ಬೆಂಗಳೂರು: ಹಾಲು, ಮೊಸರು, ಗ್ಯಾಸ್ ಸಿಲಿಂಡರ್ ಸೇರಿ ಅಗತ್ಯ ವಸ್ತುಗಳ ದರ ಏರಿಕೆ ಮಧ್ಯೆ ಇದೀಗ ನೀರಿನ ದರವೂ ಹೆಚ್ಚಳವಾಗಲಿದೆ. ಒಂದು ಲೀಟರ್ ಗೆ ಒಂದು ಪೈಸೆ ಏರಿಕೆ ಮಾಡಲಾಗುತ್ತಿದೆ.
ಬೇಸಿಗೆಯಲ್ಲಿ ಮೊದಲೇ ಜನರು ನೀರಿಗಾಗಿ ಪರದಾಡುತ್ತಿದ್ದು, ಇದೀಗ ನೀರಿನ ದರ ಏರಿಕೆ ಮಾಡಲು ಹೊರಟಿರುವುದು ಮತ್ತಷ್ಟು ಸಂಕಷ್ಟಕ್ಕೆ ಎಡೆಮಾಡಿಕೊಟ್ಟಿದೆ. ಶೇ. 3 ರಷ್ಟು ನೀರಿನ ದರ ಹೆಚ್ಚಳವಾಗಲಿದ್ದು, ಗೃಹ ಬಳಕೆದಾರರಿಗೆ ತಿಂಗಳಿಗೆ 20-30 ರೂ ಮತ್ತು ವಾಣಿಜ್ಯ ಬಳಕೆದಾರರಿಗೆ ತಿಂಗಳಿಗೆ ಪ್ರತಿ ತಿಂಗಳು 50-60 ರೂ ಹೊರೆಯಾಗಲಿದೆ.
ಈ ಕುರಿತು ಮಾಹಿತಿ ನೀಡಿರುವ ಬೆಂಗಳೂರು ಜಲಮಂಡಳಿ ಅಧ್ಯಕ್ಷ ಬೆಂಗಳೂರಿನಲ್ಲಿ ನೀರಿನ ದರ ಏರಿಕೆ ಮಾಡುವ ಬಗ್ಗೆ ಕಳೆದ ಒಂದು ವರ್ಷದಿಂದ ಆಗಾಗ ಚರ್ಚೆ ನಡೆಯುತ್ತಿತ್ತು. ಈಗ ನೀರು ಬಳಕೆಯ ಆಧಾರದ ಮೇಲೆ ಸ್ಲ್ಯಾಬ್ ಗಳನ್ನು ನಿಗದಿಪಡಿಸಲಾಗುತ್ತಿದೆ ಎಂದಿದ್ದಾರೆ.
ಜಲಮಂಡಳಿ 2004ರಿಂದ ಈವರೆಗೆ ನಗರದಲ್ಲಿ ನೀರು ಪೂರೈಕೆ ದರ ಹೆಚ್ಚಳ ಮಾಡಿಲ್ಲ. ಮಂಡಳಿ ಆರ್ಥಿಕವಾಗಿ ತೀವ್ರ ಸಂಕಷ್ಟದಲ್ಲಿದೆ. ಹೀಗಾಗಿ ಲೀಟರಿಗೆ ಒಂದು ಪೈಸೆ ಆದರೂ ದರ ಏರಿಕೆ ಮಾಡಲೇಬೇಕಾದ ಅನಿವಾರ್ಯ ಪರಿಸ್ಥಿತಿ ಬಂದಿದೆ ಎಂದು ಹೇಳಿದ್ದಾರೆ.