ಬೆಂಗಳೂರು: ನಟ ಕಮಲ್ ಹಾಸನ್ ಅಭಿನಯದ ಥಗ್ ಲೈಫ್ ಚಿತ್ರವು ಬಿಡುಗಡೆಗೆ ಭದ್ರತೆಗೆ ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಜೂ.10 ಕ್ಕೆ ಮುಂದೂಡಿದೆ. ಅಲ್ಲದೇ, ಕನ್ನಡ ಭಾಷೆಯ ಬಗ್ಗೆ ನೀಡಿದ ವಿವಾದಾತ್ಮಕ ಹೇಳಿಕೆಯಿಂದ ನ್ಯಾಯಾಲಯ, ಕಮಲ್ ಹಾಸನ್‌ನನ್ನು ತರಾಟೆಗೆ ತೆಗೆದುಕೊಂಡಿದೆ. ಕ್ಷಮೆಯಾಚಿಸದೇ ಪೊಲೀಸ್ ರಕ್ಷಣೆ ಕೋರಿರುವುದನ್ನು ನ್ಯಾಯಾಲಯ ಖಂಡಿಸಿದೆ.
ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಏಕಸದಸ್ಯ ಪೀಠವು ಮಂಗಳವಾರ ಅರ್ಜಿ ವಿಚಾರಣೆಯನ್ನು ನಡೆಸಿದ್ದು, ವಿಚಾರಣೆ ಸಮಯದಲ್ಲಿ ಪೀಠವು, ನಿರ್ಮಾಪಕ ಹೇಳಿಕೆ ದಾಖಲಿಸಿಕೊಂಡಿದೆ. ಮಾತನಾಡುವಾಗ ವಿವೇಚನೆ ಬಳಸಿ ಎಂದು ಕಿವಿಮಾತು ಹೇಳಿದೆ.
ವಾಣಿಜ್ಯ ಉದ್ದೇಶದಲ್ಲಿ ಸಿನಿಮಾ ಮಾಡಿದ್ದೀರಾ, ನಿಮ್ಮ ತಪ್ಪಿಗೆ ಪೊಲೀಸರು ಭದ್ರತೆ ನೀಡಬೇಕಾ? ಇದರಲ್ಲಿ ನಿಮ್ಮ ನಿಲುವೇನು? ತಿಳಿಸಿ ಎಂದು ನ್ಯಾಯಮೂರ್ತಿ ಕೇಳಿದರು. ಬಳಿಕ ವಿಚಾರಣೆಯನ್ನು ಮಧ್ಯಾಹ್ನ 2.30ಕ್ಕೆ ಮುಂದೂಡಲಾಯಿತು. ಅಂತೆಯೇ ವಿಚಾರಣೆಯನ್ನು ಪುನಾರಂಭ ಮಾಡಿದ ನ್ಯಾಯಾಲಯ, ಕಮಲ್ ಹಾಸನ್ ಆಗಿರಲಿ ಅಥವಾ ಯಾರೇ ಆಗಿರಲಿ ಜನರ ಭಾವನೆಗೆ ನೋವುಂಟು ಮಾಡಬಾರದು. ಅವರಿಗೆ ಕ್ಷಮೆ ಕೇಳಲು ಆತ್ಮಪ್ರತಿಷ್ಠೆ ಅಡ್ಡಿಯಾಗುತ್ತಿದೆ ಎಂದು ಕಿಡಿಕಾರಿದೆ.
ಕಮಲ್ ಹಾಸನ್ ಅವರಿಗೆ ಕನ್ನಡದ ಮೇಲೆ ಪ್ರೀತಿಯಿದೆ. ಈಗಾಗಲೇ ಅದನ್ನು ಪತ್ರದ ಮೂಲಕ ತಿಳಿಸಿದ್ದಾರೆ. ಈ ವಿಚಾರಣೆಯನ್ನು 1 ವಾರ ಮುಂದೂಡಬೇಕು ಕಮಲ್ ಪದ ವಕೀಲ ಧ್ಯಾನ್ ಚಿನ್ನಪ್ಪ ವಾದ ಮಂಡಿಸಿದರು. ವಾದ ಆಲಿಸಿದ ಪೀಠವು, ಜೂ. 10ಕ್ಕೆ ವಿಚಾರಣೆಯನ್ನು ಮುಂದೂಡಿದೆ.