ಬೆಂಗಳೂರು: ರಾಜ್ಯದಲ್ಲಿ ಖಾಲಿ ಇರುವ 158 ಸಿವಿಲ್ ಜಡ್ಜ್ ಹುದ್ದೆಗಳನ್ನು ಭರ್ತಿ ಮಾಡಲು ರಾಜ್ಯ ಹೈಕೋರ್ಟ್ ಕಳೆದ ಫೆ.10ರಂದು ಅಧಿಸೂಚನೆ ಹೊರಡಿಸಿತ್ತು. ಆದರೀಗ ಹೈಕೋರ್ಟ್ ತನ್ನ ಅಧಿಸೂಚನೆಯನ್ನು ತಡೆಹಿಡಿದಿದೆ.
ಈ ಕುರಿತಂತೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಕೆ.ಎಸ್ ಭರತ್ ಕುಮಾರ್ ಮಾ.12ರಂದು ಪೂರಕ ಅಧಿಸೂಚನೆ ಪ್ರಕಟಿಸಿದ್ದಾರೆ. ಅದರಲ್ಲಿ ಅಖಿಲ ಭಾರತ ನ್ಯಾಯಾಧೀಶರ ಸಂಘ ಮತ್ತು ಇತರರು ವರ್ಸಸ್ ಭಾರತ ಒಕ್ಕೂಟ ಮತ್ತು ಇತರರು ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡುವವರೆಗೆ ಈ ನೇಮಕಾತಿ ಪ್ರಕ್ರಿಯೆಯನ್ನು ತಡೆಹಿಡಿಯಲಾಗಿದೆ ಎಂದು ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗೆ ಹೈಕೋರ್ಟ್ ನಿಂದ ಪ್ರಕಟಿಸಲಾಗಿರುವ ನೋಟಿಫಿಕೇಷನ್ ಗಮನಿಸಬಹುದಾಗಿದೆ.
ಬ್ಯಾಕ್ ಲಾಗ್ ಹುದ್ದೆಗಳು ಸೇರಿದಂತೆ ಒಟ್ಟು 158 ಸಿವಿಲ್ ಜಡ್ಜ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಹೈಕೋರ್ಟ್ ಅರ್ಜಿ ಆಹ್ವಾನಿಸಿತ್ತು. ಕಾನೂನು ಪದವಿ ಹೊಂದಿರುವ ಮತ್ತು ವಕೀಲರಾಗಿ ನೋಂದಣಿ ಆಗಿದ್ದವರು ಕೆಟಗರಿಗೆ ಅನುಗುಣವಾಗಿ ವಯೋಮಿತಿಗೆ ಒಳಪಟ್ಟು ಅರ್ಜಿ ಸಲ್ಲಿಸಲು ಸೂಚಿಸಿತ್ತು. ಸಾವಿರಾರು ವಕೀಲರು ಸಿವಿಲ್ ಜಡ್ಜ್ ಆಗುವ ನಿರೀಕ್ಷೆಯಲ್ಲಿ ಸಿದ್ದತೆ ಆರಂಭಿಸಿದ್ದರು. ಇದೀಗ ಸುಪ್ರೀಂ ಕೋರ್ಟ್ ನಲ್ಲಿ ಈ ಕುರಿತಂತೆ ಪ್ರಕರಣ ಇರುವುದರಿಂದ ನೇಮಕಾತಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ.