ಬೆಂಗಳೂರು: ಟ್ಯೂಷನ್ ಗೆ ಬರುತ್ತಿದ್ದ ಹೈಸ್ಕೂಲ್ ವಿದ್ಯಾರ್ಥಿನಿಯನ್ನು ಪುಸಲಾಯಿಸಿ ದೈಹಿಕ ಸಂಬಂಧ ಬೆಳೆಸಿದ್ದ ಟ್ಯೂಷನ್ ಶಿಕ್ಷಕನಿಗೆ ಬೆಂಗಳೂರಿನ ಪೋಕ್ಸೋ ವಿಶೇಷ ನ್ಯಾಯಾಲಯ 20 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಬೆಂಗಳೂರಿನ ಸುಜೇತ್ ಶಿಕ್ಷೆಗೆ ಗುರಿಯಾಗಿರುವ ಖಾಸಗಿ ಬೋಧಕ. ಸಂತ್ರಸ್ತ ಬಾಲಕಿ 9ನೇ ತರಗತಿಯಿಂದ ಟ್ಯೂಷನ್ ಗೆ ಬರುತ್ತಿದ್ದಳು. ಈ ವೇಳೆ ಸುಜೇತ್ ತನ್ನ ವಿದ್ಯಾರ್ಥಿನಿ ಅಪ್ರಾಪ್ತೆ ಎಂಬುದನ್ನೂ ಲೆಕ್ಕಿಸದೇ ಆಕೆಯನ್ನು ಪುಸಲಾಯಿಸಿ ಮನೆಗೆ ಕರೆದೊಯ್ದು ದೈಹಿಕ ಸಂಬಂಧ ಬೆಳೆಸಿದ್ದ.
ಬಾಲಕಿ ಗರ್ಭಿಣಿಯಾದ ನಂತರ ಆಕೆ ಹೊಟ್ಟೆ ನೋವು ಎಂದಾಗ ಪೋಷಕರು ಆಕೆಯನ್ನು ವೈದ್ಯರ ಬಳಿ ಕರೆದೊಯ್ದಿದ್ದರು. ಈ ವೇಳೆ ಬಾಲಕಿ ನಡೆದ ವಿಚಾರವನ್ನು ಪೋಷಕರಿಗೆ ತಿಳಿಸಿ, ನಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ್ದ ಪೊಲೀಸರು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ ಅಡಿ ನ್ಯಾಯಾಲಯದಕ್ಕೆ ಆರೋಪಿಯ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಬೆಂಗಳೂರಿನ ವಿಶೇಷ ನ್ಯಾಯಾಲಯ ವಿದ್ಯಾರ್ಥಿನಿಯ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿ ಶಿಕ್ಷಕನಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶಿಸಿದೆ.