ಬೆಂಗಳೂರು: ಬಸವ ಜಯಂತಿ ಆಚರಣೆ ಇಂದಿನ ದಿನಗಳಲ್ಲಿ ಬಹಳ ಪ್ರಸ್ತುತವಾಗಿದ್ದು, ಯುವ ಪೀಳಿಗೆಗೆ ಬಸವಣ್ಣನ ತತ್ತ್ವ ಪಾಲಿಸಬೇಕಾದುದು ಅನಿವಾರ್ಯವಾಗಿದೆ. ಆ ನಿಟ್ಟಿನಲ್ಲಿ ಏ.30 ರಂದು ಬೆಳಗ್ಗೆ 8 ಗಂಟೆಗೆ ಸಂಸತ್ ಭವನದಲ್ಲಿ ಬಸವಣ್ಣ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ಮೊದಲ ಭಾರಿಗೆ ಸಂಸತ್ ಭವನದಲ್ಲಿ ಬಸವೇಶ್ವರ ಜಯಂತಿ ಆಚರಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಲೋಕಸಭಾ ಸ್ಪೀಕರ್ ಓಂಪ್ರಕಾಶ್ ಬಿರ್ಲಾ, ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್, ಪ್ರಹ್ಲಾದ್ ಜೋಶಿ, ಸಚಿವೆ ಶೋಭಾ ಕರಂದ್ಲಾಜೆ ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಬಸವಣ್ಣ ಎಲ್ಲಾ ಸಮುದಾಯದ ನಾಯಕರಾಗಿದ್ದು, ಹಾಗೇ ಅವರು ಜಗತ್ತಿಗೆ ಸೇರಿದ ವ್ಯಕ್ತಿಯಾಗಿದ್ದು, ಆದರೆ ಪ್ರಸ್ತುತ ಅವರನ್ನು ಕೇವಲ ಒಂದು ಜಾತಿ ಹಾಗೂ ಧರ್ಮಕ್ಕೆ ಸೀಮಿತ ಮಾಡಲಾಗುತ್ತಿದ್ದು, ಆದರಿಂದ ಅದನ್ನು ಭೇದಿಸಬೇಕಾಗಿದೆ ಎಂದರು.
ದೇಶದ ಇತಿಹಾಸದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಬಸವಣ್ಣನವರಿಗೆ ಕೊಟ್ಟಷ್ಟು ಗೌರವವನ್ನು ಯಾರೂ ಕೊಟ್ಟಿಲ್ಲ. ನೂತನ ಸಂಸತ್ ಭವನದ ಮೇಲೆ ಬಸವಣ್ಣನವರ ವಚನವನ್ನು ಬರೆದಿದ್ದು ನರೇಂದ್ರ ಮೋದಿರವರ ಸಾಧನೆಯಾಗಿದೆ. ಜತೆಗೆ ಬಸವಣ್ಣನವರ ಇವ ನಾರವ ಇವ ನಮ್ಮವ ಎನ್ನುವ ವಚನಕ್ಕೂ ನರೇಂದ್ರ ಮೋದಿರವರ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ತತ್ತ್ವವೂ ಬೇರೆಯಲ್ಲ ಎಂದು ಹೇಳಿದರು.
ಈ ವೇಳೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಹಿರಿಯ ಪತ್ರಕರ್ತರಾದ ಶಿವಕುಮಾರ್ ಬೆಳ್ಳಿತಟ್ಟೆ, ಶ್ರೀಧರ್ ಉಪಸ್ಥಿತರಿದ್ದರು.