ಬೆಂಗಳೂರು:2024ನೇ ಸಾಲಿನ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ಎರಡನೇ ಸ್ಟ್ರೇ ವೇಕೆನ್ಸಿ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಆರಂಭವಾಗಿದ್ದು, ಆಪ್ಷನ್ ದಾಖಲಿಸಲು ಮಾರ್ಚ್ 16ರವರೆಗೆ ಅವಕಾಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೀಡಿದೆ.
ಮೊದಲ ಮತ್ತು ಎರಡನೇ ಸುತ್ತಿನಲ್ಲಿ ಹಂಚಿಕೆಯಾದ ಸೀಟನ್ನು ಇಟ್ಟುಕೊಳ್ಳದೇ ಇರುವವರು ಮತ್ತು ಸ್ಟ್ರೇ ವೇಕೆನ್ಸಿ ಸುತ್ತಿನಲ್ಲಿ ಸೀಟು ಹಂಚಿಕೆಯಾಗದಿರುವವರು ಈ ಸುತ್ತಿಗೆ ಅರ್ಹರಿದ್ದಾರೆ. ಈ ಸುತ್ತಿನಲ್ಲಿ ಭಾಗವಹಿಸಲು ಇಚ್ಛಿಸುವವರು ಮುಂಗಡವಾಗಿ 5 ಲಕ್ಷ ರೂಪಾಯಿ ಪಾವತಿಸಬೇಕಿದೆ. ಈಗಾಗಲೇ ಪಾವತಿಸಿರುವವರು ಮತ್ತೊಮ್ಮೆ ಕಟ್ಟುವ ಅಗತ್ಯವಿರುವುದಿಲ್ಲ.
ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು ಮಾರ್ಚ್ 16ರಂದು ಮಧ್ಯಾಹ್ನ 2 ಗಂಟೆಗೆ ಪ್ರಕಟಿಸಲಾಗಲಿದೆ. ಮಾರ್ಚ್ 17ರಂದು ಅಂತಿಮ ಫಲಿತಾಂಶ ಹೊರಬೀಳಲಿದೆ. ಶುಲ್ಕ ಪಾವತಿಸಿ, ಕಾಲೇಜಿಗೆ ವರದಿ ಮಾಡಿಕೊಳ್ಳಲು ಮಾರ್ಚ್ 19 ಕೊನೆಯ ದಿನವಾಗಿದೆ.
ಸೀಟು ಹಂಚಿಕೆ ನಂತರ ಮುಂಗಡ ಹಣವನ್ನು ಶುಲ್ಕದ ಜತೆ ಹೊಂದಾಣಿಕೆ ಮಾಡಲಾಗಲಿದೆ. ಸೀಟು ಹಂಚಿಕೆ ನಂತರ ಶುಲ್ಕ ಪಾವತಿಸಿ, ಕಾಲೇಜಿಗೆ ಪ್ರವೇಶ ಪಡೆಯದಿದ್ದಲ್ಲಿ ಮುಂಗಡ ಹಣ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಅಲ್ಲದೆ, ದಂಡ ಕೂಡ ವಿಧಿಸಲಾಗುತ್ತದೆ. ಅಂತಹವರನ್ನು ಮುಂದಿನ ವರ್ಷದ ಎಂಸಿಸಿ ಕೌನ್ಸೆಲಿಂಗ್ ಸೇರಿದಂತೆ ಪಿಜಿ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ನಿರ್ಬಂಧಿಸಲಾಗಲಿದೆ.