News

ಕಾಲ್ತುಳಿತ ಪ್ರಕರಣ; ನಾಲ್ವರಿಗೆ ಜೂ.19 ರವರೆಗೆ ನ್ಯಾಯಾಂಗ ಬಂಧನ

Share It

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿಜಯೋತ್ಸವದಲ್ಲಿ ಎಂ. ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ ಭೀಕರ 11 ಮಂದಿಯ ಕಾಲ್ತುಳಿತ ಪ್ರಕರಣ ಸಂಬಂಧ ಆರ್‌ಸಿಬಿ ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥ ಸೇರಿದಂತೆ ನಾಲ್ವರನ್ನೂ ಜೂ.19 ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಶುಕ್ರವಾರ ಬೆಂಗಳೂರಿನ 41ನೇ ಎಸಿಜೆಎಂ ನ್ಯಾಯಾಲಯ ಆದೇಶಿಸಿದೆ.

ನಗರದ ಕಬ್ಬನ್‌ಪಾರ್ಕ್ ಠಾಣೆ ಪೊಲೀಸರು ಮತ್ತು ಸಿಸಿಬಿ ಪೊಲೀಸರು ಜಂಟಿ ಕಾರ್ಯಾಚರಣೆ ಕೈಗೊಂಡು, ಆರೋಪಿಗಳಾದ ಆರ್‌ಸಿಬಿ ಮ್ಯಾನೇಜ್‌ಮೆಂಟ್ ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥ ನಿಖಿಲ್ ಸೋಸಲೆ, ಡಿಎನ್‌ಎ ಸಂಸ್ಥೆಯ ಸುನೀಲ್ ಮ್ಯಾಥ್ಯೂ, ಕಿರಣ್ ಮತ್ತು ಸುಮಂತ್ ಅವರನ್ನು ಬಂಧಿಸಿದ್ದರು, ಮೊದಲು ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ, ಬಳಿಕ ನ್ಯಾಯಾಲಯಕ್ಕೆ ಸಂಜೆ ವೇಳೆಗೆ ಆರೋಪಿಗಳನ್ನು ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ನ್ಯಾಯಾಲಯ, ಜೂ.19 ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿದೆ.

ಕಾಲ್ತುಳಿತ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಂಧಿಸುವಂತೆ ಸೂಚನೆ ನೀಡುತ್ತಿದ್ದಂತೆ, ಕಬ್ಬನ್‌ಪಾರ್ಕ್ ಮತ್ತು ಸಿಸಿಬಿ ಪೊಲೀಸರು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೂವರು ಆರೋಜಕರು, ಮುಂಬೈಗೆ ಪರಾರಿಯಾಗಲು ಸಿದ್ಧತೆ ನಡೆಸಿದ್ದ ನಿಖಿಲ್ ಸೋಸಲೆ ಸೇರಿ ನಾಲ್ವರನ್ನು ಬಂಧಿಸಿದ್ದರು. ಎಲ್ಲ ಆರೋಪಿಗಳನ್ನು ವಿಮಾನ ನಿಲ್ದಾಣದಲ್ಲೇ ಶುಕ್ರವಾರ ಮುಂಜಾನೆ 4.25 ರ ಸುಮಾರಿಗೆ ಬಂಧಿಸಲಾಗಿತ್ತು. ಈ ನಾಲ್ವರು ಆರೋಪಿಗಳನ್ನು ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆಗೆ ಕರೆತಂದು, ಶೇಷಾದ್ರಿಪುರ ಎಸಿಪಿ ಪ್ರಕಾಶ್ ವಿಚಾರಣೆ ನಡೆಸಿ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ಬಂಧನ ಪ್ರಶ್ನಿಸಿದ್ದ ಅರ್ಜಿ ಜೂ.9ಕ್ಕೆ ಮುಂದೂಡಿಕೆ:

ಚಿನ್ನಸ್ವಾಮಿ ಸ್ಟೇಡಿಯಂ ಆವರಣದಲ್ಲಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ ಆರ್‌ಸಿಬಿಯ ಮಾರ್ಕೆಟಿಂಗ್ ಮುಖ್ಯಸ್ಥ ನಿಖಿಲ್ ಸೋಸಲೆ ಬಂಧನವನ್ನು ಪ್ರಶ್ನಿಸಿ ಪತ್ನಿ ಮಾಳವಿಕಾ ನಾಯ್ಕ್ ಅವರು ಸರ್ಕಾರದ ವಿರುದ್ಧವೇ ಹೈಕೋರ್ಟ್ ಮೆಟ್ಟಿಲೇರಿದ್ದು, ಅದರ ವಿಚಾರಣೆಯನ್ನು ಜೂ.9ಕ್ಕೆ ಮುಂದೂಡಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದ ಹೇಳಿಕೆ ಆಧಾರವಾಗಿಸಿ, ಮಾಳವಿಕಾ ನಾಯ್ಕ್ ಶುಕ್ರವಾರ ಬೆಳಗ್ಗೆ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ಸರ್ಕಾರದ ವೈಲ್ಯದಿಂದ ಈ ದುರಂತ ಸಂಭವಿಸಿದ್ದು, ನನ್ನ ಪತಿ ಯಾವುದೇ ತಪ್ಪು ಮಾಡಿಲ್ಲ ಎಂದು ಉಲ್ಲೇಖಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಆರ್. ಕೃಷ್ಣ ಕುಮಾರ್ ಅವರ ಪೀಠ, ರಾಜ್ಯದ ವಾದವನ್ನು ಆಲಿಸದೆ, ಯಾವುದೇ ಆದೇಶವನ್ನು ಹೊರಡಿಸಲು ಸಾದ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕೆಎಸ್‌ಸಿಎ ಸಂಸ್ಥೆಯ ಪದಾಧಿಕಾರಿಗಳು ಎಸ್ಕೇಪ್:

ಕಾಲ್ತುಳಿತ ಪ್ರಕರಣ ನಡೆದ ಬಳಿಕ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗುತ್ತಿದ್ದಂತೆಯೇ, ಕೆಎಸ್‌ಸಿಎ ಸಂಸ್ಥೆಯ ಕಾರ್ಯದರ್ಶಿ ಶಂಕರ್ ಮತ್ತು ಖಜಾಂಚಿ ಜಯರಾಮ್ ನಾಪತ್ತೆಯಾಗಿದ್ದಾರೆ. ಅವರುಗಳನ್ನು ಪತ್ತೆಹಚ್ಚಲು ಪೊಲೀಸರು ಸದ್ಯ ಬಲೆ ಬೀಸಿದ್ದಾರೆ.

 


Share It

You cannot copy content of this page