ಬೆಂಗಳೂರು: ಸಿಎಂ ಸಿದ್ದರಾಮಯ್ಯ ಜಾತಿಗಳ ನಡುವೆ ಕಂದಕ ತರಲು ಗಣತಿ ಮಾಡಿಸಿದ್ದಾರೆ. ಈಗ ಹೊಸ ಗಣತಿ ಮಾಡಿಸುತ್ತಾರೆಂದರೆ ಈ ಹಿಂದಿನ ಗಣತಿ ಬೋಗಸ್ ಎಂದು ಅರ್ಥ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಟೀಕಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಸರ್ಕಾರ ಕಾಟಾಚಾರಕ್ಕೆ ಜಾತಿ ಒಳಮೀಸಲು ಸಮೀಕ್ಷೆ ಮಾಡಿದೆ. ಈ ಹಿಂದಿನ ಜಾತಿ ಗಣತಿ ಬಿಡುಗಡೆಗೆ ಹತ್ತು ವರ್ಷವಾಗಿದೆ. ಆದರೆ ಈಗ ಮಾಡಿದ ಒಳಮೀಸಲು ಸಮೀಕ್ಷೆ ಕೇವಲ 15 ದಿನಗಳಲ್ಲಿ ಮುಗಿದಿದೆ. ಕೇಂದ್ರ ಸರ್ಕಾರ ನಡೆಸುವ ಸಮೀಕ್ಷೆಗೆ ಎಲ್ಲ ಕಡೆ ಮಾನ್ಯತೆ ಇದೆ. ಆದರೆ ರಾಜ್ಯ ಸರ್ಕಾರ ಮಾಡುವ ಸಮೀಕ್ಷೆಗೆ ಬೆಲೆ ಇಲ್ಲ. ಜಾತಿಗಳ ನಡುವೆ ಕಂದಕ ತಂದು ಬೇಳೆ ಬೇಯಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯ ಈ ಹುನ್ನಾರ ಮಾಡಿದ್ದಾರೆ ಎಂದರು.
ಕಾಂಗ್ರೆಸ್ ಸರ್ಕಾರ ಮರಳಿ ಜಾತಿ ಗಣತಿ ಮಾಡಲಿದೆ ಎಂದರೆ ಈ ಹಿಂದಿನ ಗಣತಿ ಬೋಗಸ್ ಎಂದರ್ಥ. ಇದರಿಂದಾಗಿ ಸರ್ಕಾರಕ್ಕೆ ಮುಖಭಂಗವಾಗಿದೆ. ಕೇಂದ್ರ ಸರ್ಕಾರ ನಡೆಸುವ ಗಣತಿಗೆ ರಾಜ್ಯ ಸರ್ಕಾರ ಸಹಕಾರ ನೀಡಿದರೆ ಸಾಕು. ರಾಜ್ಯ ಸರ್ಕಾರ ಎಲ್ಲರಿಗೂ ಮಾರ್ಗದರ್ಶನ ನೀಡಬೇಕು. ಆದರೆ ಇದೇ ಸರ್ಕಾರದ ಪಕ್ಷದ ನಾಯಕರು ಸಂಸತ್ತಿನಲ್ಲಿ ಎಲ್ಲದಕ್ಕೂ ಸಭಾತ್ಯಾಗ ಮಾಡುತ್ತಾರೆ. ಸಂಸತ್ತಿನಲ್ಲಿ ರಾಜ್ಯದ ವಿಷಯವನ್ನು ಚರ್ಚೆ ಮಾಡಬೇಕು. ನಮ್ಮ ಪಕ್ಷದ ಎಲ್ಲ ಸಂಸದರು ರಾಜ್ಯದ ನೆಲ, ಜಲ ವಿಚಾರವಾಗಿ ಮಾತಾಡುತ್ತಾರೆ ಎಂದು ಹೇಳಿದರು.
ಡಿಜೆ ಹಳ್ಳಿ ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ಶಿಕ್ಷೆ ಪ್ರಕಟವಾಗಿರುವುದು ಸ್ವಾಗತಾರ್ಹ. ಶಾಸಕರ ಮನೆ ಸುಟ್ಟಿರುವ ಘಟನೆ ಇನ್ನೂ ಕಣ್ಣ ಮುಂದಿದೆ. ಪಿ.ಎಫ್.ಐ ಸೇರಿದಂತೆ ಪಾಕಿಸ್ತಾನದ ಪರವಾಗಿರುವವರು ಅನೇಕರು ಇದರಲ್ಲಿ ಭಾಗಿಯಾಗಿದ್ದರು. ಅವರೆಲ್ಲರಿಗೂ ಕಠಿಣ ಶಿಕ್ಷೆಯಾಗಬೇಕು ಎಂದು ಈ ಸಂದರ್ಭದಲ್ಲಿ ಅಶೋಕ್ ಆಗ್ರಹಿಸಿದರು.