Law News

ಮಕ್ಕಳನ್ನು ದತ್ತು ಪಡೆಯಲು ಅನುಸರಿಸಬೇಕಾದ ನಿಯಮಗಳು, ಪ್ರಕ್ರಿಯೆಗಳು

Share It

ಬೆಂಗಳೂರು: ದತ್ತು ಪ್ರಕ್ರಿಯೆ ಅನಾಥ ಮತ್ತು ನಿರ್ಗತಿಕ ಮಕ್ಕಳಿಗೆ ಪುನರ್ವಸತಿಗೆ ಸಹಾಯ ಮಾಡುವ ಕಾನೂನು ಬದ್ದ ಕಾರ್ಯಕ್ರಮವಾಗಿದೆ. ದತ್ತು ಸ್ವೀಕಾರ ಮಕ್ಕಳಿಗೆ ಶಾಶ್ವತ ಕುಟುಂಬ ವ್ಯವಸ್ಥೆಯನ್ನು ಒದಗಿಸಲು ಸಹಾಯ ಮಾಡುತ್ತದೆ. ಅದಕ್ಕೆ ಸಂಬಂಧಿಸಿದ ನಿಯಮಗಳು, ಪ್ರಕ್ರಿಯೆಗಳು ಇಲ್ಲಿವೆ.

ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕುಟುಂಬದ ಪ್ರೀತಿ ಮತ್ತು ವಾತ್ಸಲ್ಯ ಅತ್ಯಂತ ಮಹತ್ವವಾದದ್ದಾಗಿದೆ. ಮಕ್ಕಳು ಕುಟುಂಬದ ಎಲ್ಲಾ ಸದಸ್ಯರನ್ನು ಬೆಸೆಯಲು ಅವಕಾಶವಾಗಿವೆ. ಆದರೆ ಕೆಲವೊಮ್ಮೆ ದುರುದೃಷ್ಟಕರ ಘಟನೆಗಳಿಂದ ಮಕ್ಕಳು ಆನಾಥರಾಗುತ್ತಾರೆ. ಪೋಷಕರಿಂದ ನಿರ್ಲಕ್ಷ್ಯಕ್ಕೆ ಒಳಗಾಗುತ್ತಾರೆ. ತಮ್ಮದಲ್ಲದ ತಪ್ಪಿಗೆ ಸೂಕ್ತ ಬೆಂಬಲ ಹಾಗೂ ಮಾರ್ಗದರ್ಶನವಿಲ್ಲದೇ ಕುಟುಂಬದಿಂದ ದೂರ ಉಳಿದು ಅನೇಕ ರೀತಿಯ ತೊಂದರೆ ದೌರ್ಜನ್ಯಕ್ಕೆ ಒಳಗಾಗಿ ಅವರ ಬಾಲ್ಯಾವಸ್ಥೆಯನ್ನು ಮತ್ತು ಹಕ್ಕುಗಳನ್ನು ಅನುಭವಿಸದೇ ಕಮರಿಹೋಗುತ್ತಾರೆ. ಈ ನಿಟ್ಟಿನಲ್ಲಿ ಜೈವಿಕ ಪೋಷಕರಿಂದ ದೂರ ಉಳಿದ ಮಕ್ಕಳು ಹಾಗೂ ಅನಾಥ ಮಕ್ಕಳನ್ನು ದತ್ತು ಪಡೆಯುವುದರಿಂದ ಅವರ ಬೆಳವಣಿಗೆಗೆ ಚಿಕ್ಕಂದಿನಿಂದಲೇ ಸುಭದ್ರತೆ ಸಿಗಲಿದೆ.

