ಬೆಂಗಳೂರು: ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಈ ಮೊದಲು ನಿಗದಿಗೊಳಿಸಿದ್ದ ಸಿಇಟಿ ಕನ್ನಡ ಪರೀಕ್ಷೆಯನ್ನು ಏ.18ಕ್ಕೆ ಬದಲಾಗಿ ಏ.15ರಂದೇ (ಮಂಗಳವಾರ) ನಡೆಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಪ್ರಕಟಿಸಿದೆ.
ಏಪ್ರಿಲ್ 18ರಂದು ಗುಡ್ ಫ್ರೈಡೇ ಇರುವುದರಿಂದ ಈ ಪರೀಕ್ಷೆಯ ದಿನಾಂಕವನ್ನು ಬದಲಾಯಿಸಬೇಕೆಂದು ಕೋರಿಕೆಗಳು ಬಂದಿದ್ದವು. ಆ ಹಿನ್ನೆಲೆಯಲ್ಲಿ, ಸರ್ಕಾರದ ನಿರ್ದೇಶನದಂತೆ ಈ ಬದಲಾವಣೆ ಮಾಡಲಾಗಿದೆ. ಬೆಂಗಳೂರು, ಮಂಗಳೂರು, ವಿಜಯಪುರ, ಬೆಳಗಾವಿ ಕೇಂದ್ರಗಳಲ್ಲಿ ಮಾತ್ರ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ. ಅಂದು ಬೆಳಿಗ್ಗೆ 10.30 ರಿಂದ 11.30ರವರೆಗೆ ನಡೆಯಲಿದೆ ಎಂದು ಹೇಳಿದೆ.
ಸಿಇಟಿ-25 ರ ಉಳಿದ ಪರೀಕ್ಷೆಗಳು ನಿಗದಿಯಂತೆ ಏ.16 ಮತ್ತು 17ರಂದು ನಡೆಯಲಿವೆ. ಸದ್ಯದಲ್ಲೇ ಪ್ರವೇಶ ಪತ್ರ ಡೌನ್‌ಲೋಡ್ ಗೆ ಅವಕಾಶ ನೀಡಲಾಗಲಿದೆ. ಈ ಸಂಬಂಧ ವೇಳಾಪಟ್ಟಿಗಾಗಿ ಪ್ರಾಧಿಕಾರದ ವೆಬ್ಸೈಟ್ ನೋಡುವಂತೆ ಸೂಚಿಸಿದೆ.