ಬೆಂಗಳೂರು: ರಾಜ್ಯದ ಅಂಗನವಾಡಿಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಪೌಷ್ಠಿಕ ಆಹಾರ ಹಾಗೂ ಮೂಲಭೂತ ಸೌಕರ್ಯ ಕಲ್ಪಿಸಲು ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಹಾಗೂ ಅಪೌಷ್ಠಿಕತೆ ನಿರ್ಮೂಲನಾ ರಾಜ್ಯಮಟ್ಟದ ಕಮಿಟಿಯ ನಿಯೋಜಿತ ನ್ಯಾಯಾಧೀಶ ನ್ಯಾ. ಎ.ಎನ್. ವೇಣುಗೋಪಾಲ ಗೌಡ ತಿಳಿಸಿದರು.
ಶನಿವಾರ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ಹಮ್ಮಿಕೊಳ್ಳಲಾದ ಸಮಿತಿಯ ಸಭೆಯಲ್ಲಿ ಮಾತನಾಡಿದ ಅವರು. 2025-26ನೇ ಸಾಲಿನ ಜೂನ್ ಅಂತ್ಯಕ್ಕೆ 5 ವರ್ಷದೊಳಗಿನ 31,19,918 ಮಕ್ಕಳನ್ನು ಪೋಷಣ್ ಟ್ರ್ಯಾಕರ್ ತಂತ್ರಾಶದಲ್ಲಿ ದಾಖಲಿಸಿದ್ದು, ಈ ಮಕ್ಕಳಲ್ಲಿ 30,73,792 ಮಕ್ಕಳ ತೂಕ ಮತ್ತು ಎತ್ತರ ಅಳತೆ ಮಾಡಲಾಗಿ, ಇದರಲ್ಲಿ 90,668 ಸಾಧಾರಣ ಅಪೌಷ್ಠಿಕ ಮಕ್ಕಳು ಮತ್ತು 7187 ತೀವ್ರ ಅಪೌಷ್ಠಿಕ ಮಕ್ಕಳನ್ನು ಗುರುತಿಸಲಾಗಿದೆ. ರಾಜ್ಯದಲ್ಲಿ ಎನ್‍ಎಫ್‍ಹೆಚ್‍ಎಸ್-5 ಸರ್ವೆ ಸೂಚಕಗಳಿಗಿಂತ ಸಾಧಾರಣ ಅಪೌಷ್ಠಿಕ ಮಕ್ಕಳು ಹಾಗೂ ತೀವ್ರ ಅಪೌಷ್ಠಿಕ ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿರುವುದು ಕಂಡು ಬಂದಿದೆ ಎಂದರು.
ಸರ್ಕಾರ ಮಕ್ಕಳ ಪೌಷ್ಠಿಕಾಂಶದ ಕುರಿತು ಯಾವುದೇ ಸಮೀಕ್ಷೆ ನಡೆಸಿರುವುದಿಲ್ಲ. ಆದ್ದರಿಂದ ಅಂಗನವಾಡಿಗಳಲ್ಲಿ ಮಕ್ಕಳಿಗೆ ನೀಡುವ ಆಹಾರದ ಗುಣಮಟ್ಟ ಹಾಗೂ ಪ್ರಮಾಣದಲ್ಲಿ ಲೋಪವಿರಬಾರದು. ಪರಿಶಿಷ್ಟ ಜಾತಿ/ಪಂಗಡದವರು, ಹಾಡಿ ಹಾಗೂ ಕೊಳಗೇರಿಗಳಲ್ಲಿ ನೆಲೆಸುವವರ ಅನುಕೂಲಕ್ಕೆ ಹತ್ತಿರದಲ್ಲೇ ಅಂಗನವಾಡಿಗಳನ್ನು ಸ್ಥಾಪಿಸಲು ಕ್ರಮಕೈಗೋಳ್ಳಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಬಿ.ಬಿ.ಎಂಪಿ, ಆರೋಗ್ಯ ಇಲಾಖೆಗಳು ಸಮನ್ವಯ ಸಾಧಿಸಿ, ಮಕ್ಕಳಿಗೆ ಉತ್ತಮ ಸೌಕರ್ಯ ನೀಡಬೇಕು. ಇಲಾಖಾ ಅಧಿಕಾರಿಗಳು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು, ವಿವಿಧ ಆಯೋಗದ ಅಧ್ಯಕ್ಷರು ಆಗಿಂದಾಗ್ಗೆ ಅಂಗನವಾಡಿಗಳಿಗೆ ಭೇಟಿ ನೀಡಿ ಅಲ್ಲಿನ ಶುಚಿತ್ವ, ಆಹಾರ, ನೀರು, ವಿದ್ಯುತ್ ಪೂರೈಕೆ, ಶೌಚಾಲಯ ಹಾಗೂ ಹಾಜರಾತಿ ಬಗ್ಗೆ ಗಮನ ಹರಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕಿ ಶಮ್ಲಾ ಇಕ್ಬಾಲ್, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ನಾಗಣ್ಣಗೌಡ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.