ಬೆಂಗಳೂರು: ಮೈಸೂರಿನ ಕೆಆರ್ ನಗರದ ಮಹಿಳೆಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ದೋಷಿ ಎಂದು ಶುಕ್ರವಾರ ತೀರ್ಪು ನೀಡಿದ್ದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಪ್ರಕರಣದ ವಿಚಾರಣೆ ನಡೆಸಿದ ಬೆಂಗಳೂರು ಜನಪ್ರತಿನಿಧಿಗಳ ವಿರುದ್ಧದ ಪ್ರಕರಣಗಳ ವಿಚಾರಣಾ ವಿಶೇಷ ನ್ಯಾಯಾಲಯ ನಿನ್ನೆ ಪ್ರಜ್ವಲ್ ರೇವಣ್ಣ ದೋಷಿ ಎಂದು ತೀರ್ಪ ನೀಡಿತ್ತು. ಇಂದು ಶಿಕ್ಷೆ ಪ್ರಮಾಣಕ್ಕೆ ಸಂಬಂಧಿಸಿದಂತೆ ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಶಿಕ್ಷೆ ಪ್ರಕಟಿಸುವುದಕ್ಕೆ ಮುನ್ನ ಸರ್ಕಾರದ ಪರ ಹಾಜರಿದ್ದ ವಿಶೇಷ ಅಭಿಯೋಕರು ಜೀವಾವಧಿ ಶಿಕ್ಷೆ ವಿಧಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು. ಇದೇ ವೇಳೆ ಪ್ರಜ್ವಲ್ ಪರ ವಕೀಲರು ಆಪಾದಿತನ ಭವಿಷ್ಯ ಪರಿಗಣಿಸಿ ಕನಿಷ್ಟ ಶಿಕ್ಷೆ ವಿಧಿಸುವಂತೆ ಕೋರಿದರು.
ಅಂತಿಮವಾಗಿ ನ್ಯಾಯಾಲಯ ಪ್ರಕರಣವು ಅತ್ಯಂತ ಹೀನ ಸ್ವರೂಪದ್ದಾಗಿ ಎಂದು ಪರಿಗಣಿಸಿ ಅಪರಾಧಿ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಇದೇ ವೇಳೆ ಪ್ರಜ್ವಲ್ ಗೆ 11 ಲಕ್ಷಕ್ಕೂ ಅಧಿಕ ದಂಡ ವಿಧಿಸಿದ್ದು, ದಂಡದ ಮೊತ್ತದಲ್ಲಿ 11 ಲಕ್ಷ ರೂಪಾಯಿಗಳನ್ನು ಸಂತ್ರಸ್ತೆಗೆ ಪಾವತಿಸುವಂತೆ ಆದೇಶಿಸಿದೆ.
ಶಿಕ್ಷೆ ಪ್ರಮಾಣದ ವಿವರ:
ಐಪಿಸಿ ಸೆಕ್ಷನ್ 376 (2)(k)ರಡಿ ಜೀವಾವಧಿ ಶಿಕ್ಷೆ ಹಾಗೂ 5 ಲಕ್ಷ ರೂ. ದಂಡ
376(2)(n) ಅಡಿ ಪದೇಪದೆ ಅತ್ಯಾಚಾರಕ್ಕೆ ಜೀವನಪರ್ಯಂತ ಜೈಲು, 5 ಲಕ್ಷ ರೂ. ದಂಡ
ಐಪಿಸಿ ಸೆಕ್ಷನ್ 354(A) ಅಡಿ 3 ವರ್ಷ ಸೆರೆವಾಸ, 25,000 ರೂಪಾಯಿ ದಂಡ
ಐಪಿಸಿ ಸೆಕ್ಷನ್ 354 (B) ಅಡಿ 7 ವರ್ಷ ಸೆರೆವಾಸ, 50,000 ರೂಪಾಯಿ ದಂಡ
ಐಪಿಸಿ ಸೆಕ್ಷನ್ 354 (c) ಅಡಿ 3 ವರ್ಷ ಸೆರೆವಾಸ, 25,000 ರೂಪಾಯಿ ದಂಡ
ಸೆಕ್ಷನ್ 506 ಅಡಿ 2 ವರ್ಷ ಸೆರೆವಾಸ 10,000 ರೂ. ದಂಡ
ಸೆಕ್ಷನ್ 201 ಅಡಿ 3 ವರ್ಷ ಸೆರೆವಾಸ 25,000 ರೂ. ದಂಡ ಐಟಿ ಕಾಯ್ದೆ ಸೆ.66(E) ಅಡಿ 3 ವರ್ಷ 25,000 ರೂ. ದಂಡ ವಿಧಿಸಲಾಗಿದೆ.
ಕೇವಲ 4 ತಿಂಗಳ ದಾಖಲೆ ಸಮಯದಲ್ಲೇ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ಈ ತೀರ್ಪು ಪ್ರಕಟಿಸಿರುವುದು ಗಮನಾರ್ಹವಾಗಿದೆ. ಬಾಕಿ 3 ಪ್ರಕರಣಗಳಲ್ಲಿ ವಿಚಾರಣೆ ಮುಂದುವರೆದಿದ್ದು, ತೀರ್ಪು ಬರಬೇಕಿದೆ.