ಬೆಂಗಳೂರು: ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಅಗತ್ಯ ಸಿದ್ಧತೆ ನಡೆಸಿದ್ದು, ಮಾ. 21 ರಿಂದ ಪರೀಕ್ಷೆಗಳು ಆರಂಭವಾಗಲಿದೆ. ಈ ಹಿನ್ನಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಕಾರ್ಯದಲ್ಲಿ ತೊಡಗುವ ಅಧಿಕಾರಿ/ ಸಿಬ್ಬಂದಿಗಳ ಸಂಭಾವನೆಯನ್ನು ಪರಿಷ್ಕರಣೆ ಮಾಡಲಾಗಿದ್ದು, ಈ ಕುರಿತು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಆದೇಶವನ್ನು ಹೊರಡಿಸಿದೆ.
ಪ್ರತಿ ವರ್ಷ ಸಹ ಪರೀಕ್ಷೆ ಸಂದರ್ಭದಲ್ಲಿ ಸಂಭಾವನೆಯನ್ನು ಪರಿಷ್ಕರಣೆ ಮಾಡಲಾಗಿದ್ದು, ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ಶಾಂತಿಯುತವಾಗಿ ಮತ್ತು ಪಾರದರ್ಶಕವಾಗಿ ನಡೆಸಲು ಅಗತ್ಯವಾದ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ.
ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಹಾಲ್ ಟಿಕೆಟ್ ತೋರಿಸಿ ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಬಂದು, ಹೋಗಲು ವ್ಯವಸ್ಥೆ ಮಾಡಲಾಗಿದೆ. ಪರೀಕ್ಷಾ ಕೇಂದ್ರದ ಮೌಲ್ಯಮಾಪನ ಕಾರ್ಯಕ್ಕೆ ಭಾಗವಹಿಸುವ ಅಧಿಕಾರಿ/ ಸಿಬ್ಬಂದಿಗಳ ಸಂಭಾವನೆ ಮತ್ತು ಎಸ್‌ಎಸ್‌ಎಲ್‌ಸಿ (ಜೆ.ಟಿ.ಎಸ್) ಪರೀಕ್ಷೆಯ ಸಂಭಾವನೆಯನ್ನು ಸರ್ಕಾರಿ ಆದೇಶದಲ್ಲಿನ ಅವಕಾಶದ ಮೇರೆಗೆ ಮೂಲ ದರಗಳ ಮೇಲೆ ಶೇ 5ರಷ್ಟು ಪರಿಷ್ಕರಿಸಿ ಆದೇಶಿಸಲಾಗಿದೆ.
ಈ ಹಿಂದೆ ಜಂಟಿ ಮುಖ್ಯ ಪರಿವೀಕ್ಷಕರು 8,016 ರೂ. ಪಡೆಯುತ್ತಿದ್ದರು. ಅದನ್ನು 8,362 ರೂ.ಗಳಿಗೆ ಪರಿಷ್ಕರಣೆ ಮಾಡಲಾಗಿದೆ. ಅಲ್ಲದೇ ಉಪ ಮುಖ್ಯ ಪರೀಕ್ಷಕರು 6,024 ರೂ. ಪಡೆಯುತ್ತಿದ್ದರು. ಸಂಭಾವನೆ ಪರಿಷ್ಕರಣೆ ಬಳಿಕ 6,284 ರೂ.ಗಳಿಗೆ ಏರಿಕೆಯಾಗಿದೆ. ಕ್ಯಾಂಪ್ ಕಸ್ಟೋಡಿಯನ್ ಸಂಭಾವನೆ 4,978 ರೂ.ನಿಂದ 5,193 ರೂ.ಗೆ ಏರಿಕೆಯಾಗಿದೆ. ಕ್ಯಾಂಪ್ ಸಹಾಯಕರು 1,389 ರೂ. ನಿಂದ 1,449 ರೂ.ಗೆ ಹೆಚ್ಚಾಗಿದೆ. ’ಡಿ’ ದರ್ಜೆ ಸಿಬ್ಬಂದಿಗಳ ಭತ್ಯೆ 695 ರೂ.ಗಳಿಂದ 725 ರೂ.ಗೆ ಹೆಚ್ಚಳ ಮಾಡಲಾಗಿದೆ.