ಬೆಂಗಳೂರು: ಸೌಜನ್ಯ ನ್ಯಾಯಕ್ಕಾಗಿ ಶಾಂತಿಯುತ ಪ್ರತಿಭಟನೆ, ಸಭೆಗಳನ್ನು ನಡೆಸಬಹುದು ಎಂದು ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ.
ಇಂದು ಸಂಜೆ ಎಐಟಿಯುಸಿ ಸಭಾಂಗಣದಲ್ಲಿ ಆಯೋಜಿಸಿರುವ ಸೌಜನ್ಯ ನ್ಯಾಯಕ್ಕಾಗಿ ಸಮಾಲೋಚನಾ ಸಭೆಯನ್ನು ನಿಲ್ಲಿಸುವಂತೆ ಶೇಷಾದ್ರಿಪುರ ಪೊಲೀಸರು ನೀಡಿದ್ದ ನೋಟಿಸ್ ಬಗೆಗಿನ ರಿಟ್ ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಆದೇಶಿಸಿದ್ದಾರೆ.
ಸಾಹಿತಿ-ಚಿಂತಕ-ಹೋರಾಟಗಾರರ ಸಮಾಲೋಚನಾ ಸಭೆಯ ಸಂಚಾಲಕರಾದ ವಿನಯ್ ಶ್ರೀನಿವಾಸ್ ಮತ್ತು ವಿಜಯಭಾಸ್ಕರ್ ಪರವಾಗಿ ಹಿರಿಯ ನ್ಯಾಯವಾದಿ ಶ್ರುತಿ ಚಗಂತಿ ರಿಟ್ ಪಿಟೀಷನ್ ಸಲ್ಲಿಸಿದ್ದರು.ರಿಟ್ ಪಿಟೀಷನ್ ಅರ್ಜಿಯ ವಿಚಾರಣೆ ನಡೆಸಿದ ಜಸ್ಟಿಸ್ ಎಂ ನಾಗಪ್ರಸನ್ನ ಪೊಲೀಸರು, ಸರ್ಕಾರ ಸಭೆಯನ್ನು, ಪ್ರತಿಭಟನೆಯನ್ನು ತಡೆಯುವಂತಿಲ್ಲ ಎಂದು ಆದೇಶ ನೀಡಿದ್ದಾರೆ.
ಸೌಜನ್ಯ ನ್ಯಾಯಕ್ಕಾಗಿ ಮತ್ತು ಊಳಿಗಮಾನ್ಯ ಧರ್ಪ ವಿರೋಧಿಸಿ ಸಾಹಿತಿಗಳು-ಚಿಂತಕರು-ಹೋರಾಟಗಾರರ ಸಮಾಲೋಚನಾ ಸಭೆಯ ಆಯೋಜಕರಿಗೆ ಶೇಷಾದ್ರಿಪುರ ಪೊಲೀಸರು ಮಾರ್ಚ್ 17 ರಂದು ರಾತ್ರಿ ವಾಟ್ಸಾಪ್ ಮೂಲಕ ನೋಟಿಸ್ ನೀಡಿದ್ದರು. ಹೈಕೋರ್ಟ್ ರಿಟ್ ಅರ್ಜಿ ಆದೇಶದ ಪ್ರಕಾರ ಜಸ್ಟಿಸ್ ಫಾರ್ ಸೌಜನ್ಯ ಹೆಸರಿನಲ್ಲಿ ಯಾರೂ ಯಾವುದೇ ಸಭೆ, ಪ್ರತಿಭಟನೆ ನಡೆಸುವಂತಿಲ್ಲ. ಒಂದು ವೇಳೆ ಸಭೆ ನಡೆಸಿದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಪೊಲೀಸರು ನೋಟಿಸ್ ನಲ್ಲಿ ಉಲ್ಲೇಖಿಸಿದ್ದರು.
ಶೇಷಾದ್ರಿಪುರ ಪೊಲೀಸ್ ಠಾಣೆಯ ನೋಟಿಸನ್ನು ಮೀರಿ ಸಭೆ ನಡೆಸಿದರೆ, ಅಥವಾ ಸಭೆ ನಡೆಸಲು ಸಭಾಂಗಣ ನೀಡಿದರೆ ಬಂಧಿಸುವುದಾಗಿ ಪೊಲೀಸರು ದೂರವಾಣಿಯಲ್ಲಿ ಸಂಘಟಕರಿಗೆ ಹೇಳಿದ್ದರು. ಪೊಲೀಸರು ಕಾನೂನು ಬಾಹಿರವಾಗಿ ನೀಡಲಾದ ವಾಟ್ಸಪ್ ನೋಟಿಸ್ ಹೋರಾಟಗಾರರ ಮೂಲಭೂತ ಹಕ್ಕುಗಳನ್ನು ಕಸಿದಿದೆ. ಪೊಲೀಸರ ಈ ಕ್ರಮ ವಿಕೃತ ಮತ್ತು ದುರುದ್ದೇಶಪೂರಿತವಾಗಿದೆ ಎಂದು ಹೈಕೋರ್ಟ್ ಗೆ ಸಲ್ಲಿಸಿರುವ ಅರ್ಜಿಯಲ್ಲಿ ಹೇಳಲಾಗಿತ್ತು.
ಸೌಜನ್ಯ ನ್ಯಾಯಕ್ಕಾಗಿ ನಡೆಸುತ್ತಿರುವ ಸಮಾಲೋಚನಾ ಸಭೆಯು ಕಚೇರಿಯೊಳಗೆ ನಡೆಯುತ್ತಿರುವ ಸಭೆಯಾಗಿದೆ. ಪ್ರತಿಭಟನೆಯಲ್ಲದೇ ಇದ್ದರೂ ದುರುದ್ದೇಶಪೂರ್ವಕವಾಗಿ ನೋಟಿಸ್ ನಲ್ಲಿ ಪ್ರತಿಭಟನೆ ಎಂದು ಉಲ್ಲೇಖಿಸಲಾಗಿದೆ. ಪೊಲೀಸರು ಒಳಾಂಗಣ ಚಟುವಟಿಕೆಯನ್ನು ನಿಯಂತ್ರಿಸುವಂತಿಲ್ಲ. ಸಮಾಲೋಚನಾ ಸಭೆಯು ಪ್ರತಿಭಟನೆ ಅಲ್ಲದೇ ಇರುವುದರಿಂದ ಪೊಲೀಸರು ತಮ್ಮ ವ್ಯಾಪ್ತಿ ಮೀರಿ ನೋಟಿಸ್ ನೀಡಿದ್ದಾರೆ ಎನ್ನುವುದು ಸ್ಪಷ್ಟವಿದೆ ಎಂದು ರಿಟ್ ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.
ಅರ್ಜಿಯ ಅಂಶಗಳನ್ನು ಪರಿಗಣಿಸಿರುವ ನ್ಯಾಯಾಲಯ ಕಾನೂನು ಉಲ್ಲಂಘನೆಯಾದರೆ ಮಾತ್ರ ಪೊಲೀಸರು ಕ್ರಮ ತೆಗೆದುಕೊಳ್ಳಬಹುದು. ಪ್ರತಿಭಟನೆಗಳನ್ನು ಊಹೆಯ ಆಧಾರದಲ್ಲಿ ತಡೆಯುವಂತಿಲ್ಲ ಎಂದು ಆದೇಶವನ್ನು ನೀಡಿದೆ.