ಅಕ್ರಮ ವಲಸಿಗರ ವಿರುದ್ಧ ಅಮೆರಿಕದ ನೂತನ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಕಠಿಣ ಕ್ರಮ ತೆಗದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆ ಅಕ್ರಮ ವಲಸಿಗರನ್ನು ಅಮೆರಿಕದಿಂದ ಗಡಿಪಾರು ಮಾಡುತ್ತಿದ್ದಾರೆ.
ಅದರಂತೆ ಅಕ್ರಮವಾಗಿ ಅಮೆರಿಕ ಪ್ರವೇಶಿಸಿದ್ದ 205 ಜನರು ಭಾರತಕ್ಕೆ ಮರಳುತ್ತಿದ್ದಾರೆ. ಇವರನ್ನು ಹೊತ್ತ ಅಮೆರಿಕದ ಮಿಲಿಟರಿ ವಿಮಾನ ಸಿ- 17 ಸದ್ಯದಲ್ಲೇ ಅಮೃತ್ಸರ್ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದೆ. ಮಂಗಳವಾರ ಮಧ್ಯಾಹ್ನ ಸ್ಯಾನ್ ಆಂಟೋನಿಯೊದಿಂದ ಹೊರಟಿರುವ ವಿಮಾನ ಇಂದು ಅಮೃತಸರದ ಶ್ರೀ ಗುರು ರಾಮದಾಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದೆ.
ಅಮೆರಿಕದಿಂದ ಭಾರತೀಯರನ್ನು ಹೊತ್ತ ವಿಮಾನ ಹೊರಡುತ್ತಿದ್ದ ಸುದ್ದಿ ತಿಳಿಯುತ್ತಿದ್ದಂತೆ ಅವರ ಸಂಬಂಧಿಕರು ವಿಮಾನ ನಿಲ್ದಾಣದತ್ತ ಮುಖ ಮಾಡಿದ್ದಾರೆ. ವಿಮಾನದಲ್ಲಿ 11 ಮಂದಿ ಸಿಬ್ಬಂದಿ ಹಾಗೂ 45 ಅಮೆರಿಕನ್ ಅಧಿಕಾರಿಗಳು ಇದ್ದಾರೆ. ಇವರು 205 ಭಾರತೀಯರನ್ನು ಅಮೃತ್ಸರ ವಿಮಾನ ನಿಲ್ದಾಣದಲ್ಲಿ ಇಳಿಸಿದ ಬಳಿಕ ವಾಪಸ್ ಆಗಲಿದೆ. ಈ 205 ಮಂದಿಯಲ್ಲಿ ಪಂಜಾಬ್ ಹೊರತಾದ ಇತರ ರಾಜ್ಯದ ಭಾರತೀಯರು ಇದ್ದಾರೆ.
ಗಡಿಪಾರು ಯೋಜನೆ: ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಚುನಾವಣಾ ಪ್ರಚಾರದ ಭಾಷಣದಲ್ಲಿ ಅಕ್ರಮ ವಲಸಿಗರ ವಿರುದ್ದ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಅದರಂತೆ ಅಕ್ರಮ ವಲಸಿಗರು, ದಾಖಲೆ ರಹಿತರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಇದೀಗ 205 ಭಾರತೀಯ ನಾಗರಿಕರನ್ನು ಗಡಿಪಾರು ಮಾಡಲಾಗಿದೆ. ಇವರೆಲ್ಲಾ ಟೆಕ್ಸಾಸ್ ನಿಂದ ಮರಳುತ್ತಿದ್ದಾರೆ. ವರದಿಗಳ ಪ್ರಕಾರ, ಅಮೆರಿಕದಲ್ಲಿ 1.5 ಮಿಲಿಯನ್ ಜನರನ್ನು ಗಡಿಪಾರು ಮಾಡಲು ಈಗಾಗಲೇ ಗುರುತಿಸಲಾಗಿದೆ. ಇದರಲ್ಲಿ 18,000 ಮಂದಿ ಭಾರತೀಯರಿದ್ದಾರೆ ಎಂದು ತಿಳಿದು ಬಂದಿದೆ.
ಹಿನ್ನೆಲೆ ಪರೀಕ್ಷಿಸಲಿರುವ ಏಜೆನ್ಸಿ: ಮೂಲಗಳ ಪ್ರಕಾರ, ಅಮೆರಿಕದಿಂದ ಅಮೃತಸರಕ್ಕೆ ಬರುತ್ತಿರುವ ಎಲ್ಲ ಜನರ ದಾಖಲೆಗಳ ಪರಿಶೀಲನೆ ನಡೆಸಲಾಗುವುದು. ಇಮಿಗ್ರೇಷನ್ ಹೊರತಾಗಿ ಅವರ ಸಂಪೂರ್ಣ ಹಿನ್ನೆಲೆ ಅದರಲ್ಲೂ ವಿಶೇಷವಾಗಿ ಕ್ರಿಮಿನಲ್ ರೆಕಾರ್ಡ್ ಪರೀಕ್ಷೆ ನಡೆಸಲಾಗುವುದು. ಯಾರಾದರೂ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದರೆ, ಅವರನ್ನು ವಿಮಾನ ನಿಲ್ದಾಣದಲ್ಲೇ ಬಂಧಿಸಲಾಗುವುದು. ಮಾಹಿತಿ ಪ್ರಕಾರ, ಅಮೆರಿಕದಿಂದ ಗಡಿಪಾರಾಗಿರುವ ಭಾರತೀಯರಲ್ಲಿ ಭಾರತದಲ್ಲಿ ಅಪರಾಧ ಕೃತ್ಯ ಎಸಗಿ ಅಮೆರಿಕಕ್ಕೆ ಹೋಗಿರುವವರು ಇರಬಹುದು ಎನ್ನಲಾಗಿದೆ. ಹೀಗಾಗಿಎಲ್ಲರ ಹಿನ್ನೆಲೆಯನ್ನು ಸರ್ಕಾರ ಪರಿಶೀಲನೆ ನಡೆಸಲಿದೆ.