ಅಳಿಯನಿಗೂ ಮಾವನ ಆಸ್ತಿಯಲ್ಲಿ ಹಕ್ಕು ಇದೆಯಾ? ಮಾವನ ಮನೆಯಲ್ಲಿ ಇರುವ ಅಳಿಯ ಆಸ್ತಿಯಲ್ಲಿ ಪಾಲು ಕೇಳಬಹುದಾ? ಎಂಬ ಕುರಿತಂತೆ ಮಧ್ಯಪ್ರದೇಶ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಭೋಪಾಲ್ ನಿವಾಸಿ ದಿಲೀಪ್ ಮರ್ಮತ್ ಎಂಬಾತ ತನ್ನ ಮಾವನ ಮನೆಯಲ್ಲಿ ಇದ್ದ. ಮಾವ ತಮ್ಮ ಮಗಳು ಜ್ಯೋತಿ ಮತ್ತು ಅಳಿಯ ದಿಲೀಪ್ ಮರ್ಮತ್ ಅವರನ್ನು ತಮ್ಮ ಮನೆಯಲ್ಲಿ ವಾಸಿಸಲು ಅನುಮತಿಸಿದ್ದರು. ಪ್ರತಿಯಾಗಿ, ಅವರು ತಮ್ಮ ವೃದ್ಧಾಪ್ಯದಲ್ಲಿ ತಮ್ಮ ಮಾವನನ್ನು ನೋಡಿಕೊಳ್ಳಲು ಒಪ್ಪಿಕೊಂಡಿದ್ದರು.
ಇದರ ನಂತರ, ಮಗಳು 2018 ರಲ್ಲಿ ಅಪಘಾತದಲ್ಲಿ ನಿಧನರಾದರು. ಮಗಳ ಮರಣದ ನಂತರ, ಅಳಿಯ ಮತ್ತೆ ವಿವಾಹವಾದ. ಎರಡನೇ ಮದುವೆಯ ನಂತರ, ಅಳಿಯ ತನ್ನ ವೃದ್ಧ ಮಾವನಿಗೆ ಆಹಾರ ಮತ್ತು ಹಣವನ್ನು ನೀಡುವುದನ್ನು ನಿಲ್ಲಿಸಿದ. ಆದರೆ ಮಾವನ ಆಸ್ತಿಯಲ್ಲಿ ತನಗೆ ಅಧಿಕಾರ ಇರುವ ಕಾರಣ, ಮನೆಯಿಂದ ಹೊರಕ್ಕೆ ಹೋಗುವುದಿಲ್ಲ ಎಂದು ಕೋರ್ಟ್ಗೆ ಹೋಗಿದ್ದ.
ವಿಚಾರಣಾ ನ್ಯಾಯಾಲಯದಲ್ಲಿ ಅಳಿಯನ ವಿರುದ್ಧವೇ ಆದೇಶಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಆತ ಹೈಕೋರ್ಟ್ ಮೊರೆ ಹೋಗಿದ್ದ. ಅಂತಿಮವಾಗಿ ಹೈಕೋರ್ಟ್, ಮಾವನ ಆಸ್ತಿಯಲ್ಲಿ ಅಳಿಯನಿಗೆ ಪಾಲು ಇಲ್ಲ ಎಂದು ಸ್ಪಷ್ಟಪಡಿಸಿದೆ. ಪೋಷಕರ ನಿರ್ವಹಣೆ ಕಾಯ್ದೆ ಅಡಿಯಲ್ಲಿ, ಅಳಿಯನನ್ನು ಮನೆ ಖಾಲಿ ಮಾಡಿಸಿ ಎಂದು ಅಧಿಕಾರಿಗಳಿಗೆ ಕೋರ್ಟ್ ನಿರ್ದೇಶನ ನೀಡಿದೆ.
