ಬೆಂಗಳೂರು: ಎಸ್.ಎಸ್.ಎಲ್.ಸಿ ಪರೀಕ್ಷೆ ಸುಧಾರಣೆಯಾಗುವ ನಿಟ್ಟಿನಲ್ಲಿ ಕನಿಷ್ಠ ಅಂಕಗಳನ್ನು ಶೇ.35 ರಿಂದ ಶೇ.33ಕ್ಕೆ ಇಳಿಸಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಶಾಲಾ ಸಂಘ (ಕ್ಯಾಮ್ಸ್) ಸರ್ಕಾರವನ್ನು ಆಗ್ರಹಿಸಿದೆ.
ಈ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ಅವರಿಗೆ ಕ್ಯಾಮ್ಸ್ ಮನವಿ ಸಲ್ಲಿಸಿದೆ. ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಕೇರಳ ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೆರಿಯಲ್ಲಿನ ಶಿಕ್ಷಣ ವ್ಯವಸ್ಥೆಯೊಂದಿಗೆ ಹೋಲಿಕೆ ಮಾಡಿ ಅಧ್ಯಯನ ನಡೆಸಿ ಸುಧಾರಣಾ ಕ್ರಮಗಳ ಸಲಹೆಯನ್ನು ಮುಂದಿಟ್ಟಿದೆ. ಸರ್ಕಾರ ಕೂಡಲೇ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸುಧಾರಣೆಗಳನ್ನು ಜಾರಿಗೊಳಿಸಲು ಸಮಿತಿಯನ್ನು ರಚಿಸಬೇಕು ಎಂದು ಹೇಳಿದೆ.
ಕರ್ನಾಟಕದಲ್ಲಿ ರಾಜ್ಯಮಟ್ಟದ ಎಸ್.ಎಸ್.ಎಲ್.ಸಿ ಪರೀಕ್ಷೆ ಪಾಸಾಗಲು ಶೇ.35 ಮತ್ತು ಸಿ.ಬಿ.ಎಸ್.ಸಿ ಪರೀಕ್ಷೆಗೆ ಶೇ.33 ರಷ್ಟು ಅಂಕಗಳನ್ನು ಗಳಿಸಬೇಕಿದೆ. ಕೇರಳದಲ್ಲಿ ಎಲ್ಲ ವಿಷಯಗಳಲ್ಲೂ ಶೇ.30 ರಷ್ಟು ಅಂಕಗಳ ಮಿತಿಯನ್ನು ನಿಗದಿಪಡಿಸಲಾಗಿದೆ. ಆಂಧ್ರಪ್ರದೇಶದಲ್ಲಿ ಎಲ್ಲ ವಿಷಯಗಳಲ್ಲಿ ಶೇ.35 ಮತ್ತು ಹಿಂದಿಯಲ್ಲಿ ಶೇ.20 ರಷ್ಟು ಅಂಕಗಳನ್ನು ಗಳಿಸಬೇಕಿದ್ದು, ಅಲ್ಲಿ ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಲು ಒಟ್ಟಾರೆ ಶೇ.32.5 ರಷ್ಟು ಅಂಕಗಳನ್ನು ಪಡೆಯಬೇಕಿದೆ. ಆದರೆ, ಕರ್ನಾಟಕದಲ್ಲಿ ವಿದ್ಯಾರ್ಥಿಯು ಮುಖ್ಯ ಪರೀಕ್ಷೆಯಲ್ಲಿ ಶೇ. 35 ರಷ್ಟು ಅಂಕಗಳನ್ನು ಗಳಿಸಬೇಕು. ಆದರೆ ಆಂತರಿಕ ಮೌಲ್ಯಮಾಪನ ಅಂಕಗಳನ್ನು ಸಹ ಒಟ್ಟಾರೆ ಅಂಕಗಳಿಗೆ ಪರಿಗಣಿಸಲಾಗುವುದಿಲ್ಲ ಎಂದು ಹೇಳಿದೆ.
ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ದ್ವಿಪರೀಕ್ಷಾ ಆಯ್ಕೆ ಇರಬೇಕು ಎಂದು ಶಿಫಾರಸ್ಸು ಮಾಡಲಾಗಿದ್ದು, ಸಿ.ಬಿ.ಎಸ್.ಇ ಪದ್ದತಿಯಲ್ಲಿ ಬೇಸಿಕ್ ಅಂಕಗಣಿತ ಮತ್ತು ಸ್ಟ್ಯಾಂಡರ್ಡ್ ಅಂಕಗಣಿತ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಇದೇ ಪದ್ದತಿಯನ್ನು ಕರ್ನಾಟಕದಲ್ಲೂ ಅಳವಡಿಸಿಕೊಂಡರೆ ವಿದ್ಯಾರ್ಥಿಗಳ ಮೇಲಿನ ಹೊರೆ ಕಡಿಮೆಯಾಗಲಿದೆ ಎಂದು ಸಂಘ ಅಭಿಪ್ರಾಯಪಟ್ಟಿದೆ.
.