ಮತಾಂತರವಾಗದೆ ನಡೆಯುವ ಅಂತರ್ ಧರ್ಮೀಯ ಮದುವೆಗಳು ಅಸಿಂಧು ಎಂದು ಹೇಳಿರುವ ಅಲಹಾಬಾದ್ ಹೈಕೋರ್ಟ್ ಮತಾಂತರವಾಗದ ಅಂತರ್ ಧರ್ಮೀಯ ಜೋಡಿಗೆ ಮದುವೆ ಪ್ರಮಾಣ ಪತ್ರ ನೀಡುವ ಆರ್ಯ ಸಮಾಜ ಸಂಸ್ಥೆ ವಿರುದ್ಧ ತನಿಖೆಗೆ ಆದೇಶಿಸಿದೆ.
ಬೇರೆ ಬೇರೆ ಧರ್ಮಗಳನ್ನು ಅನುಸರಿಸುವ ಜನರು ಮತಾಂತರಕ್ಕೆ ಒಳಗಾಗದೇ ವಿವಾಹವಾದರೆ ಅದನ್ನು ಕಾನೂನು ಬಾಹಿರ ವಿವಾಹ ಎಂದೇ ಪರಿಗಣಿಸಲಾಗುತ್ತದೆ ಎಂದು ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಅವರಿದ್ದ ಪೀಠ ತಿಳಿಸಿದೆ. ಅಲ್ಲದೇ, ಇಂತಹ ಧರ್ಮೀಯರಿಗೆ ವಿವಾಹ ಪ್ರಮಾಣಪತ್ರ ನೀಡುತ್ತಿರುವ ಆರ್ಯ ಸಮಾಜದ ಸಂಘಗಳನ್ನು ಡಿಸಿಪಿ ಮಟ್ಟದ ಐಪಿಎಸ್ ಅಧಿಕಾರಿಯಿಂದ ತನಿಖೆ ಮಾಡಿಸುವಂತೆಯೂ ರಾಜ್ಯ ಗೃಹ ಕಾರ್ಯದರ್ಶಿಗೆ ನ್ಯಾಯಾಲಯ ಆದೇಶಿಸಿದೆ.
ಕ್ರಿಮಿನಲ್ ಪ್ರಕರಣ ರದ್ದುಕೋರಿದ್ದ ಆರೋಪಿ ಸೋನು ಅಲಿಯಾಸ್ ಸಹನೂರ್ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ನ್ಯಾ.ಪ್ರಶಾಂತ್ ಕುಮಾರ್ ಅವರು, ಆರ್ಯ ಸಮಾಜದಲ್ಲಿ ಅಪ್ರಾಪ್ತೆಯ ವಿವಾಹ ಕಾನೂನಿನ ಸ್ಪಷ್ಟ ಉಲ್ಲಂಘನೆ. ಆರ್ಯ ಸಮಾಜದಂಥ ದೇವಸ್ಥಾನಗಳು ಯಾವುದೇ ಕಾನೂನು ನಿಯಮ ಪಾಲಿಸದೆ ನಿರ್ದಿಷ್ಟ ಶುಲ್ಕಕ್ಕಾಗಿ ಮನಸೋಇಚ್ಛೆ ಮದುವೆ ಸರ್ಟಿಫಿಕೇಟ್ ನೀಡುತ್ತಿವೆ. ಇಂಥ ಕ್ರಮಗಳು ಕಾನೂನು ಬಾಹಿರ ಎಂದು ಕೋಟ್೯ ಹೇಳಿದೆ.