಂಬುದನ್ನು ಅಂಕಿ ಅಂಶಗಳಿಂದ ತಿಳಿಯಬೇಕಿದೆ ಎಂದರು.
ತ್ರಿವಳಿ ತಲಾಕ್ ಅಪರಾಧೀಕರಿಸುವುದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿರುವ ಸಂಘಟನೆಗಳ ಪರ ವಕೀಲರಾದ ನಿಜಾಮ್ ಪಾಷಾ ವಾದ ಮಂಡಿಸಿ, ಬೇರೆ ಯಾವುದೇ ಸಮುದಾಯದಲ್ಲಿ ಪತ್ನಿಯನ್ನು ತ್ಯಜಿಸುವುದು ಕ್ರಿಮಿನಲ್ ಅಪರಾಧವಲ್ಲ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸಾಲಿಸಿಟರ್ ಜನರಲ್, ಇತರೆ ಯಾವ ಸಮುದಾಯಗಳಲ್ಲಿಯೂ ತ್ರಿವಳಿ ತಲಾಖ್ ಚಾಲ್ತಿಯಲ್ಲಿಲ್ಲ, ಯಾವುದೇ ಸುಸಂಸ್ಕೃತ ಸಮಾಜದಲ್ಲಿ ಅಂತಹ ಅಭ್ಯಾಸವಿಲ್ಲ ಎಂದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ, ಅಂಕಿ ಅಂಶಗಳನ್ನು ಸಲ್ಲಿಸುವಂತೆ ನಿರ್ದೇಶಿಸಿ, ವಿಚಾರಣೆ ಮುಂದೂಡಿತು.
ಸುಪ್ರೀಂ ಕೋರ್ಟ್ 2017 ರ ಆಗಸ್ಟ್ ನಲ್ಲಿ, ಶಾಯರಾ ಬಾನೋ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ತ್ವರಿತ ತ್ರಿವಳಿ ತಲಾಖ್ (ತಲಾಕ್-ಎ-ಬಿದತ್) ಪದ್ಧತಿಯನ್ನು ಅಸಂವಿಧಾನಿಕ ಮತ್ತು ಸಂವಿಧಾನದ ವಿಧಿ 14 ಮತ್ತು 15ರ ಉಲ್ಲಂಘನೆ ಎಂದು ರದ್ದುಗೊಳಿಸಿ ಮಹತ್ವದ ತೀರ್ಪು ನೀಡಿದೆ. ಆ ಬಳಿಕ, ಸಂಸತ್ತು ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ರಕ್ಷಣೆ) ಕಾಯ್ದೆ, 2019 ಅನ್ನು ಜಾರಿಗೊಳಿಸಿದೆ. ಕಾಯ್ದೆಯ ಪ್ರಕಾರ, ಮೂರು ಬಾರಿ ತ್ರಿವಳಿ ತಲಾಖ್ ಹೇಳಿ ಪತ್ನಿಗೆ ವಿಚ್ಛೇದನ ನೀಡುವುದು ಅಪರಾಧವಾಗಿದ್ದು, ಪತಿಗೆ 3 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ಈ ಕಾಯ್ದೆಯ ಸಿಂಧುತ್ವ ಪ್ರಶ್ನಿಸಿ, ಮುಸ್ಲಿಂ ಸಮುದಾಯದ ಸಂಘಟನೆಗಳು ಸುಪ್ರೀಂಕೋರ್ಟ್ ಮೆಟ್ಟಿಲೇರಿವೆ.