News

ನಟಿ ಉಮಾಶ್ರೀ, ಕಲಾವಿದೆ ಬಿ ಜಯಶ್ರೀ ಸೇರಿದಂತೆ 16 ಸಾಧಕಿಯರಿಗೆ ‘ವಾವ್’ ಪ್ರಶಸ್ತಿ ಪ್ರದಾನ

Share It

ಬೆಂಗಳೂರು: ನಟಿ ಹಾಗೂ ಮಾಜಿ ಸಚಿವೆ ಉಮಾಶ್ರೀ, ಖ್ಯಾತ ರಂಗಭೂಮಿ ಗಾಯಕಿ ಮತ್ತು ಮಾಜಿ ಸಂಸದೆ ಪದ್ಮಶ್ರೀ ಬಿ. ಜಯಶ್ರೀ ಹಾಗೂ ಕಲಬುರಗಿಯ ಕ್ಯಾನ್ಸರ್‌ ತಜ್ಞೆ ಡಾ. ವಿಜಯಲಕ್ಷ್ಮಿ ದೇಶಮಾನೆ ಅವರಿಗೆ ಸೇರಿದಂತೆ 16 ಸಾಧಕಿಯರಿಗೆ ‘ವಾವ್’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ ಮತ್ತು ಉಬುಂಟು ನಿಯೋಗದ ಸ್ಥಾಪಕಕಿ ಕೆ. ರತ್ನಪ್ರಭಾ ಮಾತನಾಡಿ, ʼಆತ್ಮದೊಂದಿಗೆ ಬೆಳವಣಿಗೆʼ ಎಂಬ ನಿಟ್ಟಿನಲ್ಲಿ ಮಹಿಳಾ ಉದ್ಯಮಿಗಳನ್ನು ಸಬಲೀಕರಣಗೊಳಿಸುವ ಮತ್ತು ಕರ್ನಾಟಕ ಜಾಗತಿಕ ಹೂಡಿಕೆದಾರರ ಸಭೆಗಳಂತಹ ವೇದಿಕೆಗಳಲ್ಲಿ ಅವರಿಗೆ ಅವಕಾಶಗಳನ್ನು ಸೃಷ್ಟಿಸಲಾಗಿದೆ. ʼಉಬುಂಟುʼ ಎಂದರೆ ನಾವಿದ್ದೇವೆ, ಒಟ್ಟಿಗೆ ಬೆಳೆಯುತ್ತೇವೆ ಎಂಬ ತತ್ವಶಾಸ್ತ್ರದೊಂದಿಗೆ ನಿಂತಿದ್ದೇವೆ ಎಂದರು.

ಇದೇ ವೇಳೆ ಡಿಜಿಟಲ್ ಕೌಶಲ್ಯ ಮತ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು 1,000 ಮಹಿಳಾ ಉದ್ಯಮಿಗಳಿಗೆ ನೂತನ ಡಿಜಿಟಲ್ ಮಾರ್ಕೆಟಿಂಗ್ ಕಾರ್ಯಕ್ರಮವನ್ನು ಕೂಡ ಕೆ. ರತ್ನಪ್ರಭಾ ಘೋಷಿಸಿದರು.

ಕರ್ನಾಟಕದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಮಾಜಿ ಅಪರ ಮುಖ್ಯ ಕಾರ್ಯದರ್ಶಿ ಡಾ. ರಾಜ್ ಕುಮಾರ್ ಖತ್ರಿ ಮಾತನಾಡಿ, ಮಹಿಳಾ ಉದ್ಯಮಿಗಳಿಗೆ ಹಣಕಾಸು, ಮಾರುಕಟ್ಟೆ ಮತ್ತು ತಂತ್ರಜ್ಞಾನದಲ್ಲಿನ ಮಾಹಿತಿ ಕೊರತೆಯನ್ನು ನಿವಾರಿಸಿದ್ದಕ್ಕಾಗಿ ಉಬುಂಟುವಿನ ಕಾರ್ಯವನ್ನು ಶ್ಲಾಘಿಸಿದರು.

ಕರ್ನಾಟಕದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ನಿರ್ದೇಶಕ ನಿತೇಶ್ ಕೆ ಪಾಟೀಲ್ ಮಾತನಾಡಿ, ಮಹಿಳಾ ಉದ್ಯಮಿಗಳನ್ನು ಸಬಲೀಕರಣಗೊಳಿಸಲು ಅಭಿವೃದ್ಧಿಪಡಿಸಲಾಗುತ್ತಿರುವ ಡಿಜಿಟಲ್ ಮಾರ್ಕೆಟಿಂಗ್ ವೇದಿಕೆಗಳ ಕುರಿತು ವಿವರವಾದ ಮಾಹಿತಿಯನ್ನು ಹಂಚಿಕೊಂಡರು. ಇಂದಿನ ಸ್ಪರ್ಧಾತ್ಮಕ ಡಿಜಿಟಲ್ ಮಾರುಕಟ್ಟೆಯಲ್ಲಿ ಅಭಿವೃದ್ಧಿ ಹೊಂದಲು ಅಗತ್ಯವಿರುವ ಪರಿಕರಗಳು ಮತ್ತು ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಮಹಿಳಾ ನೇತೃತ್ವದ ವ್ಯವಹಾರಗಳಿಗೆ ಒದಗಿಸುವ ಗುರಿಯನ್ನು ಹೊಂದಿರುವುದಾಗಿ ಹೇಳಿದರು.

ಇದೇ ವೇಳೆ ಜಾಗತಿಕವಾಗಿ ಮಹಿಳಾ ಉದ್ಯಮಿಗಳನ್ನು ಬೆಂಬಲಿಸುತ್ತಿರುವ ಉಬುಂಟು ನಿಯೋಗವು 2030ರ ವೇಳೆಗೆ 195 ದೇಶಗಳಲ್ಲಿ ತನ್ನ ಅಸ್ತಿತ್ವವನ್ನು ಸ್ಥಾಪಿಸುವ ಮಹಾತ್ವಾಕಾಂಕ್ಷೆಯ ಘೋಷಣೆಯನ್ನು ಮಾಡಿತು. 1.95 ಮಿಲಿಯನ್‌ ಸದಸ್ಯರು ಮತ್ತು 44 ಮಹಿಳಾ ಅಧ್ಯಕ್ಷರನ್ನು 44 ದೇಶಗಳಲ್ಲಿ ಪ್ರತಿನಿಧಿಸುವ ಗುರಿಯನ್ನು ಹೊಂದಿರುವುದಾಗಿ ಹೇಳಲಾಯಿತು. ಕಾರ್ಯಕ್ರಮದಲ್ಲಿ 100ಕ್ಕೂ ಹೆಚ್ಚು ಸ್ಟಾಲ್‌ಗಳು ಹಾಗೂ ಗೋವಾ, ಮಹಾರಾಷ್ಟ್ರ, ಮಧ್ಯಪ್ರದೇಶ, ಅಸ್ಸಾಂ ಮತ್ತು ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳನ್ನು ಪ್ರತಿನಿಧಿಸುವ ಸುಮಾರು 300 ಪ್ರತಿನಿಧಿಗಳು ಭಾಗವಹಿಸಿದ್ದರು.


Share It

You cannot copy content of this page