Column

ತೀರಾ ಅಪರೂಪದಲ್ಲೇ ಅಪರೂಪ ಇಂತಹ ನ್ಯಾಯಮೂರ್ತಿಗಳು

Share It

ಲೇಖನ: ಮಂಜೇಗೌಡ ಕೆ.ಜಿ, ವಕೀಲರು, 9980178111

ಇತ್ತೀಚೆಗೆ ಸುಪ್ರೀಂಕೋರ್ಟ್ ಹಾಗೂ ರಾಜ್ಯ ಹೈಕೋರ್ಟ್ ನ ನ್ಯಾಯಮೂರ್ತಿ ಹುದ್ದೆಗಳಿಂದ ಹಲವು ನ್ಯಾಯಮೂರ್ತಿಗಳು ನಿವೃತ್ತಿಯಾದರು. ಇವರೆಲ್ಲರ ನಡುವೆ ನ್ಯಾ. ಅಭಯ್ ಶ್ರೀನಿವಾಸ್ ಓಕ ಅವರು ಇಷ್ಟು ಬೇಗ ನಿವೃತ್ತಿ ಆಗಬಾರದಿತ್ತು, ಈ ನ್ಯಾಯಮೂರ್ತಿ ಇನ್ನಷ್ಟು ಕಾಲ ನ್ಯಾಯಾಂಗದ ಸೇವೆಯಲ್ಲಿರಬೇಕಿತ್ತು ಎಂಬ ಭಾವ ಸಾಕ್ಷಿಪ್ರಜ್ಞೆ ಉಳ್ಳ ವಕೀಲರು ಹಾಗೂ ನಾಗರಿಕರಲ್ಲಿ ಇಂದಿಗೂ ಕಾಡುತ್ತಿದೆ.

ನಿವೃತ್ತಿ ಪದವನ್ನು ದ್ವೇಷಿಸುವೇ ಎಂದು ಹೇಳಿತ್ತಲೇ ನಿವೃತ್ತರಾದ ನ್ಯಾ. ಎ.ಎಸ್ ಓಕ ಅವರನ್ನು ನೆನೆಯಲು ಹಾಗೂ ಅವರಿಗೆ ಇಷ್ಟು ಬೇಗ ನಿವೃತ್ತಿಯಾಗಬಾರದಿತ್ತು ಎಂದು ಭಾವಿಸಲು ಹಲವು ಕಾರಣಗಳಿವೆ. ನ್ಯಾ. ಓಕ ಕರ್ನಾಟಕದವರೇನಲ್ಲ. ಹಾಗಿದ್ದೂ, ರಾಜ್ಯದ ಜನತೆಗೆ ಅವರು ಇಷ್ಟವಾಗಲು ಅವರ ಮಾನವೀಯ ಮೌಲ್ಯಗಳು, ಕಾರ್ಯವೈಖರಿ ಮತ್ತು ದಕ್ಷತೆ ಕಾರಣ. ಹೀಗಾಗಿಯೇ ನ್ಯಾ. ಎ.ಎಸ್ ಓಕ ರಾಜ್ಯದ ಜನಮಾನಸದಲ್ಲಿ ಈಗಲೂ ಉಳಿದಿದ್ದಾರೆ.

