ಬೆಂಗಳೂರು: ನಾಳೆಯಿಂದ ರಾಜ್ಯದ ಸಮಸ್ತ ನಾಗರಿಕರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಪ್ರಾರಂಭಿಸುತ್ತಿದೆ. ಒಬ್ಬ ಸಮೀಕ್ಷಕರಿಗೆ ಸುಮಾರು 140 ರಿಂದ 150 ಮನೆಗಳನ್ನು ಹೊಂದಿರುವ ಬ್ಲಾಕ್‌ಗಳನ್ನು ಹಂಚಿಕೆ ಮಾಡಲಾಗಿದೆ. ಸುಮಾರು 2 ಲಕ್ಷ ಶಿಕ್ಷಕರು ಹಾಗೂ ಇತರ ಸಿಬ್ಬಂದಿಗಳು ಸಮೀಕ್ಷೆ ಹಾಗೂ ಸಂಬಂಧಿತ ಕೆಲಸಗಳಲ್ಲಿ ನಿರತರಾಗಲಿದ್ದು, ಇಲಾಖಾ ಅಧಿಕಾರಿಗಳು ಮೇಲುಸ್ತುವಾರಿ ವಹಿಸಲಿದ್ದಾರೆ ಎಂದು ಆಯೋಗದ ಅಧ್ಯಕ್ಷ ಮಧುಸೂದನ್ ಆರ್ ನಾಯ್ಕ್ ತಿಳಿಸಿದರು.
ಭಾನುವಾರ ವಸಂತನಗರದ ದೇವರಾಜು ಅರಸು ಭವನದಲ್ಲಿ ಆಯೋಜಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಈಗಾಗಲೇ ಎರಡು ಕೋಟಿ ಮನೆಗಳ ಪಟ್ಟಿ ತಯಾರಿಸುವ, ಜಿಯೋ-ಟ್ಯಾಗಿಂಗ್ ಹಾಗೂ ಗಣತಿ ಬ್ಲಾಕಿನ ನಕ್ಷೆ ಮಾಡುವ ಕಾರ್ಯವನ್ನು ಮಾಡಿ ಮುಗಿಸಿದ್ದೇವೆ. ಬ್ಲಾಕ್ ನಕ್ಷೆಗಳಲ್ಲಿ ಮನೆಗಳನ್ನು ಗುರುತಿಸುವುದಲ್ಲದೇ ರಸ್ತೆಗಳನ್ನು ನಕ್ಷೆಗಳಲ್ಲಿ ನಮೂದಿಸಿದ್ದು, ಗಣತಿದಾರರು ಸಮೀಕ್ಷೆ ಮಾಡಬೇಕಾದ ಮನೆಯನ್ನು ತಲುಪಲು ಅನುಕೂಲವಾಗುವಂತೆ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.
ಒಬ್ಬ ಸಮೀಕ್ಷಕರು ಒಂದು ದಿನಕ್ಕೆ ಅಂದಾಜು 7 ರಿಂದ 8 ಮನೆಗಳನ್ನು ಸಮೀಕ್ಷೆ ಮಾಡಿದಲ್ಲಿ ರಾಜ್ಯಾದ್ಯಂತ ಇರುವ ಸುಮಾರು ಎರಡು ಕೋಟಿ ಕುಟುಂಬಗಳ ಮಾಹಿತಿಯನ್ನು 16 ದಿನಗಳಲ್ಲಿ ಮೊಬೈಲ್ ಆಪ್‌ನಲ್ಲಿ ಸಂಗ್ರಹಿಸಬಹುದಾಗಿದೆ. ಸಮೀಕ್ಷೆಯಲ್ಲಿ ಕುಟುಂಬಗಳ ದತ್ತಾಂಶಗಳನ್ನು ವಿಶೇಷ ತಂತ್ರಾಂಶ ಹೊಂದಿರುವ ಮೊಬೈಲ್ ಆಪ್ ಮೂಲಕ ಸಂಗ್ರಹಿಸಲಾಗುತ್ತದೆ ಎಂದು ಹೇಳಿದರು.