ದತ್ತು ಮಗುವನ್ನು ಪಡೆಯಲು ಅಗತ್ಯವಿರುವ ದಾಖಲೆಗಳು: ವಯಸ್ಸಿನ ದೃಢೀಕರಣ ಪ್ರಮಾಣ ಪತ್ರ, ವಾಸಸ್ಥಳ ದೃಢೀಕರಣಕ್ಕೆ ಪೂರಕವಾದ ಮತ್ತು ವೈದ್ಯಕೀಯ ತಪಾಸಣಾ ದಾಖಲೆಗಳು, ವಿವಾಹ ಪತ್ರ, ದೃಢೀಕರಣ ಆದಾಯ ಹಾಗು ಏಕಪೋಷಕರಾಗಿದ್ದಲ್ಲಿ ಸಂಬಂಧಿಸಿದ ದಾಖಲೆಗಳು, ಪಾನ್ ಕಾರ್ಡ್, ಪೋಸ್ಟ್ ಕಾರ್ಡ್ ಭಾವಚಿತ್ರದ ಜೊತೆಗೆ http://cara.wcd.nic.in ವೆಬ್ಸೈಟ್ ನಲ್ಲಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ದತ್ತು ಪಡೆಯಲು ನೋಂದಣಿಯಾದ ನಂತರ ಗೃಹ ಅಧ್ಯಯನ ವರದಿ ತಯಾರಿಸುವ ಸಂದರ್ಭದಲ್ಲಿ 6 ಸಾವಿರ ಹಾಗೂ ಮಗುವನ್ನು ಸ್ವೀಕರಿಸುವ ಸಂದರ್ಭದಲ್ಲಿ 50 ಸಾವಿರ ರೂಪಾಯಿ ಪಾವತಿಸಬೇಕಿದೆ.

ದತ್ತು ಪಡೆಯಲು ಇರಬೇಕಾದ ಅರ್ಹತೆಗಳು: ನಿರೀಕ್ಷಿತ ದತ್ತು ಪೋಷಕರು ಯಾವುದೇ ಜೀವಕ್ಕೆ ಮಾರಕವಾಗಿರುವ ಖಾಯಿಲೆಯನ್ನು ಹೊಂದಿರುವಂತಿಲ್ಲ. ಯಾವುದೇ ಕ್ರಿಮಿನಲ್ ಹಿನ್ನಲೆ ಇರುವಂತಿಲ್ಲ. ದತ್ತು ಪೋಷಕರು ವೈವಾಹಿಕ ಸ್ಥಿತಿಯನ್ನು ಲೆಕ್ಕಸದೇ ಮತ್ತು ಜೈವಿಕ ಮಕ್ಕಳನ್ನು ಹೊಂದಿದ್ದರೂ ಸಹ ಈ ಅಂಶಗಳಿಗೊಳಪಟ್ಟು ದತ್ತು ಪಡೆಯಬಹುದಾಗಿದೆ. ವಿವಾಹಿತರಾಗಿದ್ದಲ್ಲಿ ದಂಪತಿಗಳಿಬ್ಬರಿಂದಲೂ ಒಪ್ಪಿಗೆ ಅಗತ್ಯವಾಗಿದೆ. ಅವಿವಾಹಿತ/ವಿಚ್ಛೇದಿತ/ವಿಧವೆ ಯಾವುದೇ ಲಿಂಗದ ಮಗುವನ್ನು ಪಡೆದುಕೊಳ್ಳಬಹುದಾಗಿದೆ. ವಿವಾಹಿತ/ವಿಚ್ಛೇದಿತ/ವಿಧವಾ ಪುರುಷರಿಗೆ ಹೆಣ್ಣು ಮಗುವನ್ನು ದತ್ತು ನೀಡಲಾಗುವುದಿಲ್ಲ. ನಿರೀಕ್ಷಿತ ದತ್ತು ಪೋಷಕರು ಕನಿಷ್ಠ 2 ವರ್ಷಗಳ ಸ್ಥಿರ/ಉತ್ತಮ ಸಾಂಸಾರಿಕ ಜೀವನವನು ನಡೆಸಿರಬೇಕು ಎನ್ನುವುದು ಕಡ್ಡಾಯ ಅಂಶವಾಗಿದೆ. ನಿರೀಕ್ಷಿತ ದತ್ತು ಪೋಷಕರು ನೋಂದಣಿ ಮಾಡಿದ ದಿನದಿಂದ ಅನ್ವಯಿಸುವಂತೆ ಅವರ ವಯಸ್ಸಿಗನುಗುಣವಾಗಿ ವಿವಿಧ ವಯೋಮಾನದ ಮಕ್ಕಳನ್ನು ದತ್ತು ಪಡೆಯಲು ಅರ್ಹರಾಗುತ್ತಾರೆ.