ನೇರ ಮಾತು: ನ್ಯಾ.ಎ.ಎಸ್ ಓಕ ಅವರು ಮೊದಲಿಗೆ ಕರ್ನಾಟಕ ಹೈಕೋರ್ಟ್ ಗೆ ಬಂದಾಗ ಎಲ್ಲ ಮುಖ್ಯ ನ್ಯಾಯಮೂರ್ತಿಗಳನ್ನು ಆಹ್ವಾನಿಸುವಂತೆಯೇ ಔಪಚಾರಿಕವಾಗಿ ಸ್ವಾಗತಿಸಲಾಗಿತ್ತು. ನಂತರದ ದಿನಗಳಲ್ಲಿ ಅವರು ಕೆಲವರಿಗೆ ಅಪಥ್ಯವೆಂಬಂತೆ ಭಾಸವಾಗಿದ್ದರು. ಹಿರಿಯ-ಕಿರಿಯ ವಕೀಲರು ಎಂಬ ಭೇದಭಾವವಿಲ್ಲದ ಅವರ ನಡವಳಿಕೆ ಕೆಲವರಿಗೆ ಬೇಸರ ತರಿಸಿತ್ತು. ಕೇಸಿನ ಮೆರಿಟ್ಸ್ ಅನ್ನು ಮಾತ್ರವೇ ಪರಿಗಣಿಸಿ ತೀರ್ಪು ನೀಡುತ್ತಿದ್ದ ಅವರ ನ್ಯಾಯಪೀಠದಿಂದ ತಮಗೆ ಬೇಕಾದ ಪರಿಹಾರ ಪಡೆದುಕೊಳ್ಳುವುದು ಯಾರಿಗೂ ಸುಲಭದ್ದಾಗಿರಲಿಲ್ಲ. ಹೀಗಾಗಿಯೇ ಕೆಲ ವಕೀಲರು ಮಹತ್ವದ ಪ್ರಕರಣಗಳಲ್ಲಿ ತಮ್ಮ ಕೇಸಿನಲ್ಲಿ ವಾದ ಮಂಡಿಸಲು ಹಿರಿಯ ವಕೀಲರನ್ನು ತಂದು ನಿಲ್ಲಿಸುತ್ತಿದ್ದರು. ಈ ವೇಳೆ ನ್ಯಾ. ಓಕ ಅವರು “ಹಿರಿಯ ವಕೀಲರನ್ನು ತಂದು ನಿಲ್ಲಿಸಿದರೆ ಜಾದೂ ನಡೆಯುತ್ತದೆಂಬ ನಿರೀಕ್ಷೆಯಲ್ಲಿದ್ದೀರಾ” ಎಂದು ನೇರ ಮಾತುಗಳಲ್ಲಿ ಪ್ರಶ್ನಿಸುತ್ತಿದ್ದರು. ಆದರೆ ದಿನಕಳೆದಂತೆ ಅವರ ಸಹಜ ನ್ಯಾಯತತ್ವದ ನಿಲುವುಗಳು ಮತ್ತು ಕಾರ್ಯವೈಖರಿ ಮತ್ತು ದಕ್ಷತೆ ಎಲ್ಲರ ಗಮನ ಸೆಳೆಯಲು ಪ್ರಾರಂಭಿಸಿದವು.

ಮಾನವೀಯ ಮೌಲ್ಯ: ನ್ಯಾ.ಎ.ಎಸ್ ಓಕ ಮಾನವೀಯ ಮೌಲ್ಯಗಳಿಗೆ ಒತ್ತು ನೀಡುತ್ತಿದ್ದರು. ಕೋವಿಡ್ ಕಾಲಘಟ್ಟದಲ್ಲಿ ರಾಜ್ಯ ಹೈಕೋರ್ಟ್ ಕಾರ್ಯ ನಿರ್ವಹಿಸಿದ ರೀತಿ ಸಾರ್ವಜನಿಕ ಮೆಚ್ಚುಗೆಗೆ ಪಾತ್ರವಾಗಿತ್ತು. ಕೋವಿಡ್ ಸಂಬಂಧವಾಗಿ ದಾಖಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ನಿರ್ವಹಿಸುವಲ್ಲಿ ಅವರ ಪಾತ್ರ ಬಹಳ ದೊಡ್ಡದು. ಇದೇ ಸಮಯದಲ್ಲಿ ಸಾರಿಗೆ ನೌಕರರು ತಮ್ಮ ಬೇಡಿಕೆಗಳಿಗೆ ಒತ್ತಾಯಿಸಿ ಪ್ರತಿಭಟನೆಗೆ ಮುಂದಾದಾಗ ಸರ್ಕಾರ ಮುಲಾಜಿಲ್ಲದೆ ಅವರ ವಿರುದ್ಧ ಕ್ರಮಕ್ಕೆ ಮುಂದಾಗಿತ್ತು. ಇಂತಹ ಸಂದಿಗ್ಧ ಪರಿಸ್ಥಿತಿಯನ್ನು ತಿಳಿಗೊಳಿಸಿ, ವಜಾಗೊಂಡವರ ಮರುನೇಮಕಕ್ಕೆ ಆದೇಶಿಸಿ, ಸಾರಿಗೆ ನೌಕರರು ಮತ್ತೆ ತಮ್ಮ ಕೆಲಸಕ್ಕೆ ಮರಳಲು ಹಾಗೂ ಸಾರ್ವಜನಿಕರಿಗೆ ಉಂಟಾಗಿದ್ದ ಸಮಸ್ಯೆಗಳನ್ನು ಪರಿಹರಿಸಲು ಹೈಕೋರ್ಟ್ ಕೈಗೊಂಡ ಕ್ರಮಗಳು ಸಾರ್ವಜನಿಕ ಮೆಚ್ಚುಗೆ ಗಳಿಸಿತ್ತು.

