News

ಜಾತಿ ಗಣತಿಯಲ್ಲಿ ರಾಜಕೀಯ ಬೇಡ, ಸಾಮಾಜಿಕ ನ್ಯಾಯ ಬೇಕು: ಡಿಸಿಎಂ ಡಿ.ಕೆ.ಶಿವಕುಮಾರ್

Share It

ಬೆಂಗಳೂರು: ನಮಗೆ ರಾಜಕೀಯ ಬಣ್ಣ ಬೇಡ. ಸಾಮಾಜಿಕ ನ್ಯಾಯ ಬೇಕು. ಈ ಕಾರಣಕ್ಕೆ ಮತ್ತೊಮ್ಮೆ ಜಾತಿ ಜನಗಣತಿ ಮಾಡಲು ತೀರ್ಮಾನ ಮಾಡಿದ್ದೇವೆ. ಈ ಹಿಂದಿನ ವರದಿ ಬಗ್ಗೆ ಟೀಕೆ ಮಾಡಿದ್ದ ವಿರೋಧ ಪಕ್ಷದವರು ಈಗ ಉಲ್ಟಾ ಮಾತಾಡುತ್ತಿದ್ದಾರೆ. ಅದರ ಬದಲು ಹಳೆಯದನ್ನೇ ಒಪ್ಪಿಕೊಳ್ಳುವಂತೆ ಆಗ್ರಹಿಸಲಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆಯ ನಂತರ ಜಾತಿಗಣತಿ ವಿಚಾರವಾಗಿ ಮರುಸಮೀಕ್ಷೆಗೆ ಮುಂದಾಗಿರುವ ಸರ್ಕಾರದ ಕ್ರಮವನ್ನು ವಿರೋಧ ಪಕ್ಷಗಳು ಟೀಕಿಸುತ್ತಿರುವ ಬಗ್ಗೆ ಮಾಧ್ಯಮಗಳು ಕೇಳಿದಾಗ, ಕುಮಾರಸ್ವಾಮಿ, ವಿಜಯೇಂದ್ರ, ಅಶೋಕ್ ಅವರು ಪುನಃ ಮಾಧ್ಯಮಗೋಷ್ಠಿ ಮಾಡಿ ಹಳೆಯ ವರದಿಯನ್ನೇ ಸ್ವೀಕರಿಸಿ ಎಂದು ಈಗ ಹೇಳಲಿ. ವಿರೋಧ ಪಕ್ಷದವರು ಈಗ ಏನೇನೋ ಮಾತನಾಡುತ್ತಿದ್ದಾರೆ. ಇದಕ್ಕೆ ನಿಧಾನಕ್ಕೆ ಉತ್ತರ ನೀಡೋಣ. ಯಾರು, ಯಾರು ಏನೇನು ಹೇಳುತ್ತಿದ್ದರು, ಅಶೋಕ್ ಏನು ಹೇಳಿದ್ದಾರೆ ಎಂಬುದನ್ನು ಮಾಧ್ಯಮಗಳು ಮತ್ತೆ ಪ್ರಸಾರ ಮಾಡಿಲಿ. ವಿರೋಧ ಪಕ್ಷದವರು ಹಿಂದೆ ಒಂದು, ಮುಂದೆ ಒಂದು ಮಾತನಾಡಿ ರಾಜಕೀಯವಾಗಿ ಬಣ್ಣ ಕಟ್ಟುತ್ತಿದ್ದಾರೆ ಆಕ್ರೋಶ ವ್ಯಕ್ತಪಡಿಸಿದರು.

ಯಾರು ಏನು ಬೇಕಾದರೂ ಹೇಳಲಿ. ಜನರು, ಶಾಸಕರುಗಳ ಭಾವನೆ, ಅಭಿಪ್ರಾಯ ಅರಿತು ಕಾನೂನಾತ್ಮಕವಾಗಿ ಜಾತಿ ಗಣತಿ ಮರುಸಮೀಕ್ಷೆಗೆ ಒಪ್ಪಿಗೆ ಕೊಟ್ಟಿದ್ದೇವೆ. ಸೆಕ್ಷನ್ 11 ರ ಪ್ರಕಾರ ಜಾತಿ ಗಣತಿಗೆ 10 ವರ್ಷವಾಗಿದೆ ಎಂದು ಬೇಕಾದಷ್ಟು ಜನ ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತರಬಹುದು. 2015ರ ಏಪ್ರಿಲ್ 11 ರಂದು ಜಾತಿಗಣತಿ ಪ್ರಾರಂಭವಾಗಿ ಮೇ 30ರಂದು ಮುಗಿದಿತ್ತು. ಈ ವರ್ಷ ಫೆ. 29 ರಂದು ಜಾತಿಗಣತಿ ವರದಿ ಸಲ್ಲಿಕೆಯಾಗಿತ್ತು. ನಂತರ ಕ್ಯಾಬಿನೆಟ್ ನಲ್ಲಿ 5 ರಿಂದ 6 ಬಾರಿ ಇದರ ಬಗ್ಗೆ ಚರ್ಚೆ ಮಾಡಲಾಗಿತ್ತು. ವಿರೋಧ ಪಕ್ಷದವರು ಸಹ ಮರು ಗಣತಿಗೆ ಒತ್ತಾಯ ಮಾಡುತ್ತಿದ್ದರು. ಈ ಮದ್ಯೆ ಹೈಕಮಾಂಡ್ ನಮ್ಮನ್ನು ಕರೆಸಿ ಈ ಬಗ್ಗೆ ಒಂದಷ್ಟು ಮಾರ್ಗದರ್ಶನ ನೀಡಿದೆ ಎಂದರು.

