ಬೆಂಗಳೂರು: ವಿಶೇಷ ಚೇತನರ ಆರೋಗ್ಯ ಸ್ಥಿತಿಗತಿಗಳ ಸಮೀಕ್ಷಾ ವರದಿ ಬಿಡುಗಡೆಗೊಂಡಿದ್ದು, ಅದರಲ್ಲಿ ಶೇ. 70 ರಿಂದ 96 ರಷ್ಟು ವಿಶೇಷಚೇತನ ವ್ಯಕ್ತಿಗಳಿಗೆ ಮೂಲಭೂತ ಆರೋಗ್ಯ ವಿಮೆಯೇ ದೊರೆತಿಲ್ಲ ಎಂಬ ಪ್ರಮುಖ ಅಂಶ ಬಹಿರಂಗಗೊಂಡಿದೆ.
ಈ ಪೈಕಿ ಗಮನಾರ್ಹ ಸಂಖ್ಯೆಯ ವಿಶೇಷ ಚೇತನರು ಸರ್ಕಾರಿ ಯೋಜನೆಗಳನ್ನು ಸುಲಭವಾಗಿ ಪಡೆಯಲು ಅನುಕೂಲವಾಗುವ ವಿಶಿಷ್ಟ ಅಂಗವೈಕಲ್ಯ ಕಾರ್ಡ್ ಹೊಂದಿಲ್ಲ ಎನ್ನುವುದು ಅಧ್ಯಯನದಲ್ಲಿ ತಿಳಿದುಬಂದಿದೆ. ವರದಿಯಲ್ಲಿ ಸುಮಾರು ಶೇ.90 ರಷ್ಟು ವಿಶೇಷ ಚೇತನ ಜನರು ಯಾವುದೇ ಸಹಾಯಕ ಸಾಧನಗಳನ್ನು ಬಳಸುತ್ತಿಲ್ಲ ಮತ್ತು ಆರೋಗ್ಯ ರಕ್ಷಣೆ ಅಥವಾ ವಿಮೆಗೆ ಹೊಂದಿಲ್ಲ. ಆರೋಗ್ಯ ಸೇವೆ ಸ್ಥಿತಿ ಮತ್ತು ಸೇವೆಗಳಲ್ಲಿನ ಅಂತರವನ್ನು ನಿವಾರಿಸಲು ಮತ್ತು ಅಂಗವಿಕಲರ ಜೀವನದ ಗುಣಮಟ್ಟವನ್ನು ಹೆಚ್ಚಿಸಲು ವಿಮಾ ಯೋಜನೆಗಳು ಮತ್ತು ಮೂಲಸೌಕರ್ಯ ವಿನ್ಯಾಸಗೊಳಿಸುವುದು ಅನಿವಾರ್ಯವಾಗಿದೆ ಎನ್ನುವುದನ್ನು ವರದಿ ತಿಳಿಸಿದೆ.
ಸಂಶೋಧನೆಯು ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು ಜಿಲ್ಲೆಗಳಾದ್ಯಂತ ಮಾಡಲಾಗಿದ್ದು, 2024-25ರಲ್ಲಿ ಹನ್ನೆರಡು ತಿಂಗಳ ಅವಧಿಯಲ್ಲಿ ನಡೆದ ಈ ಅಧ್ಯಯನವು, ವಿಶೇಷ ಚೇತನರ ಆರೋಗ್ಯ ಸ್ಥಿತಿಗೆ ಸಂಬಂಧಿಸಿದ ವಿವಿಧ ಅಂಶಗಳನ್ನು ಸಮಗ್ರವಾಗಿ ಸಂಗ್ರಹಿಸಲಾಗಿದೆ. ವಿಶೇಷಚೇತನರ ಮುಖ್ಯ ಆಯುಕ್ತರ ಕಚೇರಿ(ಸಿಸಿಪಿಡಿ) ಮತ್ತು ಜಿಲ್ಲಾ ವಿಶೆಷಚೇತನ ಕಲ್ಯಾಣ(ಡಿಡಿಡಬ್ಲ್ಯುಒ) ಸಂಸ್ಥೆಗಳಿಂದ ಸಮೀಕ್ಷೆಗೆ ಸಹಕಾರ ದೊರೆತಿದೆ.
ಇನ್ನೂ ಬಹುತೇಕ ವಿಕಲಚೇತನರು ನಿರುದ್ಯೋಗಿಗಳಾಗಿದ್ದು, ಜೀವನೋಪಾಯಕ್ಕಾಗಿ ತಮ್ಮ ಕುಟುಂಬಗಳ ಮೇಲೆ ಅವಲಂಬಿತರಾಗಿದ್ದಾರೆ. ಆ ಪೈಕಿ ಶೇ.95 ರಷ್ಟು ವಿಶೇಷಚೇತನರ ಮನೆಯ ಆದಾಯವು, ವರ್ಷಕ್ಕೆ 1 ಲಕ್ಷಕ್ಕಿಂತ ಕಡಿಮೆ ಇದೆ. ಈಗಾಗಲೇ ದುರ್ಬಲರಾಗಿರುವ ಈ ಜನಸಂಖ್ಯೆಯ ಅರ್ಧದಷ್ಟು ಜನರು ಕರ್ನಾಟಕದಲ್ಲಿ ತಮ್ಮ ಅಲ್ಪ ಮೊತ್ತದ 2 ಸಾವಿರ ಮಾಸಿಕ ಪಿಂಚಣಿಯ ಕಾಲು ಭಾಗವನ್ನು ಮಾಸಿಕ ಆರೋಗ್ಯ ವೆಚ್ಚಗಳಿಗಾಗಿ ಖರ್ಚು ಮಾಡುತ್ತಿದ್ದಾರೆ ಎಂಬುದು ವರದಿಯಿಂದ ತಿಳಿದುಬಂದಿದೆ.
