Column

ವಿಭಿನ್ನ ದೃಷ್ಟಿಕೋನದ ಸಾಹಿತಿ ಭೈರಪ್ಪನವರಿಗೊಂದು ನುಡಿ ನಮನ

Share It

ಲೇಖನ: ರೇಣುಕಾ ದೇಸಾಯಿ,ನಿವೃತ್ತ ಅಧಿಕಾರಿ ಭಾರತೀಯ ಸ್ಟೇಟ್ ಬ್ಯಾಂಕ್, 9535147455

ನಮ್ಮ ದೇಶದುದ್ದಗಲಕ್ಕೂ, ರಾಮಾಯಣ, ಮಹಾಭಾರತ ಗ್ರಂಥಗಳಿಗೆ ಎಷ್ಟೊಂದು ವ್ಯಾಖ್ಯಾನಗಳು!! ವಿಮರ್ಶೆಗಳು!! ಒಂದೊಂದು ಪಾತ್ರಕ್ಕೂ ಲಕ್ಷಾಂತರ ಬರಹಗಳು. ಒಂದು ಮಾತಿನಲ್ಲಿ ಹೇಳುವುದಾದರೆ ಈ ಭೂಮಂಡಲವನ್ನು ಹೊತ್ತು ನಿಂತ ಆದಿಶೇಷನು(ಇದೊಂದು ನಂಬಿಕೆ) ಕೂಡ ಈ ಬರಹಗಳ ಭಾರಕ್ಕೆ ತಿಣುಕಿದನು ಫಣಿರಾಜ ಎನ್ನುವ ಮಾತಿದೆ. ಇನ್ನು ಇವುಗಳ ಬಗೆಗೆ, ಇದೆಲ್ಲಕ್ಕಿಂತ ವಿಭಿನ್ನ ದೃಷ್ಟಿಕೋನ ಭೈರಪ್ಪನವರದು ಎಂದರೆ ತಪ್ಪಾಗಲಾರದು.

ರಾಮಾಯಣ ಮಹಾಭಾರತವನ್ನು ಧರ್ಮದ ದೃಷ್ಟಿಯಿಂದ, ಪುರಾಣದಂತೆ, ದಂತಕಥೆಯಂತೆ ಮಾತ್ರ ನೋಡದೆ, ಅವುಗಳನ್ನು ಇತಿಹಾಸವೆನ್ನುವಂತೆ, ಒಂದು ದೇಶದ ನಾಗರಿಕತೆಯ ನೆನಪುಗಳಂತೆ ಸೃಷ್ಟಿಸಿದ್ದು, ನನ್ನ ಓದಿಗೊಂದು ನವ ನವೀನ ದೃಷ್ಟಿಕೋನವಾಗಿದೆ. ಇವೆರಡು ಧರ್ಮಗ್ರಂಥಗಳನ್ನು ತಮ್ಮ ಕಾದಂಬರಿಗಳಾದ ‘ಪರ್ವ’ ಮತ್ತು ‘ಉತ್ತರಕಾಂಡ’ದಲ್ಲಿ ಅವರು ನೋಡಿರುವ ಕ್ರಮವೇ ಹೊಸತು ಎನ್ನಿಸುತ್ತದೆ. ಉತ್ತರಕಾಂಡದ ಸೀತೆ ಇಲ್ಲಿ ಒಬ್ಬ ಸಾಮಾನ್ಯ ಹೆಣ್ಣುಮಗಳು, ಗಂಡನಿಂದ ಪರಿತ್ಯಕ್ತೆಯಾಗಿ, ಅವಳಿ ಮಕ್ಕಳಿಗೆ ಜನ್ಮ ನೀಡಿ, ಯಾವ ಮತ್ತು ಯಾರಿಂದಲೂ ಸಹಾಯವಿಲ್ಲದೆ ರೈತಾಪಿ ಹೆಣ್ಣುಮಕ್ಕಳಂತೆ ಹೊಲ ಊಳಿ ಬದುಕು ಸಾಗಿಸುತ್ತಾ ಎರಡು ಮಕ್ಕಳನ್ನು ಸಾಕಿಸಲಹುವ ಚಿತ್ರಣ ತುಂಬಾ ಆಪ್ತವಾಗಿದೆ. ನಮ್ಮ ಕಲ್ಪನೆಯಲ್ಲಿ ಸೀತೆ ನಮ್ಮಂತೆ ಕಾಣುವ, ಸಾಮಾನ್ಯ ಹೆಣ್ಣಾಗಿ, ಕಡು ಬಡತನದ ಬವಣೆ ಪಡುವ ಸ್ತ್ರೀಯಾಗಿ ಕಾಣುತ್ತಾಳೆ. ಆ ಪಾತ್ರದಲ್ಲಿ ದೈವತ್ವವು ದೂರ, ಒಂದು ಸಾಮ್ರಾಜ್ಯದ ರಾಣಿಯಾಗಿ, ಸಾಮಾನ್ಯ ಹೆಣ್ಣುಮಕ್ಕಳೊಂದಿಗೆ ಸಿರಿತನದ ಅಂತರವಾಗಲಿ ನಮಗೆ ಅನ್ನಿಸೋದೇ ಇಲ್ಲ ಎನ್ನುವಂತಿದೆ.

