ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುತ್ತಿರುವ ಕುರಿತು ಮೇ 31 ರಿಂದ ಜೂ 2 ರವರೆಗೆ ನಗರ ಪೊಲೀಸರು ನಡೆಸಿರುವ ವಿಶೇಷ ಕಾರ್ಯಾಚರಣೆಯಲ್ಲಿ ಕೋಟ್ಪಾ ಕಾಯ್ದೆಯಡಿ 11,507 ಪ್ರಕರಣ ದಾಖಲಿಸಿಕೊಂಡು ಬರೋಬ್ಬರಿ 21.19 ಲಕ್ಷ ರೂ. ದಂಡ ವಸೂಲಿ ಮಾಡಿದ್ದಾರೆ.
ವಿಶ್ವ ತಂಬಾಕು ರಹಿತ ರಹಿತ ದಿನಾಚರಣೆ ನಿಮಿತ್ತ ಧೂಮಪಾನ ನಿಷೇಧ ಕಾಯ್ದೆ ಅಡಿ 135 ಪ್ರಕರಣ ದಾಖಲಿಸಿಕೊಂಡು 22,800 ರೂ. ದಂಡ ವಸೂಲಿ ಮಾಡಿದ್ದಾರೆ. ಕಲಂ-6ಬಿ ಪ್ರಕಾರ 48 ಪ್ರಕರಣ 5 ಸಾವಿರ ರೂ. ದಂಡ ವಸೂಲಿ ಸೇರಿದಂತೆ ಒಟ್ಟು 21,19,475 ರೂ. ದಂಡವನ್ನು ವಸೂಲಿ ಮಾಡಲಾಗಿದೆ. ಅಲ್ಲದೇ 909 ಪ್ರಕರಣಗಳ ತನಿಖೆ ಮುಂದುವರೆದಿದೆ.
ಸಾರ್ವಜನಿಕರ ಸ್ಥಳಗಳಲ್ಲಿ ಸ್ವಯಂ ಸೇವಕರೊಂದಿಗೆ ಗಾಯನ, ಕಿರು ನಾಟಕಗಳು, ಭಿತ್ತಿಚಿತ್ರಗಳು, ಪತ್ರಗಳು, ಭಾಷಣಗಳು, ರ್ಯಾಲಿಗಳ ಮೂಲಕ ಯುವಜನತೆಯಲ್ಲಿ ತಂಬಾಕು ಸೇವನೆ ವಿರುದ್ಧ ಜಾಗೃತಿ ಮೂಡಿಸುವ ಸಲುವಾಗಿ ಅಭಿಯಾನಗಳನ್ನು ಪೊಲೀಸರು ಕೈಗೊಂಡಿದ್ದರು.
ಬೆಂಗಳೂರು ನಗರ ಪ್ರದೇಶ ವ್ಯಾಪ್ತಿಯಲ್ಲಿ 6,448 ಪೊಲೀಸ್ ಮಾರ್ಷಲ್‌ಗಳು, 5,667 ಪೊಲೀಸ್ ಸಿಬ್ಬಂದಿ ಸೇರಿದಂತೆ ಒಟ್ಟು 12,115 ಸಿಬ್ಬಂದಿಗಳು ಸತತ ಕಾರ್ಯಾಚರಣೆ ನಡೆಸಿದ್ದು, ಸ್ಟೂಡೆಂಟ್ ಪೊಲೀಸ್ ಮಾರ್ಷಲ್ ಗಳ ಸಹಯೋಗದೊಂದಿಗೆ ತಂಬಾಕು ಸೇವನೆಗಳ ದುಷ್ಟಪರಿಣಾಮಗಳು, ಹಾಗೂ ತಂಬಾಕು ತ್ಯಜಿಸುವ ಕುರಿತು ಡಿಸಿಪಿಯಿಂದ ಹಿಡಿದು ಒಟ್ಟು 863 ಅಧಿಕಾರಿಗಳು 254 ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ, ಜಾಗೃತಿ ಅಭಿಯಾನಗಳನ್ನು ಹಮ್ಮಿಕೊಂಡಿದ್ದರು.
ತಂಬಾಕು, ನಿಕೋಟಿನ್‌ನಂತಹ ಮಾದಕ ವಸ್ತುಗಳು, ವಿವಿಧ ರೀತಿಯ ಕ್ಯಾನ್ಸರ್ ರೋಗಗಳಿಗೆ ಕಾರಣವಾಗುತ್ತಿದೆ. ಇದರ ಬಗ್ಗೆ ಬೆಂಗಳೂರು ನಗರದ ಪೊಲೀಸ್ ಅಧಿಕಾರಿಗಳು ಮತ್ತು ಸ್ಟೂಡೆಂಟ್ ಪೊಲೀಸ್ ಮಾರ್ಷಲ್‌ಗಳು, ಶಾಲಾ-ಕಾಲೇಜು, ಗಾರ್ಮೆಂಟ್ಸ್, ಶಾಪಿಂಗ್‌ಮಾಲ್‌ಗಳು, ಖಾಸಗಿ ಕಂಪನಿಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ 60 ಸಾವಿರ ಬಿತ್ತಿ ಚಿತ್ರಗಳು, ಪತ್ರಗಳು ಸೂಚನಾ ಲಕಗಳು, ಸಾಮಾಜಿಕ ನಾಟಕ, ಹಾಗೂ ರ್ಯಾಲಿಯ ಮೂಲಕ ತಂಬಾಕು ಸೇವನೆಯಿಂದ ಆಗುವ ವ್ಯೆಯಕ್ತಿಕ, ಕೌಟುಂಬಿಕ ಹಾಗೂ ಸಾಮುದಾಯಿಕ ಹಾನಿಗಳ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದ್ದರು. ನಿಯಮ ಉಲ್ಲಂಘಿಸುವವರ ವಿರುದ್ಧ ದಂಡ ಪ್ರಮಾಣ 200 ಇರುವುದನ್ನು 1000 ರೂ.ಗೆ ಹೆಚ್ಚಳ ಕೂಡ ಮಾಡಲಾಗಿತ್ತು.