ಬೆಂಗಳೂರು: ಕೆ.ಇ.ಆರ್.ಸಿ ಮಾದರಿಯಲ್ಲಿ ಕರ್ನಾಟಕ ಮೋಟಾರು ವಾಹನ ನಿಯಮಗಳು, 1989 ರಡಿಯಲ್ಲಿ ರಾಜ್ಯ ಸರ್ಕಾರ ಸಾರ್ವಜನಿಕ ಸಾರಿಗೆ ದರ ನಿಯಂತ್ರಣ ಸಮಿತಿಯನ್ನು ರಚಿಸಿ ಆದೇಶಿಸಿದೆ. ಈ ಸಮಿತಿಯು ಅಧ್ಯಕ್ಷರು ಮತ್ತು ಇಬ್ಬರು ಸದಸ್ಯರನ್ನು ಒಳಗೊಂಡಿರಲಿದೆ.
ಅಧ್ಯಕ್ಷರು ಸರ್ಕಾರದ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಥವಾ ರಾಜ್ಯ ಹೈಕೋರ್ಟ್‍ನ ನಿವೃತ್ತ ನ್ಯಾಯಾಧೀಶರಾಗಿರಲಿದ್ದಾರೆ. ಇಬ್ಬರು ಸದಸ್ಯರಲ್ಲಿ ಒಬ್ಬರು ಕಾನೂನಿನ ಶೈಕ್ಷಣಿಕ ಅರ್ಹತೆಯನ್ನು ಹೊಂದಿರುವ ನಿವೃತ್ತ ಪ್ರಧಾನ ಕಾರ್ಯದರ್ಶಿ ಅಥವಾ ಸರ್ಕಾರದ ಕಾರ್ಯದರ್ಶಿಯಾಗಿರಲಿದ್ದಾರೆ. ಇನ್ನೊಬ್ಬ ಸದಸ್ಯರು ಕೈಗಾರಿಕಾ ತಜ್ಞರು ಅಥವಾ ಹಣಕಾಸು ತಜ್ಞರಾಗಿರಲಿದ್ದಾರೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿರಲಿದ್ದಾರೆ.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ವೈಜ್ಞಾನಿಕವಾಗಿ ಪ್ರಯಾಣ ದರ ಹೆಚ್ಚಿಸುವ ಸಲುವಾಗಿ ಈ ಹಿಂದೆ ಯಾವುದೇ ಸಮಿತಿಗಳು ರಚನೆಯಾಗಿರಲಿಲ್ಲ. ಕಾಲಕಾಲಕ್ಕೆ ಹೆಚ್ಚಳವಾಗುವ ಡೀಸೆಲ್ ಬೆಲೆ ಮತ್ತು ಇತರೆ ವೆಚ್ಚವನ್ನು ಸರಿದೂಗಿಸಲು ಇಂತಿಷ್ಟು ದರ ಪರಿಷ್ಕರಣೆ ಅವಶ್ಯಕವಾಗಿದೆ. ಇಲ್ಲವಾದಲ್ಲಿ ಸಾರಿಗೆ ಸಂಸ್ಥೆಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ನಲುಗಿ, ಸದೃಢತೆಯಿಂದ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ ಎನ್ನುವುದನ್ನು ಮನಗಂಡು ಕೆ.ಇ.ಆರ್.ಸಿ ಮಾದರಿಯಲ್ಲಿ ಸಾರ್ವಜನಿಕ ಸಾರಿಗೆ ದರ ನಿಯಂತ್ರಣ ಸಮಿತಿಯನ್ನು ರಚಿಸಿ ಆದೇಶಿಸಲಾಗಿದೆ.
ಸಮಿತಿಯು ರಸ್ತೆ ಸಾರಿಗೆ ನಿಗಮಗಳ ಆರ್ಥಿಕ ಪರಿಸ್ಥಿತಿಗಳನ್ನು ಅಧ್ಯಯನ ಮಾಡಲಿದ್ದು, ಕಾಲಕಾಲಕ್ಕೆ ವಿವಿಧ ದರಗಳ ಪರಿಷ್ಕರಣೆ ಮಾಡಲು ಆಯಾ ರಸ್ತೆ ಸಾರಿಗೆ ನಿಗಮಕ್ಕೆ ನಿರ್ದೇಶನ ನೀಡಲಿದೆ. ಹಣಕಾಸು ಮತ್ತು ಕಾರ್ಯಾಚರಣೆಯನ್ನು ಸುಧಾರಿಸಲು ದರಗಳ ಮೇಲೆ ವಿವಿಧ ಸರ್ ಚಾರ್ಜ್ ಗಳು, ಶುಲ್ಕಗಳನ್ನು ವಿಧಿಸಲು ಸಮಿತಿಯು ಸೂಚಿಸಬಹುದಾಗಿದೆ.