News

ಸರ್ಕಾರಿ ಬ್ಯಾಂಕ್ ನಿವೃತ್ತ ನೌಕರರ ಪಿಂಚಣಿ ಪರಿಷ್ಕರಣೆ ಮಾಡಿ: ಸಮನ್ವಯ ಸಮಿತಿ ಒತ್ತಾಯ

Share It

ಬೆಂಗಳೂರು: ಸರ್ಕಾರಿ ಬ್ಯಾಂಕ್ ಪಿಂಚಣಿದಾರರಿಗೆ ಮತ್ತು ನಿವೃತ್ತ ವೇತನದಾರರಿಗೆ ಪಿಂಚಣಿ ಪರಿಷ್ಕರಣೆ ಮಾಡಬೇಕು ಎಂದು ಆಗ್ರಹಿಸಿ ಫ್ರೀಡಂ ಪಾರ್ಕ್ ನಲ್ಲಿ ಬ್ಯಾಂಕ್ ಪಿಂಚಣಿದಾರರು ಮತ್ತು ನಿವೃತ್ತಿ ವೇತನದಾರರ ಸಂಘಟನೆಗಳ ಸಮನ್ವಯ ಸಮಿತಿಯ ಸದಸ್ಯರು ಉಪವಾಸ ಸತ್ಯಾಗ್ರಹ ನಡೆಸಿದರು.

ಶನಿವಾರ ಫ್ರೀಡಂ ಪಾರ್ಕ ನಲ್ಲಿ ಹಮ್ಮಿಕೊಂಡಿದ್ದ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದ ಸಮನ್ವಯ ಸಮಿತಿ ಅಧ್ಯಕ್ಷ ಕೆ.ವಿ.ಆಚಾರ್ಯ, ಬ್ಯಾಂಕೇತರ ಸರಕಾರಿ ನಿವೃತ್ತರಿಗೆ ಪಿಂಚಣಿ ಪರಿಷ್ಕರಣೆಯನ್ನು ಕಾಲಕಾಲಕ್ಕೆ ಮಾಡಲಾಗುತ್ತಿದೆ. ಆದರೆ ಬ್ಯಾಂಕ್ ನಿವೃತ್ತರಿಗೆ ಸತತ 30 ವರ್ಷಗಳಿಂದ ಪರಿಷ್ಕರಣೆ ಮಾಡಿಲ್ಲ. ಕೇಂದ್ರ ಸರಕಾರ ನಮ್ಮ ಮೇಲೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವೇತನದಲ್ಲಿನ ವಿಶೇಷ ಭತ್ಯೆಯ ಜೊತೆಗೆ ಪಿಂಚಣಿಯನ್ನು ಲೆಕ್ಕ ಹಾಕಲು ಪರಿಗಣಿಸುತ್ತಿಲ್ಲ. ಈ ಕಾರಣದಿಂದ, ಪಿಂಚಣಿಯನ್ನು ಸಂಬಳದ ಶೇ.50 ರಿಂದ 30ಕ್ಕೆ ಕಡಿತಗೊಳಿಸಲಾಗಿದೆ. ಹಣಕಾಸು ಸಚಿವಾಲಯದ ಸಲಹೆಯಂತೆ ನೀಡಲಾಗಿರುವ ವೈದ್ಯಕೀಯ ವಿಮಾ ಯೋಜನೆ ಮಾರ್ಗದರ್ಶನವನ್ನು ಕಾರ್ಯಗತಗೊಳಿಸಿಲ್ಲ. ಕೇಂದ್ರದ ಹಲವು ಸಚಿವರನ್ನು ಭೇಟಿ ಮಾಡಿದ್ದರೂ, ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

