News

ಮಹಾತ್ಮ ಗಾಂಧೀಜಿ ಅವರ ದೂರ ದೃಷ್ಟಿ ಕುವೆಂಪು ಅವರಲ್ಲಿತ್ತು: ಡಾ.ಎಲ್. ಹನುಮಂತಯ್ಯ

Share It

ಬೆಂಗಳೂರು: ಮಹಾತ್ಮ ಗಾಂಧೀಜಿ ಅವರ ದೂರ ದೃಷ್ಟಿಯೇ ಕುವೆಂಪು ಅವರಲ್ಲಿತ್ತು. ಹಾಗಾಗಿ ಅವರ ವಿಚಾರ ಧಾರೆಗಳನ್ನು ಪ್ರಸ್ತುತ ಹೆಚ್ಚು ಪ್ರಚಾರ ಮಾಡಬೇಕಿದೆ ಎಂದು ಸಂಸ್ಕೃತಿ ಚಿಂತಕ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಡಾ.ಎಲ್. ಹನುಮಂತಯ್ಯ ಅಭಿಪ್ರಾಯಪಟ್ಟರು.

ಭಾನುವಾರ ಅಖಿಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಆಯೋಜಿಸಿದ್ದ `ಕುವೆಂಪು ವಿಚಾರ ಸಂಕಿರಣ’- ವಿಶ್ವಚೇತನ ಪ್ರಶಸ್ತಿ, ಕನ್ನಡ ಪ್ರತಿಭಾ ಪುರಸ್ಕಾರ ಹಾಗೂ ಗೀತಗಾಯನ ಸಮಾರಂಭದಲ್ಲಿ ಮಾತನಾಡಿದ ಅವರು, ಕುವೆಂಪು ಬರವಣಿಗೆ ಪ್ರಾರಂಭಿಸಿದಾಗ ನವೋದಯದ ಕಾಲವಾಗಿತ್ತು. ಆಗ ಪ್ರಕೃತಿಯ ಸೊಬಗಿನ ಬಗೆಗೆ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಅಲೆ ಸೃಷ್ಟಿಸಿದವರು ಕುವೆಂಪು ಅವರಾಗಿದ್ದರು. ಇದರ ಜತೆಗೆ ಆ ಕಾಲಘಟ್ಟದಲ್ಲೇ ಜಲಗಾರನ ಕುರಿತು ಒಂದು ನಾಟಕ ಬರೆದು ಹೊಸ ಚಿಂತನೆಗೆ ನಾಂದಿಯಾಡಿದರು ಎಂದು ವಿವರಿಸಿದರು.

