ಬೆಂಗಳೂರು: ವಿಶ್ವದಲ್ಲೇ ಅತ್ಯಾಧುನಿಕ ವೈದ್ಯಕೀಯ ನವೀನ ತಂತ್ರಜ್ಞಾನವಾದ ವೆಲಿಸ್ ರೊಬೋಟ್ ಬಳಸಿಕೊಂಡು ಯೆಮೆನ್ ದೇಶದ 63 ವರ್ಷದ ಮಹಿಳೆಗೆ ಯಶಸ್ವಿಯಾಗಿ ಬೈಲಾಟರಲ್ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ ಫೋರ್ಟಿಸ್ ಆಸ್ಪತ್ರೆ ವೈದ್ಯರು ನಡೆಸಿದ್ದಾರೆ.
ಈ ಕುರಿತು ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫೋರ್ಟಿಸ್ ಆಸ್ಪತ್ರೆಯ ಆರ್ಥೋಪೆಡಿಕ್ಸ್ ಪ್ರಧಾನ ನಿರ್ದೇಶಕ ಡಾ. ನಾರಾಯಣ್ ಹುಲ್ಸೆ, ಸಾಕಷ್ಟು ಜನರು ಅದರಲ್ಲೂ ವಯಸ್ಸಾದವರು ಮೊಣಕಾಲು ಹಾಗೂ ಕೀಲು ನೋವಿಗೆ ತುತ್ತಾಗುತ್ತಾರೆ. ಶಸ್ತ್ರಚಿಕಿತ್ಸೆಗೆ ಹೆದರಿ ಯಾರೂ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ ಮುಂದಾಗುವುದಿಲ್ಲ. ಆದರೆ, ನಮ್ಮ ಆಸ್ಪತ್ರೆಯಲ್ಲಿ ಕೀಲು ಬದಲು ಶಸ್ತ್ರಚಿಕಿತ್ಸೆಗೆ ಕೇವಲ ರೊಬೋಟ್ ಬಳಕೆ ಅಷ್ಟೇ ಮಾಡುತ್ತಿಲ್ಲ. ಅತ್ಯಾಧುನಿಕ ವೆಲಿಸ್ ರೊಬೋಟ್ ಬಳಸಲಾಗುತ್ತಿದ್ದು, ಅತ್ಯಂತ ನಿಖರ ಹಾಗೂ ಸ್ಪಷ್ಟತೆಯಲ್ಲಿ ಈ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ ಎಂದರು.
ಯೆಮನ್ ದೇಶದ 63 ವರ್ಷದ ಜಮ್ಜಾಮ್ ಎಂಬ ಮಹಿಳೆ ಕಳೆದ ಐದು ವರ್ಷಗಳಿಂದ ವಯೋಸಹಜ ಮೊಣಕಾಲು ನೋವಿನಿಂದ ಬಳಲುತ್ತಿದ್ದರು, ಕ್ರಮೇಣ ನಿಲ್ಲಲು, ನಡೆಯಲು ಸಹ ಸಾಧ್ಯವಾಗದ ಸ್ಥಿತಿಗೆ ತಲುಪಿದ್ದರು. ಅವರದ್ದೇ ದೇಶದ ಆಸ್ಪತ್ರೆಗಳಿಗೆ ತೋರಿಸಿದರೂ ಪ್ರಯೋಜನವಾಗಲಿಲ್ಲ. ಬಳಿಕ ಇವರ ಪರಿಸ್ಥಿತಿಯನ್ನು ಪರಿಶೀಲಿಸಿದಾಗ ಬೈಲಾಟರಲ್ ಮೊಣಕಾಲು ಅಸ್ಥಿಸಂಧಿವಾತ ಇರುವುದು ಪತ್ತೆಯಾಯಿತು. ರೊಬೋಟ್-ನೆರವಿನ ಬೈಲಾಟರಲ್ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ ಪಡೆಯಲು ಶಿಫಾರಸು ಮಾಡಲಾಯಿತು. ಶಸ್ತ್ರಚಿಕಿತ್ಸೆಯ ನಂತರ ಅವರು ನಿಲ್ಲಲು ಸಾಧ್ಯವಾಗಿದೆ ಎಂದು ಹೇಳಿದರು.