ಸಮೀಕ್ಷಾ ಕಾರ್ಯಕ್ಕಾಗಿ ಸಮೀಕ್ಷಾದಾರರಿಗೆ ಮತ್ತು ಮೇಲ್ವಿಚಾರಕರಿಗೆ ಅಗತ್ಯ ಪ್ರಮಾಣದ ತರಬೇತಿಯನ್ನು ನೀಡಲಾಗಿದೆ. ಸಮೀಕ್ಷಾ ನಮೂನೆಯಲ್ಲಿ ಒಟ್ಟು 60 ಪ್ರಶ್ನೆಗಳ ಕಾಲಂ ಗಳಿದ್ದು ಮಾಹಿತಿಯನ್ನು ಸಂಗ್ರಹಿಸಲಾಗುವುದು. ನಾಗರಿಕರು ಒಂದಕ್ಕಿಂತ ಹೆಚ್ಚು ಬಾರಿ ಸಮೀಕ್ಷೆಗೆ ಒಳಪಡುವುದನ್ನು ತಪ್ಪಿಸಲು ಆಧಾರ್ ಸಂಖ್ಯೆ ಒದಗಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಆರು ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ನಾಗರಿಕರೂ ಆಧಾರ್ ಸಂಖ್ಯೆಯನ್ನು ಸಿದ್ಧವಿಟ್ಟುಕೊಳ್ಳಲು ವಿನಂತಿಸಲಾಗಿದೆ. ಕುಟುಂಬದ ಬಳಿ ರೇಷನ್ ಕಾರ್ಡ್ ಇದ್ದಲ್ಲಿ ಅದರ ಸಂಖ್ಯೆಯನ್ನು ನಮೂದಿಸಿದರೆ ಅದರಲ್ಲಿ ಇರುವ ಮಾಹಿತಿ ಸ್ವಯಂಚಾಲಿತವಾಗಿ ಪ್ರದರ್ಶಿತವಾಗುತ್ತದೆ. ಇದರಿಂದ ಸಮಯ ಉಳಿತಾಯವಾಗುತ್ತದೆ ಮತ್ತು ಪರಿಶೀಲನೆಯ ನಂತರ ಸಮೀಕ್ಷೆ ಮುಂದುವರಿಯುತ್ತದೆ ಎಂದರು.
ಕೆಲಸದ ಮೇಲೆ ಹೊರಗೆ ಹೋಗಿರುವವರ ಮಾಹಿತಿಯನ್ನು ಪಡೆಯುವ ದೃಷ್ಠಿಯಿಂದ ಆಧಾರ್ ಪರಿಶೀಲನೆ ಮೂಲಕ ಆನ್‌ಲೈನ್‌ನಲ್ಲಿ ಸಮೀಕ್ಷೆ ನಡೆಸುವ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ ಅದರ ಮಾಹಿತಿಯನ್ನು ವೆಬ್ ಸೈಟ್ ವಿಳಾಸ https://kscbc.karnataka.gov.in ರಲ್ಲಿ ಪಡೆಯಬಹುದಾಗಿದೆ. ಹೆಚ್ಚಿನ ವಿವರಗಳು ಬೇಕಿದ್ದಲ್ಲಿ ಸಹಾಯವಾಣಿ ಸಂಖ್ಯೆ 8050770004 ಸಂಪರ್ಕಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.
ಜಾತಿಗಳನ್ನು ಸೃಷ್ಟಿಸುವ ಕೆಲಸವನ್ನು ಆಯೋಗ ಮಾಡಿರುವುದಿಲ್ಲ. ಹಿಂದಿನ ವರ್ಷಗಳಲ್ಲಿ ಅಸ್ತಿತ್ವದಲ್ಲಿ ಇವೆ ಎಂದು ಹೇಳಲಾದ ಜಾತಿಗಳನ್ನು ಸಮೀಕ್ಷಾದಾರರ ಅನುಕೂಲಕ್ಕಾಗಿ ಮೊಬೈಲ್ ಆಪ್‌ನ ಡ್ರಾಪ್ ಡೌನ್‌ನಲ್ಲಿ ಪಟ್ಟಿಮಾಡಿ ಒದಗಿಸಲಾಗಿದೆ. ಇದು ಸಮೀಕ್ಷಾದಾರರ ಆಂತರಿಕ ಬಳಕೆಗೆ ಮಾತ್ರ ಇರುತ್ತದೆ. ಇದು ಸಾರ್ವಜನಿಕ ದಾಖಲೆ ಅಲ್ಲ, ಈ ಪಟ್ಟಿಗೆ ಯಾವುದೇ ಕಾನೂನು ಮಾನ್ಯತೆಯೂ ಇಲ್ಲ. ಜಾತಿಗಳನ್ನು ಸುಲಭವಾಗಿ ಗುರುತಿಸುವ ಉದ್ದೇಶದಿಂದ ಉಪಯೋಗಿಸಲಾಗುತ್ತದೆಯೇ ಹೊರತು ಯಾರೂ ಅದನ್ನು ಬೇರೆ ಉದ್ದೇಶಕ್ಕೆ ಬಳಸಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಸಮೀಕ್ಷೆ ಮುಗಿದ ನಂತರ ಸಂಗ್ರಹಿಸಲಾದ ಮಾಹಿತಿಗಳನ್ನು ಆಯೋಗವು ವಿಶ್ಲೇಷಿಸಲಿದೆ. ವೈಜ್ಞಾನಿಕ ವಿಶ್ಲೇಷಣೆಯ ನಂತರ ಮಾತ್ರ ವಿವಿಧ ಜಾತಿ ಜನಾಂಗಗಳಿಗೆ ಒದಗಿಸಬಹುದಾದ ಅನುಕೂಲತೆಗಳ ಬಗ್ಗೆ ಶಿಫಾರಸ್ಸಿನೊಂದಿಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಲಿದೆ ಎಂದರು.