ಸಮೀಕ್ಷಾ ವರದಿಯ ಕುರಿತು ಮಾತನಾಡಿರುವ ಹೃದಯತಜ್ಞ ಡಾ. ವಿವೇಕ್ ಜವಳಿ, ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಈಗೀಗ ವಿಶೇಷಚೇತನರಿಗೂ ಸಿಗಬೇಕಾದ ಪ್ರತಿಯೊಂದು ಸವಲತ್ತುಗಳು ಸಿಗುತ್ತಿದೆ. ಆದರೆ, ಅವರಿಗಾಗಿಯೇ ಸರ್ಕಾರ ನೀಡುತ್ತಿರುವ ಸೌಲಭ್ಯಗಳು ಅವರಿಗೆ ತಲುಪುತ್ತಿವೆಯೇ ಎಂಬುದರ ಬಗ್ಗೆಯೂ ಗಮನಹರಿಸಬೇಕಿದೆ. ವಿಶೇಷಚೇತನರೊಂದಿಗೆ ಮಾತನಾಡುವಾಗ ಪ್ರತಿಯೊಬ್ಬರು ಒಂದಷ್ಟು ಸೂಕ್ಷ್ಮತೆಯ ಮನೋಭಾವ ಹೊಂದಿರಬೇಕಿದೆ. ಆಗ ಮಾತ್ರ ಅವರ ಭಾವನೆಗಳಿಗೆ ಧಕ್ಕೆ ಆಗದಂತೆ ಸಂವಹನ ನಡೆಸಲು ಸಾಧ್ಯವಿದೆ. ಅಸ್ಥಾ ಹಾಗೂ ಎನ್‌ಸಿಪಿಇಡಿಪಿ ಸಹಯೋಗದಲ್ಲಿ ವಿಕಲಚೇತನರ ಆರೋಗ್ಯ ಸ್ಥಿತಿಗತಿಗಳ ಬಗ್ಗೆ ಸಮೀಕ್ಷೆ ನಡೆಸಿರುವುದು ಶ್ಲಾಘನೀಯ ಎಂದಿದ್ದಾರೆ.
ಮೂಲಸೌಕರ್ಯಗಳನ್ನು ಹಕ್ಕೆಂದು ನೀಡಿ:
ನಮ್ಮ ದೇಶದಲ್ಲಿ ವಿಶೇಷಚೇತರನ್ನು ನಿರ್ಲಕ್ಷ್ಯ ಮಾಡಿದಷ್ಟು ಎಲ್ಲಿಯೂ ಮಾಡಲಾಗುತ್ತಿಲ್ಲ. ಜನಸಾಮಾನ್ಯರು ಸಹ ವಿಕಲಚೇತನರನ್ನು ಅನಾರೋಗ್ಯಪೀಡಿತ ರೀತಿಯಲ್ಲೇ ನಡೆಸಿಕೊಳ್ಳುತ್ತಿದ್ದಾರೆ. ಈ ಮನೋಭಾವ ಬದಲಾಗಬೇಕು. ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ವಿಮಾ ಯೋಜನೆಯಲ್ಲಿ ಮಹಿಳೆಯರು, ಹಿರಿಯನಾಗರಿಕರಿಗೆ ವಿಶೇಷ ಸವಲತ್ತು ನೀಡಲಾಗಿದೆ. ಆದರೆ, ವಿಶೇಷಚೇತನರಿಗೆ ಯಾವುದೇ ವಿಶೇಷ ತಲುಪಿಲ್ಲ. ನಮ್ಮ ದೇಶದಲ್ಲಿ ವಿಶೇಷಚೇತನರು ಓಡಾಡಲು ಸೂಕ್ತ ಸಾರಿಗೆ ಹಾಗೂ ವೀಲ್‌ಚೇರ್ ವ್ಯವಸ್ಥೆಗೆ ಸೂಕ್ತ ಮಾರ್ಗಗಳೇ ಇಲ್ಲ ಎಂದು ಎನ್‌ಸಿಪಿಇಡಿಪಿ ಕಾರ್ಯನಿರ್ವಹಕ ನಿರ್ದೇಶಕ ಅರ್ಮಾನ್ ಅಲಿ ಆಗ್ರಹಿಸಿದ್ದಾರೆ.