ಬೆಂಗಳೂರು: ಆರೋಗ್ಯ ತಂತ್ರಾಜ್ಞಾನ ಬಳಕೆಯಲ್ಲಿ ಭಾರತ ಜಾಗತಿಕವಾಗಿ ಮಹತ್ವದ ಪಾತ್ರ ವಹಿಸುತ್ತಿದ್ದು, ಕೃತಕ ಬುದ್ದಿಮತ್ತೆಯಿಂದ ಶೇ 90 ರಷ್ಟು ರೋಗವನ್ನು ಖಚಿತವಾಗಿ ಪತ್ತೆ ಮಾಡಬಹುದು. ಚಿಕಿತ್ಸಾ ವೆಚ್ಚವೂ ಗಣನೀಯವಾಗಿ ಇಳಿಕೆಯಾಗಲಿದೆ ಎಂದು ಐಐಟಿ ಕಾರಗ್ಪುರ್ ನ ಮಾಜಿ ನಿರ್ದೇಶಕ ಮತ್ತು ಕಂಪ್ಯೂಟರ್ ವಿಜ್ಞಾನಿ ಪ್ರೊ. ಪಾರ್ಥ ಪ್ರತೀಮ್ ಚಕ್ರಬರ್ತಿ ಹೇಳಿದರು.
ಶನಿವಾರ ಅನಂತ್ ಕುಮಾರ್ ಪ್ರತಿಷ್ಠಾನದಿಂದ ಆಯೋಜಿಸಲಾಗಿದ್ದ 14 ನೇ ಆವೃತ್ತಿಯ ನೇಷನ್ ಫಸ್ಟ್ ಡೈಲಾಗ್ ನಲ್ಲಿ “ಕಾಯಿಲೆ ಪತ್ತೆಯಿಂದ ನಿಯಂತ್ರಣ: ಗುಣಮುಖ ಮತ್ತು ಭವಿಷ್ಯದ ಆರೋಗ್ಯ ವಲಯದಲ್ಲಿ ಕೃತಕ ಬುದ್ದಿಮತ್ತೆ” ಕುರಿತು ನೆಡೆದ ವರ್ಚುವಲ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಆಧುನಿಕ ಕೃತಕ ಬುದ್ದಿಮತ್ತೆ ಎಲ್ಲಾ ಜ್ಞಾನವನ್ನು ಒಳಗೊಂಡಿದ್ದು, ಪರಿಹಾರವನ್ನೂ ಸಹ ಒದಗಿಸುತ್ತಿದೆ. ಎಐ ಎಲ್ಲಾ ವೇದಿಕೆಗಳಿಗೂ ಅನ್ವಯವಾಗುತ್ತಿದ್ದು, ಮಾನವನ ಬದುಕನ್ನು ಸುಲಭಗೊಳಿಸುತ್ತಿದೆ ಎಂದರು.
ಜಗತ್ತಿನಲ್ಲಿ 200 ಪ್ರೋಟಿನ್ ಗಳ ಬಗ್ಗೆ ಮಾಹಿತಿ ಇದ್ದು, ಒಂದು ಪ್ರೋಟಿನ್ ಬಗ್ಗೆ ಅಧ್ಯಯನ ನಡೆಸಲು ಕನಿಷ್ಠ ಐದು ವರ್ಷಗಳು ಮತ್ತು 5 ಬಿಲಿಯನ್ ಮಾನವ ಗಂಟೆಗಳ ಶ್ರಮದ ಅಗತ್ಯವಿದೆ. ಇಂತಹ ವಿವರಗಳನ್ನು ಎಐ ಮೂಲಕ ಸುಲಭವಾಗಿ ತಿಳಿದುಕೊಳ್ಳಬಹುದಾಗಿದ್ದು, ವೈಜ್ಞಾನಿಕ ಪ್ರಬಂಧಗಳನ್ನು ಓದಲು ಸಹ ಎಐ ಬಳಕೆಯಾಗುತ್ತಿದೆ. ಕೃತಕ ಬುದ್ದಿಮತ್ತೆ ಜಗತ್ತಿನ ವಿನ್ಯಾಸವನ್ನು ಬದಲಿಸುತ್ತಿದೆ. ಚಿಕಿತ್ಸೆ, ರೋಗ ನಿಯಂತ್ರಣಕ್ಕೆ ಕೂಡ ಇದು ಸಹಕಾರಿಯಾಗಿದೆ. ಇದರಿಂದ ಆರೋಗ್ಯ ಚಿಕಿತ್ಸಾ ದರ ಗಣನೀಯವಾಗಿ ಕಡಿಮೆಯಾಗಿದೆ. ಔಷಧವನ್ನು ಬೇರೆ ಬೇರೆ ರೋಗಗಳಿಗೆ ಬಳಸುವ ಬಗ್ಗೆಯೂ ವಿಶ್ಲೇಷಣೆ ನಡೆಸಲಿದೆ ಎಂದು ಹೇಳಿದರು.
