ಲೇಖನ: ಮಂಜೇಗೌಡ ಕೆ.ಜಿ, ವಕೀಲರು, 9980178111
ಬೆಂಗಳೂರು: ರಾಜ್ಯದಲ್ಲಿ ಯೋಜನಾ ಪ್ರಾಧಿಕಾರಗಳ ಮಾಸ್ಟರ್ ಪ್ಲಾನ್ ವ್ಯಾಪ್ತಿಗೆ ಒಳಪಡುವ ಪ್ರದೇಶಗಳಲ್ಲಿ ಭೂ ಪರಿವರ್ತನೆ ಮತ್ತು ಭೂ ಬಳಕೆಗೆ ಸಂಬಂಧಿಸಿದ ಕಾನೂನುಗಳನ್ನು ವಿಶ್ಲೇಷಿಸಿರುವ ಹೈಕೋರ್ಟ್, ಕರ್ನಾಟಕ ಭೂ ಕಂದಾಯ ಕಾಯ್ದೆ(ಕೆಎಲ್ಆರ್) ಅಡಿಯಲ್ಲಿ ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಗಳಿಗೆ ಪರಿವರ್ತಿಸಿದ ನಂತರವೂ, ಕರ್ನಾಟಕ ಪಟ್ಟಣ ಮತ್ತು ಗ್ರಾಮ ಯೋಜನೆ(ಕೆಟಿಸಿಪಿ) ಕಾಯ್ದೆ-1961 ಅಡಿ ಸಂಬಂಧಿಸಿದ ಯೋಜನಾ ಪ್ರಾಧಿಕಾರದಿಂದಲೂ ಅನುಮತಿ ಪಡೆಯುವುದು ಕಡ್ಡಾಯ ಎಂದು ಸ್ಪಷ್ಟಪಡಿಸಿದೆ.
ಲೇಔಟ್ ಪ್ಲಾನಿಂಗ್ ನ್ನು ಅನುಮೋದಿಸದ ಮಂಡ್ಯ ಅಭಿವೃದ್ಧಿ ಯೋಜನಾ ಪ್ರಾಧಿಕಾರದ ಕ್ರಮ ಪ್ರಶ್ನಿಸಿ ಕರ್ನಾಟಕ ರಾಜ್ಯ ಮಾಂಡವ್ಯ ಗೃಹ ನಿರ್ಮಾಣ ಸಹಕಾರ ಸಂಘ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಈ ತೀರ್ಪು ನೀಡಿದೆ.
ಪೀಠ ತನ್ನ ಆದೇಶದಲ್ಲಿ, ಯೋಜನಾ ಪ್ರಾಧಿಕಾರಗಳ ವ್ಯಾಪ್ತಿಗೆ ಒಳಪಡುವ ಪ್ರದೇಶಗಳಲ್ಲಿ ಕೃಷಿ ಭೂಮಿಯನ್ನು ಇತರೆ ಉದ್ದೇಶಗಳಿಗೆ ಬಳಸಲು ಕರ್ನಾಟಕ ಭೂ ಕಂದಾಯ ಕಾಯ್ದೆ-1964ರ ಸೆಕ್ಷನ್ 95ರ ಅಡಿಯಲ್ಲಿ ಜಿಲ್ಲಾಧಿಕಾರಿಯಿಂದ ಭೂ ಪರಿವರ್ತನೆಗೆ ಅನುಮತಿ ಪಡೆದುಕೊಂಡಂತೆಯೇ ಕೆಟಿಸಿಪಿ ಕಾಯ್ದೆಯ ಸೆಕ್ಷನ್ 14(ಎ) ಅಡಿಯಲ್ಲೂ ಅನುಮತಿ ಪಡೆದುಕೊಳ್ಳಬೇಕು.