ಹೈಕೋರ್ಟ್ ಸಿಬ್ಬಂದಿ ಕೋವಿಡ್ ಗೆ ತುತ್ತಾದಾಗ ಅವರಿಗೆ ಅಗತ್ಯ ರಜೆ ನೀಡಿ, ವಾಪಸ್ಸು ಕೆಲಸಕ್ಕೆ ಮರಳಿದಾಗ ಹೂ ಕೊಟ್ಟು ಸ್ವಾಗತಿಸಿದ್ದರು. ರಾಜ್ಯ ಹೈಕೋರ್ಟ್ ನ ಓರ್ವ ಮುಖ್ಯ ನ್ಯಾಯಮೂರ್ತಿ ತಮ್ಮ ಸಿಬ್ಬಂದಿಯನ್ನು ಮುಂಭಾಗಿಲಲ್ಲಿ ನಿಂತು ಸ್ವಾಗತಿಸಿ, ಹೂಗುಚ್ಛ ನೀಡಿ ಕೆಲಸಕ್ಕೆ ಬರಮಾಡಿಕೊಳ್ಳಬೇಕೆಂದರೆ ಹೃದಯ ವೈಶಾಲ್ಯತೆ ಬಹಳ ಮುಖ್ಯ.

ದಕ್ಷ ಆಡಳಿತ: ಹೈಕೋರ್ಟ್ ನ ನ್ಯಾಯಮೂರ್ತಿಗಳು ಹಾಗೂ ವಕೀಲರ ಸಂಘಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡ ನಂತರವೇ ನ್ಯಾ. ಎ.ಎಸ್ ಓಕ ಆಡಳಿತಾತ್ಮಕ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದರು. ಇದರಿಂದಾಗಿ ರಾಜ್ಯ ನ್ಯಾಯಾಂಗದ ಒಟ್ಟಾರೆ ಕಾರ್ಯಕ್ಷಮತೆ ಅತ್ಯುತ್ತಮವಾಗಿತ್ತು. ಮನೆಯೊಳಗಿನ ಗಲೀಜು ಹೊರಗಿನವರಿಗೆ ಕಾಣಬಾರದು, ಕಂಡರೆ ಗೌರವ ಕಡಿಮೆಯಾಗುತ್ತದೆ, ಆದಷ್ಟು ನಾವೇ ಅದನ್ನು ಸ್ವಚ್ಛ ಮಾಡಿಕೊಳ್ಳಬೇಕು ಎಂಬ ಕಾರಣಕ್ಕಾಗಿಯೇ ನ್ಯಾಯಾಂಗದ ಒಳಗಿನ ಹುಳುಕುಗಳ ಕುರಿತಂತೆ ಅವರೆಂದಿಗೂ ಬಹಿರಂಗವಾಗಿ ಮಾತನಾಡಲಿಲ್ಲ. ಹಾಗೆಂದು ಒಳಗಿನ ಹುಳುಕುಗಳನ್ನು ಸಹಿಸಿಕೊಂಡಿದ್ದರು ಎಂದೂ ಅಲ್ಲ. ರಾಜ್ಯ ನ್ಯಾಯಾಂಗದ ಮುಖ್ಯಸ್ಥರಾಗಿ ಅವರು ಎಲ್ಲೆಲ್ಲಿ ಬಿಸಿ ಮುಟ್ಟಿಸಬೇಕು, ಎಲ್ಲಿ ಯಾವುದನ್ನು ಸರಿಪಡಿಸಬೇಕು ಎಂಬುದು ಅವರಿಗೆ ಚೆನ್ನಾಗಿ ತಿಳಿದಿತ್ತು ಮತ್ತು ಅಂತಹ ಪ್ರಯತ್ನಗಳನ್ನು ಅವರು ಹೈಕೋರ್ಟ್ ನ ಸಿಜೆಯಾಗಿದ್ದಷ್ಟೂ ಅವಧಿ ಮಾಡಿದ್ದರು. ಕೆಲಸದ ವಿಚಾರದಲ್ಲಿ ಎಂದಿಗೂ ಸಮಯಪ್ರಜ್ಞೆ ಮರೆತವರಲ್ಲ ಮತ್ತು ಇತರರಿಗೂ ಮರೆಯಲು ಬಿಡಲಿಲ್ಲ.

