Education News

ಖಾಸಗಿ ಶಾಲೆಗಳ ಶುಲ್ಕದಲ್ಲಿ ಭಾರಿ ಹೆಚ್ಚಳ; ಪೋಷಕರಿಗೆ ಮತ್ತೊಂದು ಬೆಲೆ ಏರಿಕೆಯ ಬರೆ

Share It

ಬೆಂಗಳೂರು: ಖಾಸಗಿ ಶಾಲೆಗಳ ಶುಲ್ಕದಲ್ಲಿ ಭಾರಿ ಏರಿಕೆಯಾಗಿದ್ದು, ಪೋಷಕರಿಗೆ ಬೆಲೆ ಏರಿಕೆಗಳ ಮಧ್ಯೆ ಮತ್ತೊಂದು ಬರೆ ಬಿದ್ದಂತಾಗಿದೆ.

ಪ್ರತಿ ವರ್ಷ ಶಾಲಾ ನಿರ್ವಹಣಾ ವೆಚ್ಚ, ಸಿಬ್ಬಂದಿ ವೇತನ ಹೆಚ್ಚಳ, ಡೀಸೆಲ್ ಬೆಲೆ ಏರಿಕೆ ಸೇರಿದಂತೆ ಇತರೆ ಕಾರಣದ ನೆಪವೊಡ್ಡಿ ರಾಜ್ಯದ ಬಹುತೇಕ ಖಾಸಗಿ ಶಾಲೆಗಳು ಶೇ.15 ರವರೆಗೆ ಶಾಲಾ ಶುಲ್ಕದಲ್ಲಿ ಏರಿಕೆ ಮಾಡುತ್ತಿವೆ. ಆದರೆ ಈ ಬಾರಿ ಹಲವು ಶಾಲೆಗಳು ಶೇ.30 ರವರೆಗೂ ಶಾಲಾ ಶುಲ್ಕ ಹೆಚ್ಚಿಸಿರುವುದು ಆಕ್ರೋಶಕ್ಕೆ ಕಾರಣವಾಗುತ್ತಿದೆ.

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ ವೇದಿಕೆಯೊಂದು ನಡೆಸಿದ್ದ ಸಮೀಕ್ಷೆಯ ಪ್ರಕಾರ, ಕಳೆದ 3 ವರ್ಷಗಳಲ್ಲಿ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಖಾಸಗಿ ಶಾಲೆಗಳ ಶುಲ್ಕ ಶೇ. 50 ರಷ್ಟು ಏರಿಕೆ ಕಂಡಿದೆ. ಅದೇ ಮಾದರಿಯಲ್ಲಿ ಮತ್ತೆ ಖಾಸಗಿ ಶಾಲೆಗಳ ಶುಲ್ಕದಲ್ಲಿ ಏರಿಕೆ ಕಂಡುಬಂದಿದ್ದು, ಮೂರ್ನಾಲ್ಕು ವರ್ಷದಲ್ಲೇ ಶಾಲೆಗಳ ಶುಲ್ಕ ದುಪಟ್ಟಾದಂತಾಗಿದೆ.

ವಾರ್ಷಿಕ ಶಾಲಾ ನಿರ್ವಹಣೆ, ಶಿಕ್ಷಕರು, ಸಿಬ್ಬಂದಿ ವೇತನ, ಚಾಲಕರ ವೇತನ ಹೆಚ್ಚಳ ಕಾರಣಗಳಿಂದ ಶಾಲೆಗಳ ಶುಲ್ಕವೂ ಹೆಚ್ಚಿಸುವುದು ಅನಿವಾರ್ಯವಾಗಿದೆ ಎಂದು ಹಲವು ಖಾಸಗಿ ಶಾಲಾ ಸಂಘಟನೆಗಳು ತಿಳಿಸಿವೆ. ಆದರೆ ಪೋಷಕರು ಖಾಸಗಿ ಶಾಲೆಗಳ ಶುಲ್ಕ ಏರಿಕೆಯನ್ನು ನಿಯಂತ್ರಿಸಲು ಸರ್ಕಾರ ಮುಂದಾಗಬೇಕು ಎಂದಿದ್ದಾರೆ.

ಖಾಸಗಿ ಅನುದಾನರಹಿತ ಶಾಲೆಗಳ ಶುಲ್ಕ ನಿಗದಿಗೆ ಸಂಬಂಧಿಸಿದಂತೆ ನಮಗೆ ಯಾವುದೇ ಅಧಿಕಾರವಿಲ್ಲ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧಿಕಾರಿಗಳು ತಮ್ಮ ಅಸಹಾಯಕತೆ ತೋರುತ್ತಿದ್ದಾರೆ. ಶಾಲಾ ಶುಲ್ಕದ ಏರಿಕೆ ಮಾತ್ರವಲ್ಲದೇ, ಮಕ್ಕಳ ಶಾಲಾ ವಾಹನದ ಶುಲ್ಕ, ಪಠ್ಯಪುಸ್ತಕದ ಶುಲ್ಕ, ಸಮವಸ್ತ್ರದ ಶುಲ್ಕ ಸೇರಿದಂತೆ ಶಾಲೆಗೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಆರ್ಥಿಕವಾಗಿ ಪೋಷಕರ ಜೇಬಿಗೆ ಕತ್ತರಿ ಬಿದ್ದಿದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಶುಲ್ಕ ಹೆಚ್ಚಳದ ನಿಯಮವೇನು?

ಖಾಸಗಿ ಅನುದಾನಿತ ಶಾಲೆಗಳು ಶಿಕ್ಷಣ ಇಲಾಖೆ ನಿಯಮದ ಅನ್ವಯ ಪ್ರತಿ ವರ್ಷ ಶೇ.15 ರವರೆಗೆ ಶಾಲಾ ಶುಲ್ಕವನ್ನು ಏರಿಕೆ ಮಾಡಲು ಅಧಿಕಾರವಿದೆ. ಆದರೆ ನಿಗದಿಗಿಂತಲೂ ಅಧಿಕ ಪ್ರಮಾಣದಲ್ಲಿ ಶಾಲೆಗಳು ಶುಲ್ಕವನ್ನು ಏರಿಕೆ ಮಾಡಿದ್ದಲ್ಲಿ ಪೋಷಕರು, ಶಿಕ್ಷಣ ಇಲಾಖೆಗೆ ದೂರು ನೀಡಬಹುದಾಗಿದೆ. ಈ ದೂರಿನನ್ವಯ ಸರ್ಕಾರ ಅಂತಹ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲು ಅವಕಾಶವಿದೆ. ಅಲ್ಲದೇ, ಖಾಸಗಿ ಶಾಲೆಗಳು ತಮ್ಮ ಶುಲ್ಕ ಸಂರಚನೆಯನ್ನು ಶಾಲೆಯ ನೋಟಿಸ್ ಬೋರ್ಡ್‌ನಲ್ಲಿ ಹಾಕಬೇಕು ಎಂಬ ನಿಯಮವಿದೆ.


Share It

You cannot copy content of this page