ಸ್ವಾತಂತ್ರ ಲಭಿಸಿದ 3 ದಶಕಗಳಲ್ಲೇ ಕುವೆಂಪು ಅವರು, ದೇಶದಲ್ಲಿನ ಶಿಕ್ಷಣ, ರಾಜಕೀಯ ಹಾಗೂ ಆರ್ಥಿಕ ಭ್ರಷ್ಟಾಚಾರ ಕಂಡು ನಲುಗಿ, ಈ ಕುರಿತು ಕಾಲೇಜೊಂದರ ಘಟಿಕೋತ್ಸವದಲ್ಲಿ ಹಣವಿಲ್ಲದೆ ದೇಶದಲ್ಲಿ ಏನು ನಡಿಯುವುದಿಲ್ಲ. ಜಾತಿ, ಮತ, ಹೆಂಡ, ದುಡ್ಡು ಇವೇ ವೋಟರ್‌ಗಳಾಗಿವೆ. ಮನಷ್ಯ ಮತದಾರನಾಗಿಲ್ಲ ಎಂಬ ವಿಚಾರವನ್ನು ತಿಳಿಸಿ ಹೊಸ ಚಿಂತನೆಯ ಅಲೆ ಎಬ್ಬಿಸಿದ್ದರು. ಕುವೆಂಪು ಅವರು ಮಾನವೀಯತೆ ನಿಲುವು ಹೊಂದಿ, ಎಲ್ಲ ಜಾತಿ ಹಾಗೂ ಧರ್ಮದ ಮೆರವಣಿಗೆ ಮತ್ತು ಮೌಡ್ಯವನ್ನು ವಿರೋಧಿಸಿ, ಸಮಾಜದಲ್ಲಿ ವಿಶ್ವಮಾನವ ಸಂದೇಶ ಸಾರಿದರು. ಆದರೂ ಪ್ರಸ್ತುತ ಆಧುನಿಕ ಸಮಾಜ ಹಿಮ್ಮುಖವಾಗಿ ಚಲಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಹೊಸ ಚಿಂತನೆ ಮೂಡಿಸುವ ಕೆಲಸ ಮಾಡದಿದ್ದರೇ ಅದು ಸಾಹಿತ್ಯವೆ ಅಲ್ಲ. ಹೊಸ ಚಿಂತನೆಗಳು ವೈಜ್ಞಾನಿಕ ಹಾಗೂ ವೈಚಾರಿಕವಾಗಿರಬೇಕು. ಅವುಗಳನ್ನು ಪಾಲನೆ ಮಾಡಬೇಕು. ಈ ದೃಷ್ಟಿಯಲ್ಲಿ ಕುವೆಂಪು ಅವರಿಗಿಂತ ಕ್ರಾಂತಿಕಾರಿ ಕವಿ ಮತ್ತೊಬ್ಬರಿಲ್ಲ. ಹೊಸ ಪೀಳಿಗೆಗೆ ಕುವೆಂಪು ನಾವಿಕನಾಗಿ ನಿಲ್ಲಬೇಕು. ಅವರೆ ಯುವ ಸಮುದಾಯಕ್ಕೆ ಮಾರ್ಗದರ್ಶಕರಾಗಬೇಕು. ಕುವೆಂಪು ಅವರ ಆಯ್ದ ಕೆಲವು ಕೃತಿಗಳನ್ನು ಪ್ರತಿಯೊಬ್ಬರೂ ತಮ್ಮ ಮನೆಯ ಮಕ್ಕಳಿಗೆ ಓದಲು ನೀಡಬೇಕು. ಈ ಮೂಲಕ ಕುವೆಂಪು ಅವರ ಸಾಹಿತ್ಯದ ಮರುಚಿಂತನೆ ಮತ್ತು ಮರು ಓದು ಆಗಬೇಕು ಎಂದು ಹೇಳಿದರು.

ಹಿರಿಯ ಸಾಹಿತಿ ಹಂಪ ನಾಗರಾಜಯ್ಯ ಮಾತನಾಡಿ, ಕುವೆಂಪು ಅವರು ಕನ್ನಡ ಸಾಹಿತ್ಯದಲ್ಲಿ ಹೊಸ ಅಲೆ ಸೃಷ್ಟಿಸಿದ್ದಾರೆ. ಮಕ್ಕಳಿಗೆ ಬೇಕಾಗುವ ನಾಟಕವನ್ನು ಬರೆಯುವ ಮೂಲಕ ಮಕ್ಕಳ ಸಾಹಿತ್ಯಕ್ಕೂ ಕೊಡುಗೆ ನೀಡಿದ್ದಾರೆ. ಗಿಡ-ಮರಗಳ ಬಗ್ಗೆಯೂ ಬರೆದು ಸಾಹಿತ್ಯದ ಶ್ರೀಮಂತಿಕೆ ಹೆಚ್ಚಿಸಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನಿವೃತ್ತ ವಿಜ್ಞಾನಿ ಡಾ.ಬಿ. ನಾರಾಯಣಸ್ವಾಮಿ ಅವರಿಗೆ ವಿಶ್ವಚೇತನ ಪ್ರಶಸ್ತಿ ನೀಡಲಾಯಿತು. ಈ ವೇಳೆ ಕರ್ನಾಟಕ ಜಾನಪದ ಪರಿಷತ್ತಿನ ಹಿ.ಚಿ. ಬೋರಲಿಂಗಯ್ಯ ಮತ್ತಿತರರಿದ್ದರು.


Share It

You cannot copy content of this page