ಲಿಂಗಾಯತ ಮತ್ತು ಒಕ್ಕಲಿಗರಿಂದ ಈ ಹಿಂದೆ ವಿರೋಧ ವ್ಯಕ್ತವಾದ ಬಗ್ಗೆ ಕೇಳಿದಾಗ, ಇದರ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಸಮಾಜದ ಎಲ್ಲರನ್ನು ಒಳಗೊಂಡ ಸಮೀಕ್ಷೆ ಇದಾಗಲಿದೆ. ಹೊರನಾಡು ಕನ್ನಡಿಗರಿಗೆ ಆನ್ ಲೈನ್ ಮೂಲಕ ಸಮೀಕ್ಷೆಯಲ್ಲಿ ಭಾಗವಹಿಸುವಂತೆ ವ್ಯವಸ್ಥೆ ಕಲ್ಪಿಸಲಾಗುವುದು. ಹೈಕಮಾಂಡ್ ನಮಗೆ ಮಾರ್ಗದರ್ಶನ ಮಾತ್ರ ನೀಡಿದೆ. 10 ವರ್ಷಗಳು ಆಗಿರುವ ಕಾರಣಕ್ಕೆ ಸಮಾಜದ ಎಲ್ಲರನ್ನು ಒಳಗೊಳ್ಳುವುದು ನಮ್ಮ ಉದ್ದೇಶವಾಗಿದೆ. ಇದು ಕಾಂಗ್ರೆಸ್ ಪಕ್ಷದ ಮೂಲ ಆಶಯ ಎಂದು ಹೇಳಿದರು.

ವಿಮಾನ ದುರಂತ ಆಘಾತ ತಂದಿದೆ:

ಅಹಮದಾಬಾದ್ ವಿಮಾನ ದುರಂತದ ಬಗ್ಗೆ ಕೇಳಿದಾಗ, ಈ ಘಟನೆಯ ಬಗ್ಗೆ ಕೇಳಿ ನಾನು ಆಘಾತಕ್ಕೆ ಒಳಗಾಗಿದ್ದೇನೆ. ಮೃತಪಟ್ಟವರ ಕುಟುಂಬದವರಿಗೆ ಸಾಂತ್ವನ ಹೇಳಲು ಬಯಸುತ್ತೇನೆ. ಜಗತ್ತಿಗೆ ಹಾಗೂ ದೇಶಕ್ಕೆ ಇದು ಆಘಾತಕಾರಿ ಸುದ್ದಿಯಾಗಿದೆ. ಹೆಚ್ಚಿನ ಸಾವು ಆಗದಿರಲಿ ಎಂದು ಆ ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತೇನೆ. ಕರ್ನಾಟಕದ ಸರ್ಕಾರದ ಹಾಗೂ ಪಕ್ಷದ ಸಹಾನುಭೂತಿ ಹಾಗೂ ಪ್ರಾರ್ಥನೆ ಇದ್ದೇ ಇರುತ್ತದೆ. ದೇಶದಲ್ಲಿ ವಿಮಾನಯಾನ ಕ್ಷೇತ್ರ ಅಭಿವೃದ್ಧಿ ಕಾಣುತ್ತಿತ್ತು. ಆದರೆ ಈ ದುರಂತ ನಡೆಯಬಾರದಿತ್ತು ಎಂದು ವಿಷಾದ ವ್ಯಕ್ತಪಡಿಸಿದರು.

ವಿಮಾನದಲ್ಲಿ ಕನ್ನಡಿಗರು ಇದ್ದರು ಎಂದು ಕೇಳಿದಾಗ, ಕನ್ನಡಿಗರು ಜೊತೆಗೆ ಅವರು ಭಾರತೀಯರು. ಇಲ್ಲಿ ಮಾನವೀಯತೆ ಮುಖ್ಯ. ತಮಿಳು, ಗುಜರಾತಿ, ಕನ್ನಡಿಗರು ಎನ್ನುವುದು ಬೇಡ. ಅವರೆಲ್ಲರು ನಮ್ಮ ದೇಶದವರು ಅವರ ಉಳಿವಿಗೆ ಪ್ರಾರ್ಥನೆ ಮಾಡೋಣ ಎಂದರು.


Share It

You cannot copy content of this page