ಓರ್ವ ನ್ಯಾಯಮೂರ್ತಿಯಾಗಿ ಪ್ರಕರಣಗಳನ್ನು ಅತ್ಯಂತ ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದರು. ಪ್ರಕರಣದ ಮೆರಿಟ್ಸ್ ಆಧರಿಸಿಯೇ ತೀರ್ಪು ನೀಡುತ್ತಿದ್ದ ನ್ಯಾ. ಓಕ ಅವರು ತಮ್ಮ ತೀರ್ಪಿನಿಂದ ಯಾರಿಗಾದರೂ ಬೇಸರ ತರಿಸುತ್ತದೆಯೇ ಎಂಬುದನ್ನು ಎಂದಿಗೂ ಪರಿಗಣನೆಗೆ ತೆಗೆದುಕೊಳ್ಳುತ್ತಿರಲಿಲ್ಲ. ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಪದೋನ್ನತಿ ಹೊಂದಿದ ಬಳಿಕ ಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಪೊಂದನ್ನ ನೀಡಿದರು. ಆರೋಪಿ-ಸಂತ್ರಸ್ತೆ ಸಂಧಾನ ಮಾಡಿಕೊಂಡಿದ್ದಾರೆ ಎಂಬ ಕಾರಣಕ್ಕೆ ಅಥವಾ ವಿವಾಹವಾಗುತ್ತಾರೆ ಎಂಬ ಕಾರಣಕ್ಕೆ ಆರೋಪಿಯನ್ನು ಕಾನೂನು ಪರಿಗಣಾಮಗಳಿಂದ ಮುಕ್ತಗೊಳಿಸಲಾಗದು, ಹೈಕೋರ್ಟ್ ಗಳು ಇಂತಹ ಕ್ರಮಗಳನ್ನು ಅನುಸರಿಸಬಾರದು ಎಂದು ತೀರ್ಪು ನೀಡುವ ಮೂಲಕ ಶಾಸನಗಳ ಅರ್ಥೈಸುವಿಕೆಯ ಚೌಕಟ್ಟನ್ನು ನ್ಯಾಯಾಲಯಗಳು ಮೀರಬಾರದು ಎಂಬ ನಿಯಮವನ್ನು ಎತ್ತಿಹಿಡಿದರು.

ಕೆಳ-ಅಧೀನ ನ್ಯಾಯಾಲಯಗಳಿಲ್ಲ: ವಿಚಾರಣಾ ನ್ಯಾಯಾಲಯಗಳ ಕಾರ್ಯವೈಖರಿ ಸುಧಾರಣೆಗೆ ಮುಲಾಜಿಲ್ಲದಂತೆ ಕ್ರಮ ವಹಿಸುತ್ತಿದ್ದ ನ್ಯಾ. ಓಕ ಅವರು ಇತರರು ವಿಚಾರಣಾ ನ್ಯಾಯಾಲಯಗಳ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಸಹಿಸುತ್ತಿರಲಿಲ್ಲ. ಹೈಕೋರ್ಟ್ ನಲ್ಲಿ ಕೆಲ ಬಾರಿ ವಾದ ಮಂಡನೆ ವೇಳೆ ವಕೀಲರು ವಿಚಾರಣಾ ನ್ಯಾಯಾಲಯಗಳನ್ನು ಹಗುರವಾಗಿ ಕೆಳ ನ್ಯಾಯಾಲಯ, ಅಧೀನ ನ್ಯಾಯಾಲಯ ಎಂದು ಸಂಭೋದಿಸುತ್ತಿದ್ದರು. ಈ ವೇಳೆ ನ್ಯಾ. ಓಕ ಅವರು ಅಂತಹ ಹೇಳಿಕೆಗಳನ್ನ ತಿದ್ದುತಿದ್ದರು. ನಮ್ಮಲ್ಲಿ ಯಾವುದೂ ಅಧೀನ ಅಥವಾ ಕೆಳ ನ್ಯಾಯಾಲಯವಿಲ್ಲ. ನಮ್ಮಲ್ಲಿರುವುದು ವಿಚಾರಣಾ ನ್ಯಾಯಾಲಯಗಳು ಮಾತ್ರ. ಅವುಗಳನ್ನು ವಿಚಾರಣಾ ನ್ಯಾಯಾಲಯ ಎಂದೇ ಕರೆಯಬೇಕು ಎಂದು ತಾಕೀತು ಮಾಡುತ್ತಿದ್ದರು. ಈ ವಿಚಾರವನ್ನು ಅವರು ನಿವೃತ್ತಿ ಹೊಂದುವ ಮೊದಲು ಸುಪ್ರೀಂಕೋರ್ಟಿನ ಒಂದು ತೀರ್ಪಿನಲ್ಲಿಯೂ ದಾಖಲಿಸಿಟ್ಟರು. ವಿಚಾರಣಾ ನ್ಯಾಯಾಲಯಗಳ ಬಗ್ಗೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ವಕೀಲರಲ್ಲಿರುವ ಮನಸ್ಥಿತಿಯನ್ನು ಬದಲಾಯಿಸಲು ತಮ್ಮ ತೀರ್ಪಿನಲ್ಲಿಯೇ ಈ ವಿಚಾರ ಪ್ರಸ್ತಾಪಿಸಿ, ಕೆಳ ನ್ಯಾಯಾಲಯ ಎನ್ನುವುದು ಸಂವಿಧಾನದ ಆಶಯಕ್ಕೆ ವಿರುದ್ಧವಾದದ್ದು ಎಂದು ದಾಖಲಿಸಿದ್ದು ನಿಜಕ್ಕೂ ಐತಿಹಾಸಿಕ ಕ್ರಮ.

