ಬೆಂಗಳೂರು: ಭಾರತದ ಪ್ರಾಚೀನ ಸಂಸ್ಕೃತಿಯ ಜ್ಞಾನಜ್ಯೋತಿ ಇಲ್ಲಿಯವರೆಗೆ ಉಳಿಯಲು ಕಾರಣ ಶಿಲ್ಪಕಲೆಗಳಾಗಿವೆ ಎಂದು ದೇವಾಲಯಗಳ ವಾಸ್ತುಶಿಲ್ಪ ಮತ್ತು ಪುರಾತತ್ವ ಶಾಸ್ತ್ರದ ಸಂಶೋಧಕರಾದ ಡಾ ಮನೋಜ್ ಗುಂಡಣ್ಣ ಹೇಳಿದರು.
ಭಾನುವಾರ ನಗರದ ಮಿಥಿಕ್ ಸೊಸೈಟಿಯಲ್ಲಿ ವಾಸ್ತುಶಿಲ್ಪಗಳು ಮತ್ತು ಶಿಲ್ಪಕಲೆಗಳ ಕುರಿತ ಪ್ರೊ.ಎ.ವಿ.ನರಸಿಂಹ ಮೂರ್ತಿ ಹಾಗೂ ಡಾ.ಎಂ.ಎಚ್.ಕೃಷ್ಣ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಾಚೀನ ಭಾರತದಲ್ಲಿ ಬಳಸಲಾಗುತ್ತಿದ್ದ ನಿರ್ಮಾಣ ವಿಧಾನಗಳು ಸಂಕೀರ್ಣ ಜ್ಞಾನದೊಂದಿಗೆ ಸಾಂಪ್ರದಾಯಿಕ ಭಾರತೀಯ ವಾಸ್ತುಶಿಲ್ಪದ ಶ್ರೀಮಂತ ಪರಂಪರೆಯನ್ನು ಬಿಂಬಿಸುತ್ತವೆ. ಅವುಗಳು ಕಾಲಾತೀತ ಪ್ರಸ್ತುತತೆಗೆ ಹಿಡಿದ ಕೈಗನ್ನಡಿಯಾಗಿವೆ. ಕರಕುಶಲತೆ, ಕಲ್ಲಿನ ಕೆತ್ತನೆಗಳ ಅತ್ಯುತ್ತಮ ಉದಾಹರಣೆಯಾಗಿ ನಿಂತಿವೆ. ಜಲ ನಿರೋಧಕ ಗೋಡೆಗಳನ್ನು ಅಂದಿನ ಕಾಲದಲ್ಲಿಯೇ ವಿನ್ಯಾಸಗೊಳಿಸಲಾಗಿದ್ದು, ಇದರಿಂದ ಸಾಂಪ್ರದಾಯಿಕ ಜ್ಞಾನದ ಜ್ಯೋತಿಯನ್ನು ಇಲ್ಲಿಯವರೆಗೆ ಕಾಯ್ದುಕೊಂಡು ಬಂದಂತಾಗಿದೆ ಎಂದು ಅಭಿಪ್ರಾಯಪಟ್ಟರು.
ದಕ್ಷಿಣ ಭಾರತದ ದೇವಾಲಯ ವಾಸ್ತುಶಿಲ್ಪಗಳು ಭಾರತೀಯ ಪರಂಪರೆಗೆ ವಿಶೇಷ ಕೊಡುಗೆಗಳನ್ನು ನೀಡಿವೆ. ಸಂಕೀರ್ಣವಾದ ಕೆತ್ತನೆಗಳ ಜೊತೆಗೆ ಅವುಗಳ ಸೊಬಗಿಗೆ ಹೆಸರುವಾಸಿಯಾಗಿವೆ. ಮುಖ್ಯವಾಗಿ ಹೊಯ್ಸಳರ ಅಸಂಖ್ಯಾತ ದೇವಾಲಯಗಳು ಬೃಹತ್ ಗಾತ್ರದ್ದಾಗಿಲ್ಲದಿದ್ದರೂ ಶಿಲ್ಪ ಕಲೆಗಳಿಗೆ ಮನ್ನಣೆ ನೀಡಿವೆ. ವಿವರಣಾತ್ಮಕ ದೃಷ್ಟಿಕೋನವನ್ನು ಹೊಂದಿವೆ. ಇವುಗಳು ಭಾರತೀಯ ದೇವಾಲಯಗಳ ಹೆಗ್ಗುರುತಾಗಿವೆ. ವಿಶ್ವ ಪರಂಪರೆಯ ಸ್ಮಾರಕಗಳಾಗಿ ಕೂಡ ಹೊರಹೊಮ್ಮಿವೆ ಎಂದು ತಿಳಿಸಿದರು.
ಉಪನ್ಯಾಸ ಕಾರ್ಯಕ್ರಮದಲ್ಲಿ ಶಿಲ್ಪಿ ಸೂರಾಲು ವೆಂಕಟರಮಣ ಭಟ್ ಮಾತನಾಡಿ, ಶಿಲ್ಪಕಲೆಗಳಿಗೆ ಇಂದಿನ ಕಾಲದಲ್ಲಿ ಬಹಳಷ್ಟು ಬೇಡಿಕೆ ಇದೆ. ಆದರೆ ಅವರು ಹಳೆಯ ಪಾರಂಪರಿಕ ಶೈಲಿಗಳನ್ನು ಅನುಸರಿಸುತ್ತಿದ್ದು, ನಾವಿನ್ಯತೆಯನ್ನು ಅಳವಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಆದ್ದರಿಂದ ಈ ನಿಟ್ಟಿನಲ್ಲಿ ಹೆಚ್ಚಿನ ಸಂಶೋಧನೆಗಳು ನಡೆಯಬೇಕು ಎಂದು ಅಭಿಪ್ರಾಯಪಟ್ಟರು.