2024-25ನೆ ಸಾಲಿನ ಎಕ್ಸ್ ಗ್ರೇಶಿಯಾ ಪುನರ್ ಪರಿಶೀಲನೆಯನ್ನು ಇದುವರೆಗೂ ಮಾಡಿಲ್ಲ. ವೇತನ ಒಪ್ಪಂದದ ಪ್ರಕಾರ ಖಾಸಗಿ ಬ್ಯಾಂಕ್ ಪಿಂಚಣಿದಾರರಿಗೆ ಕೊಡಬೇಕಾದ ಎಕ್ಸ್ ಗ್ರೇಶಿಯಾವನ್ನು ಖಾಸಗಿ ಬ್ಯಾಂಕ್ ಆಡಳಿತಗಳು ಕೊಡುತ್ತಿಲ್ಲ. ಈ ತಾರತಮ್ಯವನ್ನು ಕೇಂದ್ರ ಸರಕಾರ ನಿವಾರಿಸಬೇಕು. ಸಾವಿರಕ್ಕಿಂತ ಕಡಿಮೆ ಬ್ಯಾಂಕ್ ನಿವೃತ್ತರು ಈ ಹಿಂದೆ ಪಿಂಚಣಿ ಆಯ್ಕೆ ಮಾಡದ ಕಾರಣ ಪಿಂಚಣಿಯಿಂದ ವಂಚಿತರಾಗಿದ್ದಾರೆ. ಅಂತಹ ಪ್ರಕರಣಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್‌ನಲ್ಲಿ ಪರಿಗಣಿಸಲಾಗಿದೆ. ಆದರೆ ಬ್ಯಾಂಕ್ ನಿವೃತ್ತರಿಗೆ ಇದನ್ನು ವಿನಾಕಾರಣ ನಿರಾಕರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಈಗಾಗಲೇ 80 ವರ್ಷ ದಾಟಿರುವ ಪಿಂಚಣಿದಾರರಿಗೆ ಬರುವ ಅಲ್ಪಮೊತ್ತದ ಪಿಂಚಣಿಯಿಂದ ಜೀವನ ನಿರ್ವಹಣೆ ಮಾಡಲು ಕಷ್ಟವಾಗಿದೆ. ಇಲ್ಲಿ ಉಪಾವಾಸ ಮಾಡುತ್ತಿರುವ ಅನೇಕರು ಡಯಾಬಿಟೀಸ್ ಮುಂತಾದ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಎಸ್‌ಬಿಐ ಬ್ಯಾಂಕ್ ಪಿಂಚಣಿದಾರರಿಗೆ ಕೊಡಬೇಕಾದ ಮೂಲ ವೇತನದ ಶೇ.50 ರಷ್ಟು ಪಿಂಚಣಿಯನ್ನು ಪೂರ್ವಾನ್ವಯಗೊಳಿಸಿ ನಿಗದಿ ಮಾಡಬೇಕು. ಹೊಸ ಪಿಂಚಣಿ ಯೋಜನೆಯ ಏರಿಳಿತಗಳು ಮತ್ತು ಅನಿಶ್ಚಿತತೆಗಳಿಂದ ರಕ್ಷಿಸುವ ಸಲುವಾಗಿ ಸೇವೆಯಲ್ಲಿರುವ ಅಧಿಕಾರಿಗಳು ಮತ್ತು ಉದ್ಯೋಗಿಗಳಿಗೆ ಹೊಸ ಪಿಂಚಣಿ ಯೋಜನೆಯಿಂದ ಹಳೆಯ ಪಿಂಚಣಿ ಯೋಜನೆಗೆ ಬದಲಾಯಿಸಬೇಕು ಎಂದು ಒತ್ತಾಯಿಸಿದರು.

ಧರಣಿಯಲ್ಲಿ ಬ್ಯಾಂಕ್ ಪಿಂಚಣಿದಾರರು ಮತ್ತು ನಿವೃತ್ತಿ ವೇತನದಾರರ ಸಂಘಟನೆಗಳ ಸಮನ್ವಯ ಸಮಿತಿಯ ಪದಾಧಿಕಾರಿಗಳಾದ ಶಿವಪ್ರಕಾಶ್, ಎ.ಎನ್.ಕೃಷ್ಣಮೂರ್ತಿ, ಎಂ.ಆರ್.ಗೋಪಿನಾಥ್ ಸೇರಿದಂತೆ ನೂರಾರು ನಿವೃತ್ತ ಬ್ಯಾಂಕ್ ಅಧಿಕಾರಿಗಳು ಭಾಗವಹಿಸಿದ್ದರು.


Share It

You cannot copy content of this page