ಬೆಂಗಳೂರು: ವಿವಾಹವಾಗಿದ್ದರೂ, ಮತ್ತೊಬ್ಬರ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡು ಸಹಜೀವನ ನಡೆಸುತ್ತಿರುವ ಮಹಿಳೆಯು ಪತಿಯಿಂದ ಜೀವನಾಂಶ ನಿರೀಕ್ಷಿಸಲಾಗದು ಎಂದು ಹೈಕೋರ್ಟ್ ತಿಳಿಸಿದೆ.
ಚಿಕ್ಕಮಗಳೂರು 2ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮಹಿಳೆಯೊಬ್ಬರು ಸಲ್ಲಿಸಿದ್ದ ಕ್ರಿಮಿನಲ್ ಪುನರ್ ಪರಿಶೀಲನಾ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
ಅರ್ಜಿದಾರರು ಅಕ್ರಮ ಸಂಬಂಧ ಹೊಂದಿದ್ದು, ಪ್ರಾಮಾಣಿಕರಲ್ಲದಿದ್ದಾಗ ಪತಿಯಿಂದ ಜೀವನಾಂಶ ನೀಡಬೇಕು ಎಂದು ವಾದ ಮಂಡಿಸುವುದನ್ನು ಒಪ್ಪಲಾಗದು. ಮತ್ತೊಬ್ಬ ವ್ಯಕ್ತಿಯೊಂದಿಗೆ ಓಡಿಹೋಗಿರುವ ಸಂಬಂಧ ದೂರು ದಾಖಲಾಗಿದೆ. ಈ ಪ್ರಕರಣದ ತನಿಖೆ ವೇಳೆ ಆಪ್ತನೊಂದಿಗೆ ನೆಲೆಸಲು ಇಚ್ಚಿಸುತ್ತಿದ್ದಾರೆ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ. ಇದೇ ಆಧಾರದಲ್ಲಿ ವಿಚ್ಛೇದನವೂ ಮಂಜೂರಾಗಿದೆ.
ಇನ್ನು ಪತಿ ತನ್ನ ಮಾಜಿ ಪತ್ನಿಗೆ ಎಂದಿಗೂ ವರದಕ್ಷಿಣೆ ಕಿರುಕುಳ ನೀಡಿಲ್ಲ. ಅಕ್ರಮ ಸಂಬಂಧದ ವಿಚಾರವಾಗಿ ಹಿಂದೊಮ್ಮೆ ರಾಜಿ ಪಂಚಾಯತಿ ನಡೆಸಿದ ಬಳಿಕ ಗಂಡನ ಮನೆಗೆ ಕಳುಹಿಸಲಾಗಿತ್ತು. ಆದರೂ, ಅವರು ಗಂಡನನ್ನು ಬಿಟ್ಟು ಮತ್ತೊಬ್ಬ ವ್ಯಕ್ತಿಯೊಂದಿಗೆ ಸಹಜೀವನ ನಡೆಸುತ್ತಿದ್ದಾರೆ ಎಂಬುದಾಗಿ ಅರ್ಜಿದಾರ ಮಹಿಳೆಯ ಸಹೋದರ ತಿಳಿಸಿದ್ದಾರೆ. ಹೀಗಾಗಿ ಪತ್ನಿಯು ತನ್ನ ವಿಚ್ಛೇದಿತ ಪತಿಯ ಕಡೆಯಿಂದ ಯಾವುದೇ ನಿರೀಕ್ಷೆ ಮಾಡಬಾರದು ಎಂದು ಹೈಕೋರ್ಟ್ ಹೇಳಿದೆ.
ಅಲ್ಲದೇ, ಅರ್ಜಿದಾರರನ್ನು ಪಾಟಿ ಸವಾಲಿಗೆ ಒಳಪಡಿಸಿದಾಗ ಜೀವನ ನಡೆಸುವುದಕ್ಕಾಗಿ ಯಾವುದೇ ಆದಾಯದ ಮೂಲಗಳಿಲ್ಲ ಎಂಬುದಾಗಿ ತಿಳಿಸಿದ್ದಾರೆ. ಸಾಕ್ಷಿಗಳ ಪ್ರಕಾರ ಮತ್ತೊಂದು ವ್ಯಕ್ತಿಯೊಂದಿಗೆ ನೆಲೆಸಿದ್ದು, ಅವರೇ ಜೀವನ ನೋಡಿಕೊಳ್ಳುತ್ತಿದ್ದಾರೆ. ಎಲ್ಲ ಸಂದರ್ಭಗಳಲ್ಲಿಯೂ ಅವನೊಟ್ಟಿಗೆ ಇರುತ್ತಿರುವ ಅಂಶ ಸಾಕ್ಷ್ಯಾಧಾರಗಳಿಂದ ತಿಳಿದುಬಂದಿದೆ. ಇದರಲ್ಲಿ ನ್ಯಾಯಾಲಯ ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ ಎಂದು ತಿಳಿಸಿದ ಪುನರ್ ಪರಿಶೀಲನಾ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.