ಟೀಕೆಗಳಿಗೆ ಸ್ವಾಗತ: ಸಾಮಾನ್ಯವಾಗಿ ನ್ಯಾಯಾಂಗ ಅಧಿಕಾರಿಗಳ ಅಥವಾ ನ್ಯಾಯಮೂರ್ತಿಗಳ ಕಾರ್ಯವೈಖರಿಯನ್ನು ಯಾರೂ ಪ್ರಶ್ನಿಸುವುದಿಲ್ಲ. ಪ್ರಶ್ನಿಸುವ ಧೈರ್ಯವೂ ನಮ್ಮಲ್ಲಿ ಸಾಕಷ್ಟು ಜನರಿಗಿರುವುದಿಲ್ಲ. ಹೀಗಾಗಿಯೇ ಒಂದೊಮ್ಮೆ ನ್ಯಾಯಮೂರ್ತಿಗಳನ್ನು ಪ್ರಶ್ನಿದರೆ ಅವರಿಗೂ (ಕೆಲವರಿಗೆ) ಸ್ವಲ್ಪ ಇರಿಸುಮುರಿಸು ಉಂಟಾಗುತ್ತದೆ. ಆದರೆ, ಸಾರ್ವಜನಿಕ ಉತ್ತರದಾಯಿತ್ವದಲ್ಲಿ ನಂಬಿಕೆ ಇರಿಸಿದ್ದ ನ್ಯಾ.ಎ.ಎಸ್ ಓಕ ಅವರು ನ್ಯಾಯಮೂರ್ತಿಗಳು ಪ್ರಶ್ನಾತೀತರಲ್ಲ, ನೀವು ಪ್ರಶ್ನಿಸಬಹುದು ಎಂದು ಬಹಿರಂಗವಾಗಿ ಹೇಳುತ್ತಿದ್ದರು. ಬೆಂಗಳೂರು ವಕೀಲರ ಸಂಘ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಈ ವಿಚಾರವಾಗಿ ಮಾತನಾಡಿದ್ದ ನ್ಯಾ.ಓಕ ಅವರು, ದೇಶದ ಪ್ರತಿಯೊಬ್ಬ ವ್ಯಕ್ತಿಗೂ ನಮ್ಮ ತೀರ್ಪುಗಳನ್ನು ಟೀಕಿಸುವ ಹಕ್ಕಿದೆ. ಆದರೆ, ಹೇಗೆ ಟೀಕಿಸುತ್ತೀರಿ ಎಂಬುದು ಮುಖ್ಯ. ನ್ಯಾಯಾಲಯ ಅಥವಾ ನ್ಯಾಯಧೀಶ ಎಲ್ಲಿ, ಯಾವ ವಿಚಾರವಾಗಿ ಕಾನೂನನ್ನು ಸರಿಯಾಗಿ ಅನ್ವಯಿಸಿಲ್ಲ ಎಂಬುದನ್ನು ಅರಿತು, ತೀರ್ಪನ್ನು ವಿಮರ್ಶಿಸಿ, ಟೀಕಿಸಬೇಕೇ ಹೊರತು, ಸುಮ್ಮನೆ ನೇರವಾಗಿ ಈ ತೀರ್ಪು ಸರಿಯಿಲ್ಲ. ನಾನು ಒಪ್ಪುವುದಿಲ್ಲ ಎನ್ನುವುದು ಸೂಕ್ತವಲ್ಲ ಎಂದು ಹೇಳಿದ್ದರು. ಈ ಮೂಲಕ ನ್ಯಾಯಾಂಗವೂ ಸಾರ್ವಜನಿಕ ಟೀಕೆಗಳನ್ನು ಸ್ವಾಗತಿಸುವಷ್ಟು ಉತ್ತರದಾಯಿಯಾಗಬೇಕು ಎಂಬ ಸಂದೇಶ ರವಾನಿಸಿದ್ದರು.

