ಬೆಂಗಳೂರು: ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸರ್ಕಾರದ ಎಲ್ಲಾ ರೀತಿಯ ತನಿಖಾ ಅಸ್ತ್ರಗಳನ್ನು ಬಳಸಿದರೂ ಅವರು ಎಂದೂ ಕಾನೂನು ಬಾಹಿರವಾಗಿ ನಡೆದುಕೊಂಡಿಲ್ಲ ಎನ್ನುವ ವರದಿ ಬಂದಿದೆ. ವಾಲ್ಮೀಕಿ, ಮುಡಾ ಪ್ರಕರಣಗಳು ಕೇವಲ ಮಾತಿಗಷ್ಟೇ ಹಗರಣಗಳಾಗಿವೆ ಎಂದು ಶಾಸಕರೂ ಆಗಿರುವ ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಸಮರ್ಥಿಸಿಕೊಂಡರು.
ಬೆಂಗಳೂರು ಪ್ರೆಸ್‌ಕ್ಲಬ್ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕುಟುಂಬದ ಪಾತ್ರವಿದೆ ಎಂದು ಆರೋಪಿಸಿ ಕೇಂದ್ರದ ತನಿಖಾ ಸಂಸ್ಥೆಗಳಾದ ಇಡಿ, ಸಿಬಿಐ ಎಲ್ಲ ಅಸ್ತ್ರಗಳನ್ನು ಬಳಸಲಾಗಿತ್ತು. ಆದರೆ ಯಾವುದೂ ಯಶಸ್ವಿಯಾಗಲಿಲ್ಲ ಲೋಕಾಯುಕ್ತ ತನಿಖೆ ಮತ್ತು ಜಸ್ಟಿಸ್ ದೇಸಾಯಿ ವರದಿಯಲ್ಲಿ ಕಾನೂನು ಬಾಹಿರವಾಗಿ ಅವರು ನಡೆದುಕೊಂಡಿಲ್ಲ ಎಂದು ವರದಿ ಸಲ್ಲಿಕೆಯಾಗಿದೆ. ಈ ಮೂಲಕ ನೈಜ ಸತ್ಯ ಹೊರ ಬಂದಿದ್ದು ಪ್ರಕರಣವನ್ನು ಸಮಾಪ್ತಿಗೊಳಿಸಲಾಗಿದೆ ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ಹೋಗಲಿ ಎಂದು ಕೆಲವರು ರಾಜಕೀಯವಾಗಿ ಆರೋಪ ಮಾಡುತ್ತಾರೆ. ಆದರೆ ಸಮಾಜದ ದೃಷ್ಟಿಯಿಂದ ರಾಜ್ಯಕ್ಕೆ ಬರಬೇಕಾದ ಅನುದಾನ, ಜಿಎಸ್‌ಟಿ ಮೊದಲಾದ ಅಭಿವೃದ್ಧಿ ವಿಚಾರಗಳ ಬಗ್ಗೆೆ ಯಾರು ಚರ್ಚೆ ಮಾಡುವುದಿಲ್ಲ. ರಾಜಕಾರಣದಲ್ಲಿ ಸರಿ-ತಪ್ಪು ಎಲ್ಲವನ್ನೂ ಜೀರ್ಣಿಸಿಕೊಳ್ಳುವ ಶಕ್ತಿ ಇರಬೇಕು. ಕಾನೂನು ಹೋರಾಟದ ಜೊತೆಗೆ ಜನಾಭಿಪ್ರಾಯ ರೂಪಿಸುವ ಶಕ್ತಿ ಬೆಳೆಸಿಕೊಂಡಾಗ ಮಾತ್ರ ರಾಜಕೀಯದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದರು.