ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭೀಕರ ಭಯೋತ್ಪಾದಕ ದಾಳಿ ಖಂಡನೀಯ. ದಾಳಿಗೆ ಸಂಭಂದಿಸಿದಂತೆ ಕೇಂದ್ರ ಸರಕಾರ ಸಮಗ್ರ ತನಿಖೆ ನಡೆಸಿ, ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ರಾಜ್ಯದ ಮುಸ್ಲಿಂ ಸಮುದಾಯದ ಉಲೇಮಾಗಳು ಮತ್ತು ಮುಖಂಡರು ಆಗ್ರಹಿಸಿದ್ದಾರೆ.
ಈ ಕುರಿತು ಗುರುವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಜಮೀಯತ್ ಉಲಮಾ-ಎ-ಹಿಂದ್ ರಾಜ್ಯಾಧ್ಯಕ್ಷ ಮುಫ್ತಿ ಇಫ್ತಿಖಾರ್ ಅಹ್ಮದ್ ಖಾಸ್ಮಿ ಮಾತನಾಡಿ, ಭೀಕರ ಭಯೋತ್ಪಾದಕ ದಾಳಿಯಿಂದ ನಾವು ದುಃಖಿತರಾಗಿದ್ದೇವೆ. ಈ ಕ್ರೂರ ಹಿಂಸಾಚಾರದ ಕೃತ್ಯವು ಮುಗ್ಧ ನಾಗರಿಕರ ಮತ್ತು ಯಾವುದೇ ಹಾನಿ ಮಾಡಲು ಉದ್ದೇಶಿಸದ ಪ್ರವಾಸಿಗರ ಜೀವಗಳನ್ನು ಬಲಿ ತೆಗೆದುಕೊಂಡಿದೆ. ರಾಷ್ಟ್ರೀಯ ಐಕ್ಯತೆಗೆ ಕೊಡುಗೆ ನೀಡುವವರ ಮೇಲಿನ ಇಂತಹ ದಾಳಿಗಳನ್ನು ತಡೆಗಟ್ಟಲು ಕೇಂದ್ರ ಸರಕಾರ ಭದ್ರತೆ ಮತ್ತು ಜಾಗರೂಕತೆಯನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಈ ಹತ್ಯೆಗಳು ಕೇವಲ ಅಮಾನವೀಯ ಮಾತ್ರವಲ್ಲ, ಕೋಮು ಸೌಹಾರ್ದತೆಯನ್ನು ಕೆರಳಿಸುವ ಮತ್ತು ದೇಶದ ಶಾಂತಿಯನ್ನು ಕದಡುವ ಗುರಿ ಹೊಂದಿವೆ. ಇಸ್ಲಾಮ್ ಧರ್ಮವು ಅಮಾಯಕರನ್ನು ಕೊಲ್ಲುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸುತ್ತದೆ. ಯಾರಾದರೂ ಅನ್ಯಾಯವಾಗಿ ಒಬ್ಬ ವ್ಯಕ್ತಿಯನ್ನು ಕೊಂದರೆ ಅವನು ಇಡೀ ಮನುಕುಲವನ್ನೇ ಕೊಂದಂತೆ. ಯಾರು ಒಂದು ಜೀವವನ್ನು ಉಳಿಸುತ್ತಾರೋ ಅವನು ಇಡೀ ಮನುಕುಲವನ್ನೇ ರಕ್ಷಿಸಿದಂತೆ ಎಂದು ಪವಿತ್ರ ಕುರಾನ್ನ ನಲ್ಲಿ ಕೂಡ ಹೇಳಲಾಗಿದೆ ಎಂದು ತಿಳಿಸಿದರು.

ಸಿಟಿ ಮಾರುಕಟ್ಟೆಯ ಜಾಮಿಯಾ ಮಸೀದಿಯ ಖತೀಬ್ ಒ ಇಮಾಮ್ ಮೌಲಾನಾ ಮಕ್ಸೂದ್ ಇಮ್ರಾನ್ ರಶಾದಿ ಮಾತನಾಡಿ, ಇಸ್ಲಾಮ್ ಧರ್ಮದ ಹೆಸರಿನಲ್ಲಿ ಇಂತಹ ದೌರ್ಜನ್ಯಗಳನ್ನು ಎಸಗುವವರು ಈ ಧರ್ಮದ ನಿಜವಾದ ಬೋಧನೆಗಳ ಅನುಯಾಯಿಗಳಾಗಿರಲು ಸಾಧ್ಯವೇ ಇಲ್ಲ. ಅವರು ಇಸ್ಲಾಮ್ ಧರ್ಮದ ಅರ್ಥಕ್ಕೆ ವಿರುದ್ಧವಾಗಿ ನಿಲ್ಲುತ್ತಾರೆ. ಯಾವುದೇ ರಾಜಕೀಯ ಅಥವಾ ಸೈದ್ಧಾಂತಿಕ ಕಾರಣವಾಗಲಿ ಇಂತಹ ಅಮಾಯಕರ ಹತ್ಯೆಯನ್ನು ಎಂದಿಗೂ ಸಮರ್ಥಿಸುವುದಿಲ್ಲ. ಶಾಂತಿ, ನ್ಯಾಯವನ್ನು ಎತ್ತಿಹಿಡಿಯುವ ಇಸ್ಲಾಮ್ ಧರ್ಮದ ಅನುಯಾಯಿಗಳಾಗಿ ನಾವು ಈ ಹೇಡಿತನದ ಭಯೋತ್ಪಾದನಾ ಕೃತ್ಯವನ್ನು ಖಂಡಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಧರ್ಮದ ಕಾರಣದಿಂದಾಗಿಯೇ ಮನುಷ್ಯರನ್ನು ಗುರಿಯಾಗಿಸಿಕೊಂಡು ಕೊಲ್ಲುತ್ತಿರುವುದು ನಮಗೆ ನೋವುಂಟು ಮಾಡಿದೆ. ಇದು ವ್ಯಕ್ತಿಗಳ ಮೇಲೆ ಮಾತ್ರವಲ್ಲದೆ ಮಾನವೀಯತೆ, ಬಹುತ್ವತೆ ಮತ್ತು ಶಾಂತಿಯುತ ಸಹಬಾಳ್ವೆಯ ಮೌಲ್ಯಗಳ ಮೇಲೂ ನಡೆಸಿದ ದಾಳಿಯಾಗಿದೆ. ಈ ಕರಾಳ ಶಕ್ತಿಗಳನ್ನು ಯಶಸ್ವಿಯಾಗಲು ಬಿಡಬಾರದು. ನಮ್ಮನ್ನು ವಿಭಜಿಸುವುದೇ ಅವರ ಗುರಿಯಾಗಿದೆ ಎಂದರು.

ಜಮಾತೆ ಇಸ್ಲಾಮಿ ಹಿಂದ್‌ನ ರಾಜ್ಯಾಧ್ಯಕ್ಷ ಡಾ.ಮುಹಮ್ಮದ್ ಸಾದ್ ಬೆಲ್ಗಾಮಿ ಮಾತನಾಡಿ, ನಾವು ಭಾರತದ ಎಲ್ಲ ಸಮುದಾಯಗಳಿಗೆ, ವಿಶೇಷವಾಗಿ ಕರ್ನಾಟಕದ ಜನತೆಗೆ ಶಾಂತಿಯುತವಾಗಿ ಮತ್ತು ಒಗ್ಗಟ್ಟಿನಿಂದ ಇರಬೇಕು ಎಂದು ಮನವಿ ಮಾಡುತ್ತೇವೆ. ಈ ದುರಂತದಿಂದ ಕೀಳುಮಟ್ಟದ ದ್ವೇಷದ ಬೀಜಗಳು ಬೆಳೆಯಲು ಅವಕಾಶ ಕೊಡಬಾರದು. ಅಮಾಯಕರ ಜೀವ ನಷ್ಟವು ಇಡೀ ನಮ್ಮ ರಾಷ್ಟ್ರದ ನಷ್ಟವಾಗಿದೆ. ಈ ಸಂದರ್ಭದಲ್ಲಿ ಎಲ್ಲ ಧಾರ್ಮಿಕ ಮತ್ತು ರಾಜಕೀಯ ನಾಯಕರು ಈ ದಾಳಿಯನ್ನು ಖಂಡಿಸಬೇಕು ಮತ್ತು ಅಂತರಧರ್ಮೀಯ ಸಂವಾದ, ಪರಸ್ಪರ ಗೌರವ ಹಾಗೂ ಕೋಮು ಸಾಮರಸ್ಯವನ್ನು ಉತ್ತೇಜಿಸಲು ಒಟ್ಟಾಗಿ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.