ವಿಶಾಲ ಕ್ಯಾನ್ವಾಸಿನ ಕಥೆಯನ್ನು ತಾರ್ಕಿಕವಾಗಿ ಗ್ರಹಿಸಿ ಮತ್ತೊಂದು ರೂಪಿನಲ್ಲಿ ಕಲಾತ್ಮಕವಾಗಿ ರೂಪಿಸುವದು ಸಾಮಾನ್ಯ ಮತಿಗಳಿಗೆ ನಿಲುಕುವ ಮಾತಲ್ಲ. ಆದರೆ ಈ ಕಲಾತ್ಮಕತೆ, ರಸಸೃಷ್ಟಿ ಭೈರಪ್ಪನವರ ಪ್ರತಿ ಕಾದಂಬರಿಯಲ್ಲೂ ನಾವು ಕಂಡಿದ್ದೇವೆ. ಹೀಗಾಗಿ ಇನ್ನೂ ಹಲವಾರು ಶತಮಾನಗಳ ಕಾಲ ಒಂದು ಸಂವಾದವಾಗಿ, ಜಿಜ್ಞಾಸೆಯಾಗಿ ಭೈರಪ್ಪ ಇದ್ದೇ ಇರುತ್ತಾರೆ. ಎಲ್ಲಾ ವಾದವಿವಾದಗಳನ್ನು ಅತ್ಯಂತ ಸಹನೆಯಿಂದ, ದೃಢತೆಯಿಂದ, ಧೈರ್ಯದಿಂದ ಎದುರಿಸಿದವರು ಭೈರಪ್ಪನವರು. ತನ್ನ ದೇಶದ ಸಾಹಿತ್ಯ ಸಂಸ್ಕೃತಿಯನ್ನು ಉದ್ದೀಪನಗೊಳಿಸಬೇಕು ಎನ್ನುವ ಪ್ರತಿಪಾದಕರು, ಈ ವಿಚಾರವನ್ನು ಬಲವಾಗಿ ತಮ್ಮ ಬರವಣಿಗೆಯಲ್ಲಿ ಭೈರಪ್ಪನವರು ಪ್ರತಿಪಾದಿಸಿದ್ದರು. ಕನ್ನಡ ಸಾಹಿತ್ಯಕ್ಕೆ ವಿಶ್ವ ಮಾನ್ಯತೆ ತಂದುಕೊಟ್ಟ ಲೇಖಕರು, ಅವರಿಗೆ ಬರಹವೆಂದರೆ ಸಂಶೋಧನೆ, ತತ್ವಶಾಸ್ತ್ರದ ಸತ್ಯಶೋಧನೆಯಾಗಿದ್ದು, ಹಿಂದುತ್ವದ ಪ್ರತಿಪಾದಕರಾಗಿದ್ದವರು. ಹಿಂದುತ್ವದ ತಳಹದಿಯಲ್ಲಿ ರಾಷ್ಟ್ರೀಯವಾದದ ನೆಲೆಯಲ್ಲಿ ರಚಿಸಿದ ಅವರ ಕಾದಂಬರಿಗಳು ಓದುಗರ ಮನಸ್ಸನ್ನು ಬಲವಾಗಿ ಪ್ರಭಾವಿಸಿದ್ದವು. ಹೀಗಾಗಿ ಕನ್ನಡ ಸಾಹಿತ್ಯಕ್ಕೆ ವಿಶ್ವಮಾನ್ಯತೆ ತಂದುಕೊಟ್ಟ ಲೇಖಕರು ಎಂದರೆ ಅತಿಶಯೋಕ್ತಿ ಏನಲ್ಲ.

