ಬೆಂಗಳೂರು: 2025-26ನೇ ಸಾಲಿನ 19,927 ಕೋಟಿ ಗಾತ್ರದ ಪಾಲಿಕೆ ಬಜೆಟ್ ಅನ್ನು ಹಣಕಾಸು ವಿಶೇಷ ಆಯುಕ್ತ ಹರೀಶ್ ಕುಮಾರ್ ಬಜೆಟ್ ಮಂಡನೆ ಮಾಡಿದರು. ಇದರೊಂದಿಗೆ ಸತತ ಐದನೇಯ ಬಾರಿಗೆ ಅಧಿಕಾರಿಗಳೇ ವಾರ್ಷಿಕ ಬಜೆಟ್ ಮಂಡಿಸಿದಂತಾಗಿದೆ.
ಶನಿವಾರ ಟೌನ್ ಹಾಲ್ ನಲ್ಲಿ ನಡೆದ ಬಜೆಟ್ ಮಂಡನಾ ಕಾರ್ಯಕ್ರಮದಲ್ಲಿ ಬ್ರ್ಯಾಂಡ್ ಬೆಂಗಳೂರಿಗೆ ಹೆಚ್ಚು ಮನ್ನಣೆ ನೀಡಲಾಗಿದೆ. ಕಳೆದ ಬಾರಿಯ ಬಜೆಟ್‌ನದ್ದೇ ಕೆಲ ಯೋಜನೆಗಳನ್ನು ಮುಂದುವರಿಸಲಾಗಿದೆ. 2025-26ನೇ ಸಾಲಿನಲ್ಲಿ ವಿವಿಧ ಹೊಸ ಯೋಜನೆಗಳನ್ನು ಘೋಷಿಸಲಾಗಿದ್ದು, ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯಡಿಯಲ್ಲಿ 2025-26ನೇ ಸಾಲಿನಲ್ಲಿ 700 ಕೋಟಿ ಗಳ ಅನುದಾನವನ್ನು ಆಯವ್ಯಯದಲ್ಲಿ ಒದಗಿಸಲಾಗಿದೆ. ಈ ಬಾರಿ 2025-26ನೇ ಸಾಲಿನಲ್ಲಿ 1360 ಕೋಟಿ ಪಾವತಿಗೆ ಕ್ರಮ ವಹಿಸಲಾಗಿದೆ.
ಪಾಲಿಕೆ ಇತಿಹಾಸದಲ್ಲೇ ಅತ್ಯಂತ ಬೃಹತ್ ಗಾತ್ರದ ಬಜೆಟ್ ಇದಾಗಿದ್ದು, ಇದುವರೆಗೆ ಪಾಲಿಕೆ 12 ರಿಂದ 13 ಸಾವಿರ ಕೋಟಿ ವರೆಗೆ ಬಜೆಟ್ ಮಂಡಿಸಲಾಗಿತ್ತು. ಇದೇ ಮೊದಲ ಬಾರಿಗೆ 20 ಸಾವಿರ ಕೋಟಿ ಆಸುಪಾಸಿನ ಬಜೆಟ್ ಮಂಡಿಸಲಾಗಿದೆ. ಈ ಬಾರಿ ಶೇಕಡಾ 62 ರಷ್ಟು ಹಣವನ್ನು ಬೆಂಗಳೂರು ಅಭಿವೃದ್ಧಿಗೆ ಮೀಸಲಿಡಲಾಗಿದೆ. ಬ್ರ್ಯಾಂಡ್ ಬೆಂಗಳೂರು ದೃಷ್ಟಿಕೋನಕ್ಕೆ ಅನುಗುಣವಾಗಿ ಸುಗಮ ಸಂಚಾರ ಬೆಂಗಳೂರು, ಸ್ವಚ್ಛ ಬೆಂಗಳೂರು, ಹಸಿರು ಬೆಂಗಳೂರು, ಟೆಕ್ ಬೆಂಗಳೂರು, ಶಿಕ್ಷಣ ಬೆಂಗಳೂರು, ಆರೋಗ್ಯಕರ ಬೆಂಗಳೂರು, ರೋಮಾಂಚಕ ಬೆಂಗಳೂರು ಮತ್ತು ನೀರಿನ ಭದ್ರತೆಗೆ ಬೆಂಗಳೂರು 8 ವಿಭಾಗಗಳ ಅಭಿವೃದ್ಧಿಗೆ 1790 ಕೋಟಿ ಗಳ ಅನುದಾನವನ್ನು ಮೀಸಲಿಡಲಾಗಿದೆ.