News

ಮೇಲ್ಮನೆಯಲ್ಲೂ ಬಾಲ್ಯವಿವಾಹ, ದೇವದಾಸಿ ಪದ್ಧತಿ ನಿಷೇಧ ಕಾಯ್ದೆ ಪಾಸ್‌

Share It

ಬೆಂಗಳೂರು: ವಿಧಾನಸಭೆಯಲ್ಲಿ ಅಂಗೀಕಾರವಾಗಿದ್ದ ಬಾಲ್ಯವಿವಾಹ ನಿಷೇಧ (ತಿದ್ದುಪಡಿ) ಕಾಯ್ದೆ ಹಾಗೂ ದೇವದಾಸಿ ಪದ್ಧತಿ ನಿಷೇಧ ಕಾಯ್ದೆಗೆ ವಿಧಾನ ಪರಿಷತ್‌ನಲ್ಲೂ ಗ್ರೀನ್‌ ಸಿಗ್ನಲ್‌ ಸಿಕ್ಕಿದ್ದು, ಇದರೊಂದಿಗೆ ಸಾಮಾಜಿಕ ಪೀಡುಗಾಗಿರುವ ಬಾಲ್ಯ ವಿವಾಹ ಹಾಗೂ ದೇವದಾಸಿ ಪದ್ಧತಿ ನಿಷೇಧಕ್ಕೆ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ.

ಮುಂಗಾರು ಅಧಿವೇಶನದ ‌7ನೇ ದಿನವಾದ ಬುಧವಾರ ವಿಧಾನ ಪರಿಷತ್‌ನಲ್ಲಿ ಈ ಎರಡೂ ಕಾಯ್ದೆಗಳ ಬಗ್ಗೆ ಪಕ್ಷಾತೀತವಾಗಿ ಚರ್ಚೆ ನಡೆಸಲಾಯಿತು. ಕರ್ನಾಟಕದಲ್ಲಿ ಬಾಲ್ಯವಿವಾಹ ಎಂಬುದು ಸಾಮಾಜಿಕ ಪೀಡುಗಾಗಿದ್ದು, ಯಾವುದೇ ಸರ್ಕಾರಗಳು ಬಂದರೂ, ಕಠಿಣ ಕಾನೂನು ತಂದರೂ ಇದುವರೆಗೂ ಸಂಪೂರ್ಣ ತಡೆಯಲು ಸಾಧ್ಯವಾಗಿಲ್ಲ. ಬಾಲ್ಯವಿವಾಹವನ್ನು ಬೇರು ಸಮೇತ ಕಿತ್ತೊಗೆಯಬೇಕು. ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಬಾಲ್ಯ ವಿವಾಹ  ನಿಷೇಧ (ತಿದ್ದುಪಡಿ) ಕಾಯ್ದೆಯನ್ನು ಜಾರಿಗೆ ತರಲಾಗಿದೆ.

ಹೊಸ ಕಾಯ್ದೆಯ ನಿಯಮಗಳ ಪ್ರಕಾರ, ನಿಶ್ಚಿತಾರ್ಥ ಮಾಡಿದರೂ ಕಾನೂನು ಕ್ರಮಕೈಗೊಳ್ಳಲಾಗುವುದು. ಬಾಲ್ಯವಿವಾಹ ಪ್ರಕರಣಗಳು ಕಂಡು ಬಂದರೆ ಒಂದು ಲಕ್ಷ ರೂಪಾಯಿ ದಂಡ ಹಾಗೂ ಎರಡು ವರ್ಷ ಜೈಲು ಶಿಕ್ಷೆ ನೀಡಲಾಗುವುದು. ಜೊತೆಗೆ ಬಾಲ್ಯವಿವಾಹ ಮುಕ್ತ ಗ್ರಾಮ ಪಂಚಾಯತಿಗಳಿಗೆ 25 ಸಾವಿರ ಪ್ರೋತ್ಸಾಹ ಧನ ನೀಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ ನೀಡಿದರು.

ಬಳಿಕ ಕರ್ನಾಟಕ ದೇವದಾಸಿ ಪದ್ಧತಿ ಕಾಯ್ದೆಯನ್ನು ಅಂಗೀಕರಿಸಲಾಯಿತು. ದೇವದಾಸಿ ಪದದ ನಿರ್ದಿಷ್ಟ ವ್ಯಾಖ್ಯಾನವನ್ನು ಈ ಕಾಯ್ದೆಯಲ್ಲಿ ಮಾಡಲಾಗಿದ್ದು, ಇದರಿಂದ ನೈಜ ಫಲಾನುಭವಿಯನ್ನು ಗುರುತಿಸಲು ಹಾಗೂ ಅವರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಉನ್ನತಿಗೆ ನೆರವಾಗಲಿದೆ.


Share It

You cannot copy content of this page