News

10 ಸಾವಿರ ವನರಕ್ಷಕರಿಗೆ ಕೆ.ಎಸ್.ಡಿ.ಎಲ್ ನಿಂದ ಸುರಕ್ಷಾ ಕಿಟ್

Share It

ಬೆಂಗಳೂರು: ಅರಣ್ಯ ರಕ್ಷಣೆಯಲ್ಲಿ ಮಹತ್ತರ ಪಾತ್ರ ವಹಿಸುತ್ತಿರುವ ರಾಜ್ಯದ 10 ಸಾವಿರ ಅರಣ್ಯ ರಕ್ಷಕರು/ ವೀಕ್ಷಕರು, ಕಾವಾಡಿಗಳು, ಮಾವುತರು ಮತ್ತು ಚಾಲಕರಿಗೆ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತದ (ಕೆ.ಎಸ್.ಡಿ.ಎಲ್) ವತಿಯಿಂದ ಗುಣಮಟ್ಟದ ಬ್ಯಾಗ್, ಜರ್ಕೀನ್, ಶೂ ಮತ್ತು ನೀರಿನ ಬಾಟಲಿ ಇರುವ ಕಿಟ್ ವಿತರಿಸಲಾಗಲಿದೆ. ಈ ಸಿಎಸ್ಆರ್ ಉಪಕ್ರಮದ ಮೊದಲ ಕಾರ್ಯಕ್ರಮ ಬುಧವಾರ (ಜೂನ್ 4) ಮಧ್ಯಾಹ್ನ 2 ಗಂಟೆಗೆ ಮೈಸೂರಿನ ಮುಕ್ತ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ನಡೆಯಲಿದೆ.

ಕೆ.ಎಸ್.ಡಿ.ಎಲ್ ಸಂಸ್ಥೆ 2024-25ನೇ ಸಾಲಿನ ಎರಡು ಕೋಟಿ ರುಪಾಯಿ ಸಿಎಸ್ಆರ್ ನಿಧಿಯನ್ನು ಈ ಕಿಟ್ ಖರೀದಿಗೆ ಬಳಸಲಿದೆ. ಬುಧವಾರದ ಕಾರ್ಯಕ್ರಮದಲ್ಲಿ ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಗಳ ಅರಣ್ಯ ವೃತ್ತಗಳ 2,168 ಸಿಬ್ಬಂದಿಗೆ ಈ‌ ಕಿಟ್ ವಿತರಣೆಯಾಗಲಿದೆ. ಅರಣ್ಯ ಸಚಿವ ಈಶ್ವರ ಖಂಡ್ರೆ, ಕೆಎಸ್ ಡಿಎಲ್ ಅಧ್ಯಕ್ಷ ಸಿ.ಎಸ್.ನಾಡಗೌಡ, ವನ್ಯಜೀವಿ ಮಂಡಳಿ ಸದಸ್ಯ ಧ್ರುವ ಪಾಟೀಲ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಇದಕ್ಕೆ ಸಾಕ್ಷಿಯಾಗಲಿದ್ದಾರೆ.

ಕಿಟ್ ಸ್ವೀಕರಿಸುವ ಪ್ರತಿಯೊಬ್ಬರಿಂದ ಮೊದಲೇ ಅಳತೆ ತೆಗೆದುಕೊಂಡು, ಜರ್ಕಿನ್, ಶೂ ಖರೀದಿಸಲಾಗಿದೆ. ಇದರಲ್ಲಿ 5 ಸಾವಿರ ಮಂದಿ ಖಾಯಂ ಸಿಬ್ಬಂದಿ ಯಾಗಿದ್ದು, ಮಿಕ್ಕವರು ತಾತ್ಕಾಲಿಕ ನೌಕರರಾಗಿದ್ದಾರೆ. ವನ್ಯಜೀವಿ ಮಂಡಳಿ ಸದಸ್ಯರೂ ಆದ ಸೊಸೈಟಿ ಫಾರ್ ಪ್ರೊಟೆಕ್ಷನ್ ಆಫ್ ಪ್ಲಾಂಟ್ಸ್ ಅಂಡ್ ಅನಿಮಲ್ಸ್ (ಎಸ್ ಪಿಪಿಎ) ಸಂಸ್ಥಾಪಕ ಧ್ರುವ ಪಾಟೀಲ ಅವರು ಹವ್ಯಾಸಿ ವನ್ಯಜೀವಿ ಛಾಯಾಗ್ರಾಹಕರಾಗಿದ್ದು, ಪ್ರತಿಕೂಲ ಸಂದರ್ಭಗಳಲ್ಲಿ ವನರಕ್ಷಕರು ಎದುರಿಸುತ್ತಿದ್ದ ಸಮಸ್ಯೆಗಳಿಗೆ ಕಿವಿಯಾಗಿ ಈ ಯೋಜನೆ ರೂಪಿಸಲು ನೆರವಾಗಿದ್ದಾರೆ.

ವನರಕ್ಷಕರ ಯೋಗಕ್ಷೇಮ ನಮ್ಮ ಹೊಣೆಯಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಉಳಿದೆಡೆಗಳ ಅರಣ್ಯಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೂ ಕಿಟ್ ವಿತರಣೆ ಮಾಡಲಾಗುವುದು. ಇದೊಂದು ಕಳಕಳಿಯ ಹೆಜ್ಜೆಯಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಹೇಳಿದ್ದಾರೆ.


Share It

You cannot copy content of this page