ಜಿಲ್ಲಾಧಿಕಾರಿಯಿಂದ ಭೂ ಪರಿವರ್ತನೆಗೆ ಅನುಮತಿ ಪಡೆದುಕೊಂಡಾಕ್ಷಣ ಕೆಟಿಸಿಪಿ ಕಾಯ್ದೆಯ ಸೆಕ್ಷನ್ 14ರ ಅಡಿಯಲ್ಲೂ ಭೂ ಬಳಕೆಯ ಬದಲಾವಣೆಗೆ ಅನುಮತಿ ಸಿಕ್ಕಿದೆ ಅಥವಾ ಅನುಮತಿ ನೀಡಲು ಪರಿಗಣಿಸಲಾಗಿದೆ ಅಥವಾ ತಂತಾನೇ ಬದಲಾವಣೆ ಆಗಲಿದೆ ಎಂದು ಅರ್ಥವಲ್ಲ. ಭೂಮಿ ಇನ್ನೂ ಯೋಜನಾ ಪ್ರಾಧಿಕಾರದ ಮಾಸ್ಟರ್ ಪ್ಲಾನ್ ವ್ಯಾಪ್ತಿಯಲ್ಲೇ ಇದೆ ಎಂದು ಅರ್ಥ. ಹೀಗಾಗಿ ಜಿಲ್ಲಾಧಿಕಾರಿಯಿಂದ ಭೂ ಪರಿವರ್ತನೆಗೆ ಅನುಮೋದನೆ ಸಿಕ್ಕಿದ್ದರೂ ಯೋಜನಾ ಪ್ರಾಧಿಕಾರದ ವ್ಯಾಪ್ತಿಗೆ ಒಳಪಡುತ್ತಿದ್ದರೆ, ಸಂಬಂಧಿತ ಸ್ಥಳೀಯ ಪ್ರಾಧಿಕಾರದಿಂದ ಅನುಮತಿ ಪಡೆಯುವುದು ಕಡ್ಡಾಯ ಎಂದು ಅಭಿಪ್ರಾಯಪಟ್ಟಿದೆ.
ಹಿನ್ನೆಲೆ: ಕರ್ನಾಟಕ ರಾಜ್ಯ ಮಾಂಡವ್ಯ ಗೃಹ ನಿರ್ಮಾಣ ಸಹಕಾರ ಸಂಘ ತನ್ನ ಸದಸ್ಯರಿಗೆ ವಸತಿ ನಿವೇಶನಗಳನ್ನು ನಿರ್ಮಿಸುವ ಹಿನ್ನೆಲೆಯಲ್ಲಿ ಮಂಡ್ಯದ ಕೊತ್ತತ್ತಿ ಹೋಬಳಿಯ ಕ್ಯಾತನಗೆರೆ ಗ್ರಾಮದ ವಿವಿಧ ಸರ್ವೆ ನಂಬರ್ ಗಳಲ್ಲಿ ನಿಯಮಾನುಸಾರವೇ ಜಮೀನು ಖರೀದಿಸಿತ್ತು. ಬಳಿಕ ಲೇಔಟ್ ಪ್ಲಾನಿಂಗ್ ಗೆ ಯೋಜನಾ ಪ್ರಾಧಿಕಾರದಿಂದ ಅನುಮತಿ ಕೇಳಿತ್ತು. ಆದರೆ, ಅನುಮತಿ ನೀಡಲು ನಿರಾಕರಿಸಿದ್ದ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರ ಭೂಮಿ ಮಾಸ್ಟರ್ ಪ್ಲಾನ್ ವ್ಯಾಪ್ತಿಯಲ್ಲಿದೆ. ಆ ಜಾಗದಲ್ಲಿ ಪ್ರಾಧಿಕಾರವೇ ವಸತಿ ನಿವೇಶನಗಳನ್ನು ನಿರ್ಮಿಸುವ ಉದ್ದೇಶಿತ ಯೋಜನೆ ಹೊಂದಿದೆ ಎಂದು ತಿಳಿಸಿತ್ತು. ಪ್ರಾಧಿಕಾರದ ಈ ಕ್ರಮ ಪ್ರಶ್ನಿಸಿ ಸಂಘ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು.
(WP 4729/2020)