News

ಮತದಾನದ ಹಕ್ಕನ್ನು ಕಸಿದು ದುರುಪಯೋಗಪಡಿಸಿಕೊಳ್ಳುವ ಕೆಲಸ ಬಿಜೆಪಿಯದ್ದು: ಡಿ.ಕೆ.ಸುರೇಶ್

Share It

ಬೆಂಗಳೂರು: ಪ್ರಜಾಪ್ರಭುತ್ವ ಉಳಿಸಲು ಇರುವ ಮತದಾನದ ಹಕ್ಕನ್ನು ಕಸಿದು, ದುರುಪಯೋಗಪಡಿಸಿಕೊಳ್ಳುವ ಕೆಲಸ ಬಿಜೆಪಿ ಅಧಿಕಾರಕ್ಕೆ ಬಂದ ದಿನದಿಂದಲೇ ನಡೆಯುತ್ತಿದೆ ಎಂದು ಬಮುಲ್ ಅಧ್ಯಕ್ಷ ಡಿ.ಕೆ.ಸುರೇಶ್ ಹರಿಹಾಯ್ದರು.

ಶನಿವಾರ ಸದಾಶಿವನಗರದ ನಿವಾಸದಲ್ಲಿ ಮಾಧ್ಯಮಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಾವು ಹೋರಾಟ ಮಾಡಿದರೆ ಬಿಜೆಪಿಗೆ ಏಕೆ ನೋವಾಗುತ್ತದೆ. ಮತದಾರರ ಪಟ್ಟಿ ಪರಿಷ್ಕರಣೆಯ ಹೆಸರಲ್ಲಿ ಯಾರ್ಯಾರನ್ನೋ ಮತದಾರರನ್ನು ಪಟ್ಟಿಯಲ್ಲಿ ಸೇರಿಸಿ ಅವರು ಇಲ್ಲದೇ ಇದ್ದರೂ ಮತದಾನ ಗುರುತಿನ ಚೀಟಿಯನ್ನು ನೀಡಲಾಗಿದೆ. ಅದಕ್ಕೆ ಒಂದಷ್ಟು ಸಾಕ್ಷಿಗಳನ್ನು ಇಟ್ಟುಕೊಂಡು ಹೋರಾಟವನ್ನು ರೂಪಿಸಲಾಗಿದೆ ಎಂದರು.

ಎಲ್ಲೆಲ್ಲಿ ಮತದಾರರಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮ ನಡೆದಿದೆ ಎಂಬುದು ದೇಶದ ಜನರಿಗೆ ತಿಳಿಯಬೇಕು ಹಾಗೂ ಮತ್ತೊಮ್ಮೆ ಮತದಾರರ ಪಟ್ಟಿ ಪರಿಷ್ಕರಣೆ ನಡೆಯಬೇಕು ಎಂದು ಕಾಂಗ್ರೆಸ್ ಪಕ್ಷ ಬೆಂಗಳೂರಿನಿಂದ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಹೋರಾಟ ರೂಪಿಸಿದೆ. ಬಿಹಾರದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆ ಹೊತ್ತಿನಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಸಾಕಷ್ಟು ಅಕ್ರಮ ನಡೆದಿದೆ. ಇದರ ವಿರುದ್ಧ ರಾಹುಲ್ ಗಾಂಧಿ ಅವರು ಹೋರಾಟ ಕೈಗೊಂಡಿದ್ದಾರೆ. ಚುನಾವಣಾ ಆಯೋಗ ಬಿಜೆಪಿಯ ಕೈಗೊಂಬೆಯಂತೆ ಕೆಲಸ ಮಾಡುತ್ತಿದೆ. ಚುನಾವಣಾ ಆಯೋಗಕ್ಕೆ ಅಕ್ರಮಗಳನ್ನು ಗಮನಕ್ಕೆ ತಂದರೂ ಬಿಜೆಪಿಯ ಅಣತಿಯಂತೆ ಕೆಲಸ ಮಾಡುತ್ತಿದೆ ಎಂದರು.

ಕರ್ನಾಟಕದ ಕೆಲವೊಂದು ಕ್ಷೇತ್ರಗಳಲ್ಲಿಯೂ ಸಹ ಅಕ್ರಮ ನಡೆದಿದೆ. ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು ಹೆಚ್ಚುವರಿಯಾಗಿ ಸೇರ್ಪಡೆ ಮಾಡುವುದು, ಕೆಲವರ ಹೆಸರನ್ನು ಕೈ ಬಿಡುವುದು ಹಾಗೂ ಮತದಾನ ಪ್ರಕ್ರಿಯೆ ವೇಳೆ ಗೊಂದಲಗಳನ್ನು ಉಂಟುಮಾಡುವುದು ನಡೆದಿದೆ. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದ ವೇಳೆ ಚಿಲುಮೆ ಎನ್ನುವ ಸಂಸ್ಥೆಯನ್ನು ಬಳಸಿಕೊಂಡು ಅಕ್ರಮಗಳನ್ನು ನಡೆಸುತ್ತಿತ್ತು ಎಂದು ಆರೋಪಿಸಿದರು.


Share It

You cannot copy content of this page