ವಯೋಮಾನದ ಮಿತಿಗಳು: ನಿರೀಕ್ಷಿತ ದತ್ತು ಪೋಷಕರ ಗರಿಷ್ಠ ಒಟ್ಟು ವಯಸ್ಸು 85 ವರ್ಷ ಮತ್ತು ಏಕ ಪೋಷಕರಾಗಿದ್ದಲ್ಲಿ 40 ವರ್ಷದವರೆಗೆ 2 ವರ್ಷಗಳವರೆಗಿನ ಮಕ್ಕಳನ್ನು ದತ್ತು ಪಡೆಯಬಹುದಾಗಿದೆ. 90 ವರ್ಷ ವಯಸ್ಸಿನ ಪೋಷಕರು ಮತ್ತು 45 ವರ್ಷ ವಯಸ್ಸಿನ ಏಕ ಪೋಷಕ 2 ವರ್ಷ ಮೇಲ್ಪಟ್ಟು ಮತ್ತು 4 ವರ್ಷಗಳವರೆಗಿನ ಮಕ್ಕಳನ್ನು 100 ವರ್ಷ ವಯಸ್ಸಿನ ಪೋಷಕರು ಮತ್ತು 50 ವರ್ಷ ವಯಸ್ಸಿನ ಏಕ ಪೋಷಕ 4 ವರ್ಷ ಮೇಲ್ಪಟ್ಟು ಮತ್ತು 8 ವರ್ಷಗಳವರೆಗಿನ, 110 ವರ್ಷ ವಯಸ್ಸಿನ ಪೋಷಕರು ಮತ್ತು 55 ವರ್ಷ ವಯಸ್ಸಿನ ಏಕ ಪೋಷಕ 8 ವರ್ಷ ಮೇಲ್ಪಟ್ಟು ಮತ್ತು 18 ವರ್ಷಗಳವರೆಗಿನ ವಯಸ್ಸಿನ ಮಕ್ಕಳನ್ನು ದತ್ತು ಪಡೆಯಲು ಅರ್ಹರಾಗಿದ್ದಾರೆ.

ಮಕ್ಕಳ ಪುನರ್ವಸತಿ ಹೇಗೆ?: ನಿರೀಕ್ಷಿತ ಪೋಷಕರು ಹಾಗೂ ಮಗುವಿನ ವಯಸ್ಸಿನ ಅಂತರ 25 ವರ್ಷಗಳಿಗಿಂತ ಕಡಿಮೆ ಇರಬಾರದು ಎನ್ನುವ ನಿಯಮವೂ ಸಹ ಇದೆ. ಇನ್ನು ಜಾತ್ರೆ, ಸಂತೆ. ದೇವಸ್ಥಾನ, ರಸ್ತೆಯ ಬೀದಿಗಳಲ್ಲಿ ಅಥವಾ ಇತ್ಯಾದಿ ಸ್ಥಳಗಳಲ್ಲಿ ದೊರೆತ ಮಕ್ಕಳನ್ನು ತಂದು ಸಾಕುವುದು ಕಾನೂನು ಬಾಹಿರ ಮತ್ತು ಶಿಕ್ಷಾರ್ಹ ಅಪರಾಧವಾಗಿದೆ. ಕಾನೂನು ಸಮ್ಮತವಿಲ್ಲದೆ ಯಾವುದೇ ಮಗುವನ್ನು ಸಾಕಿಕೊಳ್ಳುವ ಹಾಗಿಲ್ಲ. ಇಂಥಹ ಮಗು ಎಲ್ಲಾ ರೀತಿಯ ಸೌಲಭ್ಯ ಮತ್ತು ಹಕ್ಕಿನಿಂದ ವಂಚಿತವಾಗುವ ಸಂಭವ ಕೂಡ ಇದೆ. ಅಲ್ಲದೆ ಮಗುವು ಶೋಷಣೆಗೆ ಒಳಗಾಗುವ ಸಾಧ್ಯತೆಗಳಿವೆ. ಹಾಗಾಗಿ ಅಂತಹ ಮಕ್ಕಳನ್ನು ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯರಿಗೆ ಅಥವಾ ಆಶಾ ಕಾರ್ಯಕರ್ತೆಯರಿಗೆ ಅಥವಾ ದತ್ತು ಕೇಂದ್ರಗಳಿಗೆ ಮಗುವನ್ನು ಒಪ್ಪಿಸುವುದು ಸೂಕ್ತವಾಗಿದೆ. ವಿವಿಧ ಕಾರಣಗಳಿಂದ ಜೈವಿಕ ಪೋಷಕರಿಗೆ ಬೇಡವಾದ ಮಗುವನ್ನು ಕಡ್ಡಾಯವಾಗಿ ಮಕ್ಕಳ ಕಲ್ಯಾಣ ಸಮಿತಿಯ ವಶಕ್ಕೆ ನೀಡುವುದು ಸೂಕ್ತ ಕ್ರಮವಾಗಿದೆ. ಅಂತಹ ಮಗುವನ್ನು ಕೂಡಲೇ ಸಂಬಂಧಪಟ್ಟ ಆಸ್ಪತ್ರೆಯವರು ಮಕ್ಕಳ ಕಲ್ಯಾಣ ಸಮಿತಿಗೆ ಅಥವಾ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಬೇಕು, ಅದರಿಂದ ಮುಂದಿನ ಪುನರ್ವಸತಿಯನ್ನು ಕಲ್ಪಿಸಲು ಸಹಾಯವಾಗಲಿದೆ.