ಅವರು ಪ್ರಚಾರಪ್ರಿಯರಲ್ಲ, ಪ್ರಶಂಸೆ ಬಂದಾಗ ಏರಲಿಲ್ಲ, ಕಷ್ಟಗಳು ಬಂದಾಗ ಕುಗ್ಗಲಿಲ್ಲ. ನೇರನುಡಿಯ ಪ್ರಾಮಾಣಿಕ ವ್ಯಕ್ತಿ, ಯಾರನ್ನೂ ಮೆಚ್ಚಿಸುವ ವ್ಯಕ್ತಿ ಅವರಲ್ಲ. ರಾಷ್ಟ್ರದೆಲ್ಲೆಡೆಯ ಭಾಷೆಗಳಿಗೆ, ಅಂತರಾಷ್ಟ್ರೀಯ ಭಾಷೆಗಳಲ್ಲೂ ಅವರ ಕೃತಿಗಳು ಭಾಷಾಂತರಗೊಂಡು ಪ್ರಪಂಚದಲ್ಲಿ ಅವರಿಗೆ ಅಭಿಮಾನಿ ಓದುಗರಿದ್ದಿದ್ದು ಕನ್ನಡತಿಯಾದ ನನಗೆ ಒಂದು ಹೆಮ್ಮೆಯ ವಿಷಯವಾಗಿದೆ. ಅವರ ಬಾಲ್ಯ ಮತ್ತು ಪ್ರೌಢಾವಸ್ಥೆಯಲ್ಲಿ ತುಂಬಾ ಆರ್ಥಿಕ, ಕೌಟುಂಬಿಕ ಕಷ್ಟಗಳನ್ನು ಎದುರಿಸಿದ್ದರು, ಹೀಗಾಗಿ ಬಡವರ ಬಗೆಗಿನ ಅವರ ಅಂತಃಕರಣ ಅನನ್ಯವಾಗಿದ್ದು, ಅವರ ಈ ಸ್ವಭಾವವನ್ನು ಎಲ್ಲರ ಬಗೆಗೆಗೂ ಜೀವನದುದ್ದಕ್ಕೂ ತೋರಿದ ಆದರ್ಶ ವ್ಯಕ್ತಿಯಾಗಿದ್ದರು. ಬರೆದಂತೆ ಬದುಕಿದವರು, ಬದುಕಿದಂತೆ ಬರೆದವರು ಅವರಾಗಿದ್ದರು.