ಪತ್ರಕರ್ತರಿಗೂ ಉತ್ತರಿಸಿದ್ದರು: ಕೋವಿಡ್ ಲಾಕ್ ಡೌನ್ ಸಮಯದಲ್ಲಿ ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಬಿಟ್ಟರೆ ಮತ್ಯಾವ ಸರ್ಕಾರಿ ಸಂಸ್ಥೆಗಳು ಕೆಲಸ ಮಾಡಿದ್ದು ಕಾಣಲಿಲ್ಲ. ಸರ್ಕಾರದ ಅಧಿಕಾರಿಗಳು, ಸಿಬ್ಬಂದಿ ಸಿಕ್ಕ ಅವಕಾಶ ಬಳಸಿಕೊಂಡು ಕಾಲಹರಣದಲ್ಲಿ ಲೀನವಾಗಿದ್ದರು. ಸರ್ಕಾರಿ ಸಂಸ್ಥೆಗಳು ಖಾಲಿ ಕುಳಿತಿರುವುದನ್ನು ಗಮನಿಸಿದ ಈಟಿವಿಯ ಕೋರ್ಟ್ ಬೀಟ್ ವರದಿಗಾರ ಕೋವಿಡ್ ಅವಧಿಯಲ್ಲಿ ಹೈಕೋರ್ಟ್ ಮಾಡಿದ ಕೆಲಸಗಳೇನು, ಇತ್ಯರ್ಥಪಡಿಸಿದ ಪ್ರಕರಣಗಳೆಷ್ಟು ಎಂದು ಪ್ರಶ್ನಿಸಿ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಗೆ ಕರೆ ಮಾಡಿದ್ದರು. ಜತೆಗೆ, ಮುಖ್ಯ ನ್ಯಾಯಮೂರ್ತಿಗಳಿಗೆ ಇಮೇಲ್ ಮೂಲಕ ಪತ್ರ ಬರೆದು ಪ್ರಶ್ನಿಸಿದ್ದರು. ಇದನ್ನು ನ್ಯಾ.ಎ.ಎಸ್. ಓಕ ಅವರು ಪ್ರತಿಷ್ಠೆಯಾಗಿ ಪರಿಗಣಿಸದೇ, ತಮ್ಮ ಸಾರ್ವಜನಿಕ ಉತ್ತರದಾಯಿತ್ವಕ್ಕೆ ಸಾಕ್ಷಿ ಎಂಬಂತೆ ಹೈಕೋರ್ಟ್ ವೆಬ್ ಸೈಟ್ ನಲ್ಲಿಯೇ ಕೋವಿಡ್ ಅವಧಿಯಲ್ಲಿ ಹೈಕೋರ್ಟ್ ನಿರ್ವಹಿಸಿದ ಪ್ರಕರಣಗಳ ಅಂಕಿಅಂಶಗಳನ್ನು ಪತ್ರಿಕಾ ಪ್ರಕಟಣೆ ಅಡಿಯಲ್ಲಿ ಸಾರ್ವಜನಿಕವಾಗಿ ಪ್ರಕಟಿಸಿದರು. ಪತ್ರಕರ್ತರಿಂದ ಅಂತರ ಕಾಯ್ದುಕೊಂಡೂ, ಇಂತಹ ಜವಾಬ್ದಾರಿಯುತ ನಡೆ ಪ್ರದರ್ಶಿಸಿದ್ದು ಬಹುಶಃ ರಾಜ್ಯ ಹೈಕೋರ್ಟ್ ನ ಇತಿಹಾಸದಲ್ಲಿ ಪ್ರಥಮ ಎನ್ನಬಹುದು.

ಸಾರ್ವಜನಿಕ ಹಿತಾಸಕ್ತಿ: ಸಾರ್ವಜನಿಕ ಹಿತಾಸಕ್ತಿ ಉಳ್ಳ ಪ್ರಕರಣಗಳಲ್ಲಿ ನ್ಯಾ. ಎ.ಎಸ್ ಓಕ ಬಹಳಷ್ಟು ಕಾಳಜಿ ಹೊಂದಿರುತ್ತಿದ್ದರು. ಸಾಮಾನ್ಯವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ಪೀಠದಲ್ಲೇ ವಿಚಾರಣೆ ನಡೆಸಲಾಗುತ್ತದೆ. ಆದರೆ, ಕೆಲ ಬಾರಿ ಇಂತಹ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಲ್ಲಿ ಅರ್ಜಿದಾರರ ಸ್ವಹಿತಾಸಕ್ತಿ ಇರುತ್ತದೆ. ಇಂತಹ ಸ್ವಹಿತಾಸಕ್ತಿ ಕಂಡು ಬರುತ್ತಲೇ ನ್ಯಾಯಮೂರ್ತಿಗಳು ಪ್ರಕರಣಗಳನ್ನು ವಜಾಗೊಳಿಸಿಬಿಡುತ್ತಾರೆ. ಆದರೆ, ನ್ಯಾ. ಓಕ ಅವರು ಹೀಗೆ ಪ್ರಕರಣಗಳನ್ನು ವಜಾಗೊಳಿಸುತ್ತಿರಲಿಲ್ಲ. ಬದಲಿಗೆ ಪಿಐಎಲ್ ಅರ್ಜಿಯಲ್ಲಿ ನಿಜವಾದ ಸಾರ್ವಜನಿಕ ಹಿತಾಸಕ್ತಿ ಇರುವುದು ಕಂಡುಬಂದರೆ ಅವುಗಳನ್ನು ಬಹಳ ಮುತುವರ್ಜಿಯಿಂದ ವಿಚಾರಣೆ ನಡೆಸುತ್ತಿದ್ದರು. ಒಂದು ವೇಳೆ ಅರ್ಜಿದಾರನ ಸ್ವಹಿತಾಸಕ್ತಿ ಕಂಡು ಬಂದರೆ ಅಂತಹ ಅರ್ಜಿಗಳನ್ನು ಸುಮೊಟೊ ಪಿಐಎಲ್ ಆಗಿ ಪರಿವರ್ತಿಸಿಕೊಂಡು ಅರ್ಜಿದಾರನನ್ನು ಪ್ರಕರಣದಿಂದ ಕೈಬಿಟ್ಟು ವಿಚಾರಣೆ ಮುಂದುವರೆಸುತ್ತಿದ್ದರು. ಅರ್ಜಿದಾರರು ಪ್ರಕರಣದಲ್ಲಿ ಸ್ವಹಿತಾಸಕ್ತಿ ಹೊಂದಿದ್ದಾರೆ ಎಂಬ ಏಕೈಕ ಕಾರಣಕ್ಕೆ ಪಿಐಎಲ್ ಅರ್ಜಿಗಳನ್ನು ವಜಾಗೊಳಿಸುತ್ತಿರಲಿಲ್ಲ. ಇಂತಹ ಸೂಕ್ಷ್ಮ ಮನಸ್ಥಿತಿ ಮತ್ತು ನ್ಯಾಯೋಚಿತ ಕ್ರಮಗಳಿಂದಾಗಿಯೇ ನ್ಯಾ. ಓಕ ಅವರು ಇತರೆ ನ್ಯಾಯಮೂರ್ತಿಗಳಿಗಿಂತ ಮೇಲ್ಪಂಕ್ತಿಗೇರುತ್ತಾರೆ.

ಹುಟ್ಟಿನಿಂದ ಮೇಲ್ವರ್ಗದ ಸಮುದಾಯಕ್ಕೆ ಸೇರಿದವರಾದರೂ ಧಾರ್ಮಿಕ ಹಿನ್ನೆಲೆಯಲ್ಲಿ ಯಾವೊಂದು ಪ್ರಕರಣವನ್ನೂ ನೋಡಿದ್ದಾಗಲೀ, ಅಥವಾ ಸಮುದಾಯದೊಂದಿಗೆ ಗುರುತಿಸಿಕೊಂಡಿದ್ದಾಗಲೀ ಎಂದಿಗೂ ಕಂಡುಬರುವುದಿಲ್ಲ. ಬಾಲ ಸನ್ಯಾಸಕ್ಕೆ ಸಂಬಂಧಿಸಿದಂತೆ ವಿವಾದವೊಂದು ಹೈಕೋರ್ಟ್ ಮುಂದೆ ಬಂದಾಗ ಪ್ರಕರಣವನ್ನು ಧಾರ್ಮಿಕ ಹಿನ್ನೆಲೆಯಲ್ಲಿ ನೋಡದೇ, ಬಾಲಕನೋರ್ವನ ಹಕ್ಕುಗಳು ಮತ್ತು ಭವಿಷ್ಯವನ್ನು ಪರಿಗಣನೆಯಲ್ಲಿ ಇಟ್ಟುಕೊಂಡು ವಿಚಾರಣೆ ಶುರು ಮಾಡಿದರು. ಇದೇ ವೇಳೆ ಧಾರ್ಮಿಕ ಸಂಸ್ಥೆಯೊಂದು ದೊಡ್ಡ ಸಂಖ್ಯೆಯಲ್ಲಿ ಗಿಡ ನೆಡುವುದಾಗಿ ಸಾರ್ವಜನಿಕರಿಂದ ಹಣ ಸಂಗ್ರಹಿಸುವ ವಿಚಾರವಾಗಿ ಪಿಐಎಲ್ ದಾಖಲಾದಾಗ ಅದನ್ನು ಕೂಡ ಕಾನೂನಿನ ಚೌಕಟ್ಟಿನಲ್ಲಿಯೇ ಪರಿಗಣನೆಗೆ ತೆಗೆದುಕೊಂಡು ವಿಚಾರಣೆ ಆರಂಭಿಸಿದರು. ಆದರೆ ಅವೆರಡೂ ಪ್ರಕರಣಗಳು ನ್ಯಾ. ಓಕ ಅವರು ಸುಪ್ರೀಂಕೋರ್ಟ್ ಗೆ ಪದೋನ್ನತಿ ಪಡೆದು ವರ್ಗವಾದ ನಂತರವೇ ಇತ್ಯರ್ಥವಾದವು.

