ಬೆಂಗಳೂರು: ಆಳಂದ ಕ್ಷೇತ್ರದ ಮತ ಅಕ್ರಮದ ಬಗ್ಗೆ ಸಿಐಡಿ ತನಿಖೆಗೆ ಚುನಾವಣಾ ಆಯೋಗ ಸಹಕಾರ ನೀಡದಿರುವುದನ್ನು ನೋಡಿದರೆ, ಅವರೂ ಷಡ್ಯಂತ್ರದಲ್ಲಿ ಭಾಗಿಯಾಗಿದ್ದಾರೆಂಬ ಅನುಮಾನ ಸಹಜವಾಗಿ ಮೂಡುತ್ತದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.
ಗುರುವಾರ ವಿಧಾನಸೌಧದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು,ರಾಹುಲ್ ಗಾಂಧಿ ಅವರು ಈ ಬಗ್ಗೆ ನಮ್ಮ ಬಳಿ ಸಂಪೂರ್ಣ ಮಾಹಿತಿ ಪಡೆದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ್ದಾರೆ. ಕೇವಲ ಆಳಂದ ವಿಧಾನಸಭಾ ಕ್ಷೇತ್ರ ಮಾತ್ರವಲ್ಲ, ಬೇರೆ ಕ್ಷೇತ್ರಗಳಲ್ಲೂ ಈ ರೀತಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿದರು.
ಸುಮಾರು 6 ಸಾವಿರ ಮತಗಳನ್ನು ತೆಗೆದು ಹಾಕಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹಾಗೂ ಆಳಂದ ಶಾಸಕರು ದೂರು ನೀಡಿದ್ದರು. ಈ ಕುರಿತು ಪ್ರಕರಣವೂ ದಾಖಲಾಯಿತು. ಈ ಮಧ್ಯೆ ಚಿಲುಮೆ ಸಂಸ್ಥೆ ಅಕ್ರಮದ ವಿಚಾರವಾಗಿ ನಾವು ಹೋರಾಟ ಮಾಡಿ ಕೇಂದ್ರ ಚುನಾವಣಾ ಆಯೋಗವನ್ನು ಭೇಟಿ ಮಾಡಿದ್ದೆವು. ಆಳಂದ ಕ್ಷೇತ್ರದ ಪ್ರಕರಣದ ಬಗ್ಗೆ ಸಿಐಡಿ ತನಿಖೆ ಆರಂಭಿಸಿ ಚುನಾವಣಾ ಆಯೋಗದಿಂದ ಮಾಹಿತಿ ಕೇಳಿತ್ತು. ಆದರೆ ಆಯೋಗವು ತನಿಖೆಗೆ ಸಹಕಾರ ನೀಡಲಿಲ್ಲ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವಂತಹ ಪರಿಶಿಷ್ಟರು, ಅಲ್ಪಸಂಖ್ಯಾತರು, ಸಾಮಾನ್ಯ ವರ್ಗದವರು ಸೇರಿದಂತೆ ಎಲ್ಲ ಜನ ಸಾಮಾನ್ಯರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಗಡಿ ಭಾಗದಲ್ಲಿರುವ ಬೇರೆ ರಾಜ್ಯದವರ ಹೆಸರನ್ನು ಸೇರಿಸಲಾಗಿತ್ತು. ಒಟ್ಟಾರೆ ಇದೆಲ್ಲವನ್ನೂ ಪೂರ್ವ ನಿಯೋಜಿತವಾಗಿ ಮಾಡಲಾಗಿತ್ತು. ಹೀಗಾಗಿ ರಾಹುಲ್ ಗಾಂಧಿ ಅವರು ಈ ವಿಚಾರವನ್ನು ಪ್ರಸ್ತಾಪಿಸಿದ್ದು, ಅವರು ಮಾಡಿರುವ ಆರೋಪಗಳೆಲ್ಲವೂ ನಿಜ ಎಂದು ಡಿ.ಕೆ ಶಿವಕುಮಾರ್ ಸ್ಪಷ್ಟಪಡಿಸಿದರು.