ಬೆಂಗಳೂರು: ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ಜಾಮೀನು ಕೋರಿ ನಟಿ ರನ್ಯಾ ರಾವ್ ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ ಆರ್ಥಿಕ ಅಪರಾಧಗಳ ನ್ಯಾಯಾಲಯ ವಜಾಗೊಳಿಸಿದೆ. ಇದೇ ವೇಳೆ ಪ್ರಕರಣದ ಎರಡನೇ ಆರೋಪಿ ತರುಣ್ ರಾಜ್ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ತರುಣ್ ರಾಜ್ ಮನವಿಗೆ ಆಕ್ಷೇಪಣೆ ಸಲ್ಲಿಸಲು ಡಿಆರ್‌ಐ ಪರ ವಕೀಲರು ಕಾಲಾವಕಾಶ ಕೇಳಿದ್ದಾರೆ. ತರುಣ್ ರಾಜ್ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನಾಳೆ ಮಧ್ಯಾಹ್ನ 3 ಗಂಟೆಗೆ ಮುಂದೂಡಿಕೆ ಮಾಡಿರುವ ನ್ಯಾಯಾಲಯ, ಆಕ್ಷೇಪಣೆ ಸಲ್ಲಿಸುವಂತೆ ಡಿಆರ್‌ಐ ಅಧಿಕಾರಿಗಳಿಗೆ ಸೂಚಿಸಿದೆ.
ಪ್ರಕರಣದ ಹಿನ್ನಲೆ:
ವಿದೇಶದಿಂದ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಆರೋಪದಡಿ ನಟಿ ರನ್ಯಾ ರಾವ್ ಅವರನ್ನು ಡಿಆರ್‌ಐ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಮಾರ್ಚ್ 3ರಂದು ಎಮಿರೇಟ್ಸ್ ಏರ್‌ಲೈನ್ಸ್ ಮೂಲಕ ದುಬೈನಿಂದ ಬೆಂಗಳೂರಿಗೆ ಬಂದಿಳಿದ ರನ್ಯಾ ರಾವ್ ಅವರನ್ನು 14.8 ಕೆ.ಜಿ ಚಿನ್ನದ ಸಮೇತ ಡಿಆರ್‌ಐ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಬಳಿಕ ರನ್ಯಾ ಅವರ ಸ್ನೇಹಿತ ತರುಣ್ ರಾಜ್‌ನನ್ನು ಬಂಧಿಸಿದ್ದರು.