ಸಾಂವಿಧಾನಿಕ ವಿಷಯಗಳಲ್ಲಿ ನೈಪುಣ್ಯತೆ ಹೊಂದಿದ್ದ ನ್ಯಾ. ಅಭಯ್ ಶ್ರೀನಿವಾಸ್ ಓಕ ಅವರು ಕರ್ನಾಟಕ ರಾಜ್ಯ ಹೈಕೋರ್ಟ್ ಕಂಡ ಅತ್ಯಂತ ದಕ್ಷ, ಪ್ರಾಮಾಣಿಕ, ಜನಾನುರಾಗಿ ಮುಖ್ಯ ನ್ಯಾಯಮೂರ್ತಿ ಎಂಬುದರಲ್ಲಿ ಯಾವ ಅನುಮಾನವಿಲ್ಲ. ಅವರು ಎಂಜಿನಿಯರ್ ಆಗುವ ಆಲೋಚನೆಯ ಬಿಟ್ಟು ಬರದಿದ್ದರೆ ಭಾರತದ ನ್ಯಾಯಾಂಗ ಓರ್ವ ಶ್ರೇಷ್ಠ ನ್ಯಾಯಮೂರ್ತಿಯನ್ನು ಕಳೆದುಕೊಳ್ಳುತ್ತಿತ್ತು. ಮಗ ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿಯಾದ ನಂತರ ತಂದೆ ತನ್ನ ಪ್ರಾಕ್ಟೀಸ್ ನಿಲ್ಲಿಸಿದ್ದರು. ಇಂತಹ ಹಿನ್ನೆಲೆಯಿಂದ ಬಂದ ನ್ಯಾ. ಓಕಾ ಅವರು ತೀರಾ ಅಪರೂಪದಲ್ಲೇ ಅಪರೂಪದ ನ್ಯಾಯಮೂರ್ತಿ. ಸುಪ್ರೀಂಕೋರ್ಟ್ ನ ಅವರ ಕೊನೆಯ ಕೆಲಸದ ದಿನವೂ ಇಡೀದಿನ ಕಾರ್ಯ ನಿರ್ವಹಿಸಿ, ನಂತರ ಬೀಳ್ಕೊಡುಗೆ ಸಮಾರಂಭದಲ್ಲಿ ಗೌರವ ಸ್ವೀಕರಿಸಿದ ಅಪರೂಪದ ನ್ಯಾಯಮೂರ್ತಿ. ನ್ಯಾಯಾಂಗ ಸೇವೆಯಲ್ಲಿ ಸೇವಾ ಹಿರಿತನದ ಬದಲಿಗೆ ದಕ್ಷತೆ ಆಧಾರದಲ್ಲಿ ಪದೋನ್ನತಿ ನೀಡುವ ವ್ಯವಸ್ಥೆ ಇದ್ದಿದ್ದರೆ ನ್ಯಾ. ಎ.ಎಸ್ ಓಕ ಅವರು ಬಹುಶಃ ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಿಯೇ ನಿವೃತ್ತಿಯಾಗುತ್ತಿದ್ದರು. ಹೇಳುತ್ತಾ ಹೋದರೆ ನ್ಯಾ.ಎ.ಎಸ್ ಓಕ ಅವರ ಬದುಕು ಒಂದು ಶ್ರೇಷ್ಠ ಕೃತಿಯಾಗಬಲ್ಲದು ಮತ್ತು ಭಾರತದ ಭವಿಷ್ಯದ ನ್ಯಾಯಾಂಗ ಅಧಿಕಾರಿಗಳಿಗೆ, ನ್ಯಾಯಮೂರ್ತಿಗಳಿಗೆ ಮಾರ್ಗದರ್ಶಿಯಾಗಬಲ್ಲದು. ಸಮಗ್ರವಾಗಿ ಹೇಳುವುದಾದರೆ ನ್ಯಾ. ಎ.ಎಸ್ ಓಕ ನಮ್ಮ ಕಾಲಘಟ್ಟದಲ್ಲಿ ಕಂಡಂತಹ ಓರ್ವ ಶ್ರೇಷ್ಠ ನ್ಯಾಯಮೂರ್ತಿ ಎಂಬುದರಲ್ಲಿ ಎರಡು ಮಾತಿಲ್ಲ. ಇಂತಹ ಶ್ರೇಷ್ಠ ನ್ಯಾಯಮೂರ್ತಿಗಳ ಸಂಖ್ಯೆ ಮತ್ತಷ್ಟು ಹೆಚ್ಚಲಿ ಎಂಬುದಷ್ಟೇ ನಮ್ಮ ಆಶಯ.


Share It

You cannot copy content of this page