ಬೆಂಗಳೂರು: ನ್ಯಾಯಾಲಯದ ಆದೇಶದ ಮೂಲಕ ಜೀವನಾಂಶ ಪಡೆಯುವುದು ಸುಲಿಗೆಗೆ ಸಮವಲ್ಲ ಎಂದು ಹೈಕೋರ್ಟ್ ಹೇಳಿದ್ದು, ತನ್ನ ಪತ್ನಿಯ ವಿರುದ್ಧ ಪತಿಯೊಬ್ಬ ಮಾಡಿದ್ದ ಸುಲಿಗೆ ಮತ್ತು ಇತರ ಆರೋಪಗಳನ್ನು ರದ್ದುಗೊಳಿಸಿದೆ.
2023ರಲ್ಲಿ ಮಂಗಳೂರು ಮತ್ತು ಬೆಂಗಳೂರು ಮೂಲದ ದಂಪತಿಗಳು ಸಲ್ಲಿಸಿದ್ದ ಅರ್ಜಿಗಳನ್ನು ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಈ ಆದೇಶ ಮಾಡಿದೆ. ಹೈಕೋರ್ಟ್ ತನ್ನ ಆದೇಶದಲ್ಲಿ, ಪತ್ನಿ ಜೀವನಾಂಶಕ್ಕಾಗಿ ನ್ಯಾಯಾಲಯದ ಮೊರೆ ಹೋದಾಗ, ನ್ಯಾಯಾಲಯ ಅದನ್ನು ಪರಿಗಣಿಸಿದಾಗ ಅದು ಸುಲಿಗೆಯ ಅಪರಾಧವಾಗುವುದಿಲ್ಲ. ಇದು ಕಾನೂನು ಪ್ರಕ್ರಿಯೆಗಯಾಗಿದ್ದು, ಉನ್ನತ ನ್ಯಾಯಾಲಯವು ಅದನ್ನು ಬದಲಾಯಿಸದಿದ್ದರೆ ಅಥವಾ ಮಾರ್ಪಡಿಸದಿದ್ದರೆ ಜೀವನಾಂಶ ಪಾವತಿಸಲು ಪತಿ ಕಾನೂನುಬದ್ಧವಾಗಿ ಹೊಣೆಗಾರನಾಗಿರುತ್ತಾನೆ ಎಂದು ಹೇಳಿದೆ.
ಅರ್ಜಿದಾರರು 2007 ರಲ್ಲಿ ವಿವಾಹವಾಗಿದ್ದು, ಫೇಸ್‌ಬುಕ್ ಮೂಲಕ ಬಂದ ಸಂದೇಶದ ಮೂಲಕ ಇಬ್ಬರ ನಡುವಿನ ಸಂಬಂಧ ಹಾಳಾಗಿತ್ತು. 2020ರಲ್ಲಿ ಫೇಸ್‌ಬುಕ್ ಮೂಲಕ ಸಂದೇಶವೊಂದು ಬಂದಿದ್ದು, ನಿನ್ನ ಪತ್ನಿ ಮಾಜಿ ಗೆಳೆಯನೊಂದಿಗೆ ಸಂಬಂಧ ಹೊಂದಿದ್ದಾಳೆಂದು ತಿಳಿಸಲಾಗಿದ್ದು. ಇದರಿಂದ ದಂಪತಿಗಳ ನಡುವಿನ ಸಂಬಂಧ ಹಾಳಾಗಿತ್ತು.
ಈ ನಡುವೆ ಪತ್ನಿ ತನ್ನ ಪತಿ ವಿರುದ್ಧ ಕೌಟುಂಬಿಕ ದೌರ್ಜನ್ಯ ಮತ್ತಿತರ ಆರೋಪದ ಮೇಲೆ ದೂರು ದಾಖಲಿಸಿದ್ದಳು. ಬಳಿಕ ಪತಿ ಕೂಡ ಪತ್ನಿ ವಿರುದ್ಧ ಸುಲಿಗೆ ಆರೋಪ ಸೇರಿದಂತೆ ಇತರೆ ಆರೋಪಗಳನ್ನು ಮಾಡಿ ದೂರು ದಾಖಲಿಸಿದ್ದರು.