ನಾಸೀಹ್ ಫೌಂಡೇಶನ್ ಅಧ್ಯಕ್ಷ ಮೌಲಾನಾ ಸೈಯದ್ ಶಬ್ಬೀರ್ ಅಹ್ಮದ್ ನದ್ವಿ ಮಾತನಾಡಿ, ಮುಸ್ಲಿಮ್ ನಾಯಕರಾಗಿ ನಾವು ಭಾರತದ ಜಾತ್ಯತೀತ ನೀತಿಗಳನ್ನು ಮತ್ತು ಎಲ್ಲ ಸಮುದಾಯಗಳ ನಡುವೆ ಶಾಂತಿಯುತ ಸಹಬಾಳ್ವೆಯನ್ನು ಎತ್ತಿಹಿಡಿಯುವ ಬದ್ಧತೆಯನ್ನು ತೋರಬೇಕು. ಇದರಿಂದಾಗಿ ನಾವೆಲ್ಲರೂ ಧಾರ್ಮಿಕ ಅಥವಾ ಪ್ರಾದೇಶಿಕ ಗುರುತುಗಳನ್ನು ಮೀರಿ ಒಟ್ಟಾಗಿ ನಿಲ್ಲಬೇಕು. ಎಲ್ಲ ರೀತಿಯ ಭಯೋತ್ಪಾದನೆ, ಉಗ್ರವಾದ ಹಾಗೂ ದ್ವೇಷದ ಎಲ್ಲ ರೂಪಗಳನ್ನು ತಿರಸ್ಕರಿಸಲು ಒಂದಾಗಿ ನಿಲ್ಲಬೇಕು. ನಮ್ಮ ಸಾಮೂಹಿಕ ಧ್ವನಿಯು ಏಕತೆ, ಸಹಾನುಭೂತಿ ಮತ್ತು ಶಾಂತಿಗೆ ಪ್ರತಿಧ್ವನಿಯಾಗಬೇಕು ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಟಿಯಲ್ಲಿ ಜಾಮಿಯಾ ಹಝ್ರತ್ ಬಿಲಾಲ್‌ನ ಖತೀಬ್ ಒ ಇಮಾಮ್ ಖಾರಿ ಝುಲ್ಫಿಖಾರ್ ನೂರಿ, ಜಮಾತೆ ಅಹ್ಲೆ ಹದೀಸ್‌ನ ಚಾರ್‌ಮಿನಾರ್ ಮಸೀದಿಯ ಖತೀಬ್ ಒ ಇಮಾಮ್ ಮೌಲಾನಾ ಏಜಾಝ್ ಅಹ್ಮದ್ ನದ್ವಿ, ಮೌಲಾನಾ ಅಬ್ದುಲ್ ಖಾದರ್ ಶಾ ವಾಜಿದ್, ಜೂಲೂಸ್ ಇ ಮುಹಮ್ಮದೀಯದ ಕಾರ್ಯದರ್ಶಿ ಅಫ್ಸರ್ ಬೇಗ್, ಜುಮ್ಮಾ ಮಸೀದಿ ಟ್ರಸ್ಟ್ ಬೋರ್ಡ್ ಕಾರ್ಯದರ್ಶಿ ಉಸ್ಮಾನ್ ಶರೀಫ್ ಸೇರಿದಂತೆ ಇನ್ನಿತರ ಮುಸ್ಲಿಂ ಮುಖಂಡರು ಪಾಲ್ಗೊಂಡಿದ್ದರು.