ಅವರ ಅಭಿಮಾನಿ ಓದುಗರು ಹೇಳುವ ಮಾತೊಂದು ಇದೆ, ‘ಉತ್ತರ ಕಾಂಡ’ ಅವರ ಕೊನೆಯ ಕೃತಿಯಲ್ಲ, ಇಳಿವಯಸ್ಸಿನಲ್ಲಿ ಅವರ ಹುಟ್ಟೂರಾದ ಸಂತೆಶಿವರಕ್ಕೆ ಭಗೀರಥ ಪ್ರಯತ್ನ ಮಾಡಿ ನೀರಿನ ವ್ಯವಸ್ಥೆ ಮಾಡಿಸಿದ್ದು ಒಂದು ಅವರ ಅಪೂರ್ವ ಕೃತಿಯಾಗಿತ್ತು, ನಂತರ ತಮ್ಮ ಇಹಲೋಕ ಯಾತ್ರೆ ಮುಗಿಸುವ ಕೊನೆಯ ದಿನಗಳಲ್ಲಿ ಹಠದಿಂದ ನಿರ್ಮಿಸಿದ ಅವರ ಪ್ರತಿಷ್ಠಾನ ಮತ್ತು ಅದರಲ್ಲಿ ತಮ್ಮ ಜೀವಿತಾವಧಿಯಲ್ಲಿ ಉಳಿಸಿದ ಗಳಿಕೆ ಮುಂದೆ ಬರುವ ರಾಯಲ್ಟಿ ಹಣವನ್ನೂ ಸಮಾಜಕ್ಕೆ, ಬಡಮಕ್ಕಳ ವಿಧ್ಯಾಭ್ಯಾಸಕ್ಕೆ , ಬಡವರ ಆರೋಗ್ಯ, ಔಷಧಿಗಳ ವೆಚ್ಚಕ್ಕೆ ವಿನಿಯೋಗಿಸುವಂತೆ ಮಾಡಿದ್ದು, ಹೋಗುವಾಗ ತನ್ನದು ಎನ್ನುವ ಒಂದು ಕಾಸೂ ಇರಬಾರದು, ಮತ್ತು ಪ್ರತಿಷ್ಠಾನದಲ್ಲಿ ತನ್ನ ಕುಟುಂಬಸ್ಥರು ಯಾರೂ ಇರದಂತೆ, ನೋಡಿ ಸ್ಥಾಪಿಸಿರುವುದು ಕೂಡ ಅವರ ಕೊನೆಯ ಅಮೂಲ್ಯ ಕೃತಿಯಾಗಿದೆ.

ಅವರ ವೈಯಕ್ತಿಕ ಜೀವನವನ್ನು ಗಮನಿಸಿದಾಗ ನಮ್ಮ ಅನುಭವಕ್ಕೆ ಬರುವುದು, ಬದುಕಿನಲ್ಲಿ ನಮ್ಮನ್ನು ಬೆಳೆಸುವವರಿಗೆ (ಸಮಾಜ ಅವರನ್ನು ಬೆಳೆಸಿತ್ತು) ಕೃತಜ್ಞರಾಗಿರಿ, ಪರಸ್ಪರ ಗೌರವ ಪ್ರೀತಿಯಿರಲಿ, ನಿಮ್ಮ ಮಾತು, ಬರವಣಿಗೆ ಕೇಳುವವರ ಪ್ರಜ್ಞೆಗೆ ತಾಕುವಂತೆ ಇರಬೇಕು, ಸರಳತೆಯೇ ಶಕ್ತಿ, ತೃಪ್ತಿಯಿಂದಷ್ಟೇ ಸಂತೋಷವು ಹೊರಹೊಮ್ಮುತ್ತದೆ, ಸಂತೋಷವು ಖರೀದಿಯಲ್ಲಿಲ್ಲ ಎನ್ನುವ ಮೌಲ್ಯಯುತ ವಿಚಾರಗಳನ್ನು ತಮ್ಮ ಬರವಣಿಗೆ ಮತ್ತು ತಮ್ಮ ಜೀವನದುದ್ದಕ್ಕೂ ಪ್ರತಿಪಾದಿಸಿ ನಮ್ಮೆಲ್ಲರ ಮನಸ್ಸನ್ನು ಗೆದ್ದ ಆ ಹಿರಿಯ ಜೀವಕ್ಕೆ ಈ ಲೇಖನ ಅಶ್ರುದರ್ಪಣವಾಗಿದೆ.


Share It

You cannot copy content of this page