ಅಲ್ಲದೇ, ಕಾನೂನಿನ ಅಡಿ ಮಾವನ ಆಸ್ತಿಯಲ್ಲಿ ಅಳಿಯನಿಗೆ ಹಕ್ಕು ಇಲ್ಲ. ಅದೂ ಅಲ್ಲದೇ ಈ ಪ್ರಕರಣದಲ್ಲಿ ಅಳಿಯ ಮತ್ತೊಂದು ಮದುವೆಯಾಗಿದ್ದೂ ಅಲ್ಲದೇ, ಮಾವನನ್ನು ಕೂಡ ನೋಡಿಕೊಳ್ಳುತ್ತಿಲ್ಲ ಎಂದಿರುವ ಮುಖ್ಯ ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟ್ ಮತ್ತು ನ್ಯಾಯಮೂರ್ತಿ ವಿವೇಕ್ ಜೈನ್ ಅವರ ಪೀಠ, 30 ದಿನಗಳ ಒಳಗೆ ಮನೆ ಖಾಲಿ ಮಾಡುವಂತೆ ಅಳಿಯನಿಗೆ ಆದೇಶಿಸಿದೆ.
ಮಾವನ ಮನೆ ಖಾಲಿ ಮಾಡದೇ ಆಸ್ತಿಯ ಮೇಲೆ ಹಕ್ಕು ಚಲಾಯಿಸುತ್ತಿದ್ದ ಅಳಿಯನ ವಿರುದ್ಧ ಮಾವ ನಾರಾಯಣ್ ವರ್ಮಾ (78) ಅವರು ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ 2007 ರ ಅಡಿಯಲ್ಲಿ ದೂರು ಸಲ್ಲಿಸಿದ್ದರು. ಈ ಪ್ರಕರಣದಲ್ಲಿ, ಎಸ್‌ಡಿಎಂ ಅಳಿಯನಿಗೆ ಮಾವನ ಮನೆ ಖಾಲಿ ಮಾಡುವಂತೆ ಆದೇಶಿಸಿತ್ತು.
ಇದನ್ನು ಅಳಿಯ ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದ. ಮಾವನ ಮನೆಯ ನಿರ್ಮಾಣಕ್ಕೆ ತಾನು 10 ಲಕ್ಷ ರೂಪಾಯಿ ಕೂಡ ನೀಡಿದ್ದೇನೆಂದು ವಾದಿಸಿದ್ದ. ಪ್ರಕರಣವನ್ನು ಆಲಿಸಿದ ವಿಭಾಗೀಯ ಪೀಠ, ಕಾಯ್ದೆ ನಿಯಮಗಳ ಅಡಿಯಲ್ಲಿ ಅಳಿಯನನ್ನು ಹೊರಕ್ಕೆ ಹಾಕಬಹುದು. ಆಸ್ತಿ ವರ್ಗಾವಣೆ ಕಾಯ್ದೆ ಅಡಿಯಲ್ಲಿ ಆಸ್ತಿಯನ್ನು ವರ್ಗಾಯಿಸಿಲ್ಲ. ಸಂತ್ರಸ್ತ ಮಾವ ಬಿಎಚ್‌ಇಎಲ್‌ನ ನಿವೃತ್ತ ಉದ್ಯೋಗಿಯಾಗಿದ್ದು, ಭವಿಷ್ಯ ನಿಧಿಯಿಂದ ಅರೆಕಾಲಿಕ ಪಿಂಚಣಿ ಪಡೆಯುತ್ತಿದ್ದಾರೆ. ಅನಾರೋಗ್ಯ ಪೀಡಿತ ಪತ್ನಿ ಮತ್ತು ಮಕ್ಕಳನ್ನು ನೋಡಿಕೊಳ್ಳಲು ಅವರಿಗೆ ಮನೆ ಬೇಕಾಗಿದ್ದು, ಅಳಿಯ 30 ದಿನಗಳಲ್ಲಿ ಮನೆ ಖಾಲಿ ಮಾಡಬೇಕೆಂದು ಹೈಕೋರ್ಟ್ ಹೇಳಿದೆ.