ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಕಲಾ, ವಾಣಿಜ್ಯ, ವಿಜ್ಞಾನ ಮೂರೂ ವಿಭಾಗಗಳಲ್ಲೂ ವಿದ್ಯಾರ್ಥಿನಿಯರೇ ಟಾಪರ್ ಗಳಾಗಿದೆ ಹೊರಹೊಮ್ಮಿದ್ದಾರೆ.
ಕಲಾ ವಿಭಾಗದಲ್ಲಿ ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದ ಇಂದು ಐಎನ್ಡಿಪಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಎಲ್.ಆರ್.ಸಂಜನಾ ಬಾಯಿ 597 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಮಂಗಳೂರಿನ ಕೊಡಿಂಬೈಲ್ನ ಕೆನೆರಾ ಪಿಯು ಕಾಲೇಜಿನಿ ವಿದ್ಯಾರ್ಥಿನಿ ಎಸ್. ದೀಪಾಶ್ರೀ 599 ಅಂಕ ಗಳಿಸುವ ಮೂಲಕ ಟಾಪರ್ ಆಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಮಂಗಳೂರಿನ ಕೊಡಿಬೈಲ್ನ ಎಕ್ಸ್ಪರ್ಟ್ ಕಾಲೇಜಿನ ವಿದ್ಯಾರ್ಥಿನಿ ಎಸ್. ಶ್ರೇಯಾ 597 ಅಂಕ ಗಳಿಸುವ ಮೂಲಕ ಮೊದಲ ಸ್ಥಾನ ಗಳಿಸಿದ್ದಾರೆ.
ಪ್ರತಿವರ್ಷದಂತೆ ಈ ಬಾರಿಯೂ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ದ್ವಿತೀಯ ಪಿಯುಸಿ ಪರೀಕ್ಷೆಗೆ 3,45,694 ಬಾಲಕಿಯರು ಹಾಜರಾಗಿದ್ದರು. ಈ ಪೈಕಿ 2,69,212 ಬಾಲಕಿಯರು ಉತ್ತೀರ್ಣರಾಗಿದ್ದಾರೆ. ಶೇ. 77.88ರಷ್ಟು ಬಾಲಕಿಯರು ಉತ್ತೀರ್ಣರಾದಂತಾಗಿದೆ. ಪರೀಕ್ಷೆಗೆ 2,92,111 ಬಾಲಕರು ಹಾಜರಾಗಿದ್ದು, ಈ ಪೈಕಿ 1,99,227 ಬಾಲಕರು ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷ ಹೋಲಿಸಿದರೆ ಈ ಬಾರಿ ಶೇ.8ರಷ್ಟು ಉತ್ತೀರ್ಣರಾದವರು ಕಡಿಮೆಯಾಗಿದ್ದಾರೆ.
ರಾಜ್ಯದಲ್ಲಿ ಉಡುಪಿ ಜಿಲ್ಲೆ 93.90 ಫಲಿತಾಂಶದ ಮೂಲಕ ಪ್ರಥಮ ಸ್ಥಾನದಲ್ಲಿದ್ದು, ದಕ್ಷಿಣ ಕನ್ನಡ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಗಳು ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದೆ. ಯಾದಗಿರಿ ಜಿಲ್ಲೆಯ ಕೊನೆಯ ಸ್ಥಾನದಲ್ಲಿದೆ. ರಾಜ್ಯದಲ್ಲಿ ಒಟ್ಟು 7,13,862 ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದು, ಶೇಕಡಾ 73.45ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ ಶೇ.53, ವಾಣಿಜ್ಯ ವಿಭಾಗದಲ್ಲಿ ಶೇ.76.07, ಹಾಗೂ ವಿಜ಼್ಞಾನ ವಿಭಾಗದಲ್ಲಿ ಶೇ.82ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ.
ಪಾಸಾಗದ ಆಥವಾ ಹೆಚ್ಚು ಅಂಕ ಬಯಸುವ ವಿದ್ಯಾರ್ಥಿಗಳಿಗೆ ಪರೀಕ್ಷೆ-2 ಏ.24ರಿಂದ ಮೇ 8ರವರೆಗೆ, ಪರೀಕ್ಷೆ-3 ಜೂ.6ರಿಂದ ಜೂ. 21ರವರೆಗೆ ನಡೆಯಲಿದೆ. 2 ಹಾಗೂ 3ನೇ ಬಾರಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ನೋಂದಾಯಿಸಿಕೊಳ್ಳುವುದಕ್ಕೆ ಯಾವುದೇ ಪರೀಕ್ಷಾ ಶುಲ್ಕ ಇರುವುದಿಲ್ಲ ಎಂದು ಮಂಡಳಿ ತಿಳಿಸಿದೆ.