ಬೆಂಗಳೂರು: ಒಳ ಮೀಸಲಾತಿ ಜಾರಿ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಪ್ರೀಂ ಕೋರ್ಟಿನ ಆದೇಶವನ್ನೂ ಸರಿಯಾಗಿ ಪಾಲನೆ ಮಾಡಿದಂತೆ ಕಾಣುತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಶಾಸಕ ಬಿ.ವೈ. ವಿಜಯೇಂದ್ರ ತಿಳಿಸಿದರು.
ವಿಧಾನಸೌಧದಲ್ಲಿ ಬುಧವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜಸ್ಟಿಸ್ ಸದಾಶಿವ ಆಯೋಗದ ವರದಿ ಮತ್ತು ಇತ್ತೀಚಿನ ನ್ಯಾ.ನಾಗಮೋಹನ್ ದಾಸ್ ವರದಿಯನ್ನೂ ಸರಿಯಾಗಿ ಪಾಲಿಸಿದಂತೆ ಕಾಣುತ್ತಿಲ್ಲ. ಮುಖ್ಯವಾಗಿ ನ್ಯಾ.ನಾಗಮೋಹನ್ ದಾಸ್ ವರದಿಯಲ್ಲಿ ಎ, ಬಿ, ಸಿ, ಡಿ, ಇ ಎಂದು 5 ವರ್ಗಗಳನ್ನು ಮಾಡಿದ್ದರು. ಅದನ್ನು ಎ, ಬಿ, ಸಿ ಎಂದು ಮಾಡಿ ವರದಿಯ ಮುಖ್ಯ ಉದ್ದೇಶವನ್ನು ಸರ್ಕಾರ ಹಾಳುಗೆಡವಿದೆ ಎಂದು ಆರೋಪಿಸಿದರು.
ನರೇಂದ್ರ ಸ್ವಾಮಿ ಮೊದಲಾದವರ ಮೂಲಕ ನೀವೇ ವಿಂಗಡಣೆ ಮಾಡುವುದಾದರೆ, ಸರ್ಕಾರಕ್ಕೆ ಜಸ್ಟಿಸ್ ಸದಾಶಿವ ಮತ್ತು ನ್ಯಾ.ನಾಗಮೋಹನ್ ದಾಸ್ ಆಯೋಗವನ್ನು ಮಾಡಿ ನೂರಾರು ಕೋಟಿ ಖರ್ಚು ಮಾಡುವ ಅವಶ್ಯಕತೆ ಏನಿತ್ತು ಎಂದು ಸಿದ್ದರಾಮಯ್ಯ ಉತ್ತರಿಸಬೇಕು. ಹಿಂದೆ ಬಸವರಾಜ ಬೊಮ್ಮಾಯಿಯವರ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಅವರು ಪರಿಶಿಷ್ಟ ಜಾತಿ, ಪಂಗಡಗಳ ಕುರಿತು ಒಂದು ದಿಟ್ಟ ನಿರ್ಧಾರ ಮಾಡಿದ್ದರು. ಪರಿಶಿಷ್ಟ ಜಾತಿಗೆ ಶೇ 15 ಇದ್ದ ಮೀಸಲಾತಿಯನ್ನು ಶೇ 17ಕ್ಕೆ ಏರಿಸಿದ್ದರು. ಪರಿಶಿಷ್ಟ ಪಂಗಡಕ್ಕೆ ಶೇ 3 ಇದ್ದುದನ್ನು ಶೇ 7ಕ್ಕೆ ಏರಿಕೆ ಮಾಡಿದ್ದರು. ಆಗ ವಿಪಕ್ಷ ನಾಯಕರಾಗಿದ್ದ ಇದೇ ಸಿದ್ದರಾಮಯ್ಯನವರು, ಒಳ ಮೀಸಲಾತಿ ನಿರ್ಧಾರ ಯಾವುದೂ ಅನುಷ್ಠಾನ ಆಗಿಲ್ಲ, ಇವರು ಬೂಟಾಟಿಕೆ- ನಾಟಕ ಮಾಡುತ್ತಿದ್ದಾರೆ ಎಂದು ರಾಜ್ಯಾದ್ಯಂತ ಓಡಾಡಿ ಅಪಪ್ರಚಾರ ಮಾಡಿದ್ದರು ಎಂದು ಟೀಕಿಸಿದರು.
ಮುಖ್ಯಮಂತ್ರಿ ಪಲಾಯನ:
ಇವತ್ತು ಸಿದ್ದರಾಮಯ್ಯ ಅವರು ಯಾಕೆ ಓಡಿ ಹೋಗುವ ಕೆಲಸ ಮಾಡಿದ್ದಾರೆ. ವಿಪಕ್ಷ ನಾಯಕರು ಚರ್ಚೆ ಮಾಡಬೇಕೆಂದು ಕೋರಿದರೂ ಪಲಾಯನವಾದ ಮಾಡಿದ್ದಾರೆ. ಈ ಮೂಲಕ ಸದನಕ್ಕೆ ಅಗೌರವ ತೋರಿದ್ದಾರೆ. ಜಸ್ಟಿಸ್ ಸದಾಶಿವ ಆಯೋಗವನ್ನು ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಘೋಷಣೆ ಮಾಡಿತ್ತು, ಆದರೆ ಆ ಆಯೋಗಕ್ಕೆ ಹಣಕಾಸಿನ ನೆರವನ್ನು ಕೊಟ್ಟು ವ್ಯವಸ್ಥೆ ಮಾಡಿದ್ದು, ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರವಾಗಿತ್ತು. ಅದನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯಲು ಬಸವರಾಜ ಬೊಮ್ಮಾಯಿ ಮುಂದಾಗಿದ್ದರು ಎಂದು ಗಮನ ಸೆಳೆದರು.
ದತ್ತಾಂಶ ಇಲ್ಲದೆ ವರ್ಗೀಕರಣ:
ದತ್ತಾಂಶ ಇಟ್ಟುಕೊಂಡು ವರ್ಗೀಕರಣ ಮಾಡಬೇಕಿತ್ತು. ಒಳ ಮೀಸಲಾತಿ ಜಾರಿ ವಿಚಾರದಲ್ಲಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಿಂದುಳಿದಿರುವಿಕೆ ವಿಚಾರವನ್ನು ಇಟ್ಟುಕೊಂಡು ಒಳ ಮೀಸಲಾತಿ ಕೊಡಬೇಕೇ ಹೊರತು ಜನಸಂಖ್ಯೆ ಆಧಾರದಲ್ಲಿ ಅಲ್ಲ. ಆದ್ದರಿಂದ ಮುಖ್ಯಮಂತ್ರಿಗಳು ರಾಜ್ಯದ ಜನತೆಗೆ ಪ್ರಾಮಾಣಿಕ ಉತ್ತರ ಕೊಡಬೇಕು ಎಂದು ವಿಜಯೇಂದ್ರ ಆಗ್ರಹಿಸಿದರು.