Education News

ಚಾಣಕ್ಯ ವಿಶ್ವವಿದ್ಯಾಲಯದ ಕುಲಾಧಿಪತಿಯಾಗಿ ಡಾ. ಎಸ್. ಸೋಮನಾಥ್ ಅಧಿಕಾರ ಸ್ವೀಕಾರ

Share It

ಬೆಂಗಳೂರು: ಚಾಣಕ್ಯ ವಿಶ್ವವಿದ್ಯಾಲಯದ ಕುಲಾಧಿಪತಿಯಾಗಿ ಖ್ಯಾತ ವಿಜ್ಞಾನಿ ಹಾಗೂ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಾಜಿ ಅಧ್ಯಕ್ಷ ಡಾ. ಎಸ್. ಸೋಮನಾಥ್ ಗುರುವಾರ ಅಧಿಕಾರ ಸ್ವೀಕರಿಸಿದರು.

ನಗರದ ಚಾಣಕ್ಯ ವಿಶ್ವವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚಾಣಕ್ಯದ ಶೈಕ್ಷಣಿಕ ಸಮುದಾಯವು ಸಾಂಪ್ರದಾಯಿಕ ಮಾನದಂಡಗಳನ್ನು ಮೀರಿ ಪ್ರತೀ ವಿದ್ಯಾರ್ಥಿಯ ಪಾತ್ರ ಮತ್ತು ಸಾಮರ್ಥ್ಯವನ್ನು ರೂಪಿಸುವ ನಿಟ್ಟಿನಲ್ಲಿ ಸಾಗುತ್ತಾ, ಭಾರತೀಯ ಸಂಸ್ಕೃತಿಯ ತಳಹದಿಯಲ್ಲಿ ರೂಪುಗೊಂಡು ಆಧುನಿಕ ನಳಂದ ಹಾಗೂ ತಕ್ಷಶಿಲವಾಗಬೇಕು ಎಂದರು.

ಎಲ್ಲ ಶೈಕ್ಷಣಿಕ ಸಂಶೋಧನೆಗಳು ರಾಷ್ಟ್ರದ ಆರ್ಥಿಕ ಬೆಳವಣಿಗೆಗೆ ಪೂರಕವಾಗಿರಬೇಕು. ಈ ನಿಟ್ಟಿನಲ್ಲಿ ಕೈಗಾರಿಕಾ ಕ್ಷೇತ್ರಕ್ಕೆ ಸಂಬಂಧಿಸಿದ ಪರಿಣಾಮಕಾರಿ ಮತ್ತು ಆವಿಷ್ಕಾರಗಳಲ್ಲಿ ಚಾಣಕ್ಯ ವಿಶ್ವವಿದ್ಯಾಲಯವು ಮುಂಚೂಣಿಯಲ್ಲಿರಬೇಕು ಎಂದು ನುಡಿದರು.

ಬೆಳವಣಿಗೆ, ಆವಿಷ್ಕಾರ, ಸಹಕಾರ ಇತ್ಯಾದಿ ಧನಾತ್ಮಕ ಮೌಲ್ಯಗಳು ಅತ್ಯುತ್ಕೃಷ್ಟ ಮಟ್ಟದಲ್ಲಿರುವ ಪರಿಸರವನ್ನು ನಿರ್ಮಿಸುವುದರ ಮೂಲಕ ಚಾಣಕ್ಯ ವಿಶ್ವವಿದ್ಯಾಲಯ, ವಿಶ್ವಾದ್ಯಂತ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಆಕರ್ಷಿಸುವ ಕೇಂದ್ರವಾಗಿ ರೂಪುಗೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಂಸ್ಥಾಪಕ ಕುಲಾಧಿಪತಿ ಪ್ರೊ. ಎಂ.ಕೆ. ಶ್ರೀಧರ್, ಸಹ ಕುಲಾಧಿಪತಿ ಎಂ.ಪಿ. ಕುಮಾರ್, ಉಪಕುಲಪತಿ ಪ್ರೊ. ಯಶವಂತ್ ಡೋಂಗ್ರೆ, ಸಹ ಉಪಕುಲಪತಿ ಪ್ರೊ. ಎಚ್.ಎಸ್. ಸುಬ್ರಹ್ಮಣ್ಯ ಸೇರಿದಂತೆ ಇತರರಿದ್ದರು.


Share It

You cannot copy content of this page