ಬೆಂಗಳೂರು: ನಾವೆಷ್ಟೇ ವಯಸ್ಸಿರಾದರೂ, ಎಷ್ಟೇ ವರ್ಷ ಬದುಕಿದರೂ ಯಾವುದೇ ಸಾಧನೆಯನ್ನು ಮಾಡಿದ್ದರೂ ನಮ್ಮ ನೆನೆಪಿನ ಪಟದಲ್ಲಿ ಅಚ್ಚಳಿಯದೇ ಉಳಿಯುವುದು ಕಾಲೇಜಿನ ದಿನಗಳು ಮಾತ್ರ ಎಂದು ಚಲನಚಿತ್ರ ನಟಿ, ಗಾಯಕಿ, ನಿರೂಪಕಿ ಅಂಕಿತಾ ಅಮರ್ ಹೇಳಿದರು.

ಬುಧವಾರ ನೃಪತುಂಗ ವಿಶ್ವವಿದ್ಯಾಲಯದ 2024-25 ನೇ ಸಾಲಿನ ಸಾಂಸ್ಕೃತಿಕ ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಲೇಜಿನ ನೆನೆಪುಗಳೇ ಅಮರವಾಗಿರುವಂತದ್ದು, ಕಲಿಕೆ, ಆಟ, ಪಾಠ ನಮ್ಮ ವ್ಯಕ್ತಿತವನ್ನು ರೂಪಿಸುವಂತದ್ದಾಗಿದೆ. ಆ ಸಮಯದಲ್ಲಿ ಬೆಸೆದ ಸಂಭಂದಗಳು ಇಡೀ ಜೀವನದ ದಿಕ್ಕನ್ನು ಬದಲಾಯಿಸುವಂತವು ಆಗಿರುತ್ತವೆ ಎಂದರು.

ಕಾಲೇಜಿನ ದಿನಗಳಲ್ಲಿ ಅನಾವಶ್ಯಕ ಮಾತುಗಳಿಗೆ ಕಿವಿಕೊಡದೆ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಂಡು ಮುನ್ನಡೆಯುವುದು ಅತ್ಯಾವಶ್ಯಕವಾಗಿದೆ. ಯುವಜನತೆಗೆ ಕನಸನ್ನು ಬೆನ್ನಟ್ಟಿ ಅದನ್ನು ನನಸು ಮಾಡಿಕೊಳ್ಳುವ ಹಾದಿಯ ಮೊದಲ ಹೆಜ್ಜೆಗೆ ಮುನ್ನುಡಿ ಈ ದಿನಗಳಾಗಿವೆ ಎಂದು ಅಂಕಿತಾ ಅಮರ್ ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಒಲಂಪಿಯನ್ ಕ್ರೀಡಾಪಟು ಸುರಜಿತ್ ಸಿಂಗ್ ಮಾತನಾಡಿ ಕಾಲೇಜಿನ ದಿನಗಳು ಇಂದಿನ ನನ್ನ ಸಾಧನೆಗೆ ಮಹತ್ತರ ಕೊಡುಗೆಗಳನ್ನು ನೀಡಿದೆ. ಇದೇ ಮಾದರಿಯಲ್ಲಿ ಈಗಿನ ವಿದ್ಯಾರ್ಥಿಗಳು ಸಹ ದೇಶಕ್ಕೆ ಮಾದರಿಯಾಗಲು ಈ ಸಮಯವನ್ನು ಸದ್ಬಳಕೆ ಮಾಡಿಕೊಂಡು ಮುನ್ನಡೆಯಬೇಕು ಎಂದು ಕಿವಿಮಾತು ಹೇಳಿದರು.

ನಾನು ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ದಲ್ಲಿ ಮುಖ್ಯ ತರಬೇತುದಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಕ್ರೀಡಾಪಟುವು ಆಗಿದ್ದ ಕಾಲದಿಂದ ಹಿಡಿದು ಈಗಿನ ತರಬೇತಿ ನೀಡುವ ಕಾರ್ಯದಲ್ಲಿ ಸಹ ಎಂದು ಆಲಸಿಯಾಗದೆ ದೇಶಕ್ಕೆ ಕೊಡುಗೆಯನ್ನು ನೀಡುವ ಮನಸ್ಥಿತಿಯನ್ನು ಉಳಿಸಿಕೊಂಡು ಬಂದಿದ್ದೇನೆ. ಇದೇ ಮಾದರಿಯಲ್ಲಿ ಛಲ ಬಿಡದೆ ಶ್ರಮಪಟ್ಟು ಕನಸಿನಡೆಗೆ ಹೆಜ್ಜೆಯನ್ನು ಇಟ್ಟರೆ ಯಶಸ್ಸು ಕಟ್ಟಿಟ್ಟ ಬುತ್ತಿಯಾಗಿದೆ ಎಂದು ನುಡಿದರು.

ಸರ್ಕಾರಿ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಅತ್ಯುನ್ನತ ಪರಿಣಿತ ಬೋಧಕ ವರ್ಗವಿದ್ದು, ಇದನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸುವ ವಿಧಾನ ಪರಿಷತ್ ಸದಸ್ಯನಾಗಿ ಇಲ್ಲಿನ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳ ಕುಂದು ಕೊರತೆಗಳನ್ನು ಹಾಲಿಸಲು ಸದಾ ಸಿದ್ಧನಿರುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಹೇಳಿದರು.

ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಡಾ ರಾಮಕೃಷ್ಣ ರೆಡ್ಡಿ ಕೆ, ವಿಶ್ವವಿದ್ಯಾಲಯದ ಕುಲಪತಿ ಪ್ರೊ ಫಜೀಹಾ ಸುಲ್ತಾನ, ಕುಲಸಚಿವರು (ಆಡಳಿತ) ಕೆ.ಎ ಉಮಾ, ಕುಲಸಚಿವರು (ಮೌಲ್ಯಮಾಪನ) ಪ್ರೊ ಮಂಜುಳಾ ಎ. ಸಿ, ವಿತ್ತಾಧಿಕಾರಿ ಎಂ.ವಿ ವಿಜಯಲಕ್ಷ್ಮಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.