ಈ ವರ್ಷ 59 ಮಕ್ಕಳ ದತ್ತು ಪ್ರಕ್ರಿಯೆ ಪೂರ್ಣ: ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಮಕ್ಕಳ ರಕ್ಷಣಾ ಘಟಕದ ಅಡಿ 6 ದತ್ತು ಕೇಂದ್ರಗಳಿದ್ದು, 2024ರ ಏಪ್ರಿಲ್ ತಿಂಗಳಿನಿಂದ ಇದುವರೆಗೂ 59 ಮಕ್ಕಳನ್ನು ದತ್ತು ಮಾರ್ಗಸೂಚಿ ಅನುಸರಿಸಿ ಜಿಲ್ಲಾಧಿಕಾರಿಗಳ ಆದೇಶವದ ಮೇರೆಗೆ ಮಕ್ಕಳಿಗೆ ಕುಟುಂಬ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಯಾವುದು ಶಿಕ್ಷಾರ್ಹ ಅಪರಾಧ?: ಬೇಡವಾದ ಮಕ್ಕಳನ್ನು ಇತರರಿಗೆ ಮಾರಾಟ ಮಾಡಿದರೆ ಬಾಲನ್ಯಾಯ (ಮಕ್ಕಳ ರಕ್ಷಣೆ ಮತ್ತು ಪಾಲನೆ) ಕಾಯ್ದೆ-2015 ಸೆಕ್ಷನ್ 81ರನ್ವಯ ಮಕ್ಕಳನ್ನು ಮಾರಾಟ ಮಾಡಿದವರಿಗೆ ಹಾಗೂ ಮಕ್ಕಳನ್ನು ಕೊಂಡವರಿಗೆ 5 ವರ್ಷಗಳ ಕಾಲ ಕಠಿಣ ಶಿಕ್ಷೆ ಹಾಗೂ ರೂ.1 ಲಕ್ಷ ದಂಡ ವಿಧಿಸಬಹುದಾಗಿದೆ. ಒಂದು ವೇಳೆ ಇಂತಹ ಪ್ರಕರಣಗಳಲ್ಲಿ ಆಸ್ಪತ್ರೆಯ ಸಿಬ್ಬಂದಿಗಳು ಒಳಗೊಂಡಿದ್ದಲ್ಲಿ ಅಂತಹವರಿಗೆ 7 ವರ್ಷಗಳವರೆಗೆ ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸಲು ಅವಕಾಶವಿದೆ.


Share It

You cannot copy content of this page