ಕ್ಯಾನ್ಸರ್ ಟ್ರೀಟ್ ಮೆಂಟ್ ಸರ್ವೀಸ್ ಇಂಟರ್ ನ್ಯಾಷನಲ್ ಸಂಸ್ಥೆ ಅಧ್ಯಕ್ಷ ದಿಲೀಪ್ ಮಂಗ್ಸುಲಿ ಮಾತನಾಡಿ, ಆರೋಗ್ಯ ಕ್ಷೇತ್ರ ದುಬಾರಿಯಾಗಿದ್ದು, ಬಡವರಿಗೆ ಕೈಗೆಟುತ್ತಿಲ್ಲ. ತಜ್ಞರು, ರೋಗ ಪತ್ತೆ, ಅನಗತ್ಯ ಪರೀಕ್ಷೆಗಳ ಸವಾಲುಗಳು ನಮ್ಮ ಮುಂದಿವೆ. ತಡವಾಗಿ ಪರೀಕ್ಷೆ ಮಾಡಿಸಿಕೊಳ್ಳುವುದರಿಂದ ಚಿಕಿತ್ಸಾ ವೆಚ್ಚ ದುಬಾರಿಯಾಗುತ್ತಿದೆ. ಭಾರತದಲ್ಲಿ ಶೇ 50 ರಷ್ಟು ದುಡಿಮೆಯನ್ನು ಆರೋಗ್ಯ ರಕ್ಷಣೆಗಾಗಿ ವೆಚ್ಚ ಮಾಡಲಾಗುತ್ತಿದೆ. ಆದ್ದರಿಂದ ಬರುವ ದಿನಗಳಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಆಟೋಮೇಷನ್ ಹೆಚ್ಚಾಗಲಿದೆ ಎಂದು ಅಭಿಪ್ರಾಯಪಟ್ಟರು.
ಜಗತ್ತು ಕ್ಷಯರೋಗ ಮುಕ್ತವಾಗಿದೆ ಎಂದು ಹೇಳುತ್ತಿದ್ದರೂ ಇನ್ನೂ 11 ದಶಲಕ್ಷ ಕ್ಷಯರೋಗಿಗಳಿದ್ದಾರೆ. ಈ ಪೈಕಿ ಶೇ 30 ರಷ್ಟು ರೋಗಿಗಳು ಭಾರತದಲ್ಲಿರುವುದು ಕಳವಳಕಾರಿಯಾಗಿದೆ. ಇದೀಗ ಕ್ಷಯರೋಗವನ್ನು ಎಐ ಮೂಲಕ ಪತ್ತೆ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಹಿಂದೆ ಸ್ಕ್ಯಾನ್ ಮಾಡಿಸಿದ್ದರೆ ಅದನ್ನು ನೋಡುವುದು ಕಷ್ಟವಾಗುತ್ತಿತ್ತು. ಎಐ ಮೂಲಕ ಮಾಡುವ ಸಿ.ಟಿ ಸ್ಕ್ಯಾನ್ ನಲ್ಲಿ ಸ್ಪಷ್ಟತೆ ಇರುತ್ತದೆ. ಆರೋಗ್ಯ ಕ್ಷೇತ್ರದಲ್ಲಿ ಡಿಜಿಟಲ್ ದತ್ತಾಂಶ ಅತ್ಯಂತ ಅಗತ್ಯವಾಗಿದ್ದು, ಇದರ ಅನ್ವಯ ಸೀಮನ್ಸ್ ಸಂಸ್ಥೆ ಎರಡು ಶತಕೋಟಿ ರೋಗಿಗಳ ಮಾಹಿತಿ ಸಂಗ್ರಹಿಸಿದೆ. ಇದೇ ಮಾದರಿಯ ನ್ಯಾಷನಲ್ ಡಿಜಿಟಲ್ ಹೆಲ್ತ್ ಮಿಷನ್ ಜಗತ್ತಿಗೆ ಮಾದರಿ ಯೋಜನೆಯಾಗಿದೆ ಎಂದು ಹೇಳಿದರು.
ಅದಮ್ಯ ಚೇತನ ಸಂಸ್ಥೆಯ ಮ್ಯಾಜೇಜಿಂಗ್ ಟ್ರಸ್ಟಿ ತೇಜಸ್ವಿನಿ ಅನಂತ್ ಕುಮಾರ್ ಮಾತನಾಡಿ, ಮಾಜಿ ಸಚಿವ ಅನಂತ್ ಕುಮಾರ್ ಕರ್ನಾಟಕ ಸೇರಿ ದೇಶದ ಹಲವು ಕ್ಷೇತ್ರಗಳ ಬೆಳವಣಿಗೆಗೆ ಕೊಡುಗೆ ನೀಡಿದ್ಧಾರೆ. ಅದಮ್ಯ ಚೇತನದಿಂದ ಆಹಾರ ವಲಯವನ್ನು ಪ್ಲಾಸ್ಟಿಕ್ ಮುಕ್ತಗೊಳಿಸಲು ದೇಶದಾದ್ಯಂತ 20 ಪ್ಲೇಟ್ ಬ್ಯಾಂಕ್ ಗಳನ್ನು ಸ್ಥಾಪಿಸಲಾಗಿದೆ. ಅನ್ನ, ಆರೋಗ್ಯ, ಶಿಕ್ಷಣ, ಪರಿಸರಕ್ಕೆ ಒತ್ತು ನೀಡುತ್ತಿದ್ದೇವೆ. ಇದರ ಮುಂದುವರಿದ ಭಾಗವಾಗಿ ಆ.3 ರಂದು 501 ನೇ ಹಸಿರು ಭಾನುವಾರ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಅನಂತ್ ಕುಮಾರ್ ಪ್ರತಿಷ್ಠಾನದ ಅಧ್ಯಕ್ಷ ಪಿ.ವಿ. ಕೃಷ್ಣ ಭಟ್, ಸಮನ್ವಯಕಾರ ಸುಜಿತ್